ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮಗಾರಿ ಕಳಪೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ’

ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ
Last Updated 15 ಆಗಸ್ಟ್ 2019, 15:36 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಕಳಪೆ, ವಿಳಂಬವಾದಲ್ಲಿ ಸ್ಮಾರ್ಟ್‌ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದಿಯಾಗಿ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ₹5.69 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಬಿನ್ನಿ ಕಂಪನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ (ಹರ್ಡೇಕರ್ ಮಂಜಪ್ಪ) ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಈವರೆಗೆ ಆಗಿದ್ದು ಆಯಿತು. ಮುಂದಿನ ಯಾವುದೇ ಕಾಮಗಾರಿ ಕಳಪೆಯಾದಲ್ಲಿ ಎಂಜಿನಿಯರ್, ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದುಎಚ್ಚರಿಸಿದರು.

ಬಿನ್ನಿ ಕಂಪನಿ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಮುಗಿಯಬೇಕು. ಅದಕ್ಕಿಂತಲೂ ಮುಂಚೆ 4 ತಿಂಗಳಲ್ಲಿ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳು ಹಾಗೂಗುತ್ತಿಗೆದಾರರಿಗೆ ಸೂಚಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ‘ಸ್ಮಾರ್ಟ್ ಸಿಟಿ ಯೋಜನೆಯನ್ವಯ ಎಲ್ಲಾ ಕಾಮಗಾರಿಗಳು ಅರ್ಧಂಬರ್ಧವಾಗಿವೆ. ಚೌಕಿಪೇಟೆಯಲ್ಲಿ 2 ವರ್ಷದಿಂದಲೂ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಟೈಲ್ಸ್ ಸಹ ಹಾಕಿಲ್ಲ. ಚರಂಡಿ ಕಿತ್ತು ಹಾಕಿ ಗುಂಡಿ ಮಾಡಿ ಹೋಗುತ್ತಾರೆ. ಅದರಲ್ಲಿ ಬಿದ್ದು ಸಾಯುವವರು ನಾವು, ಸ್ಮಾರ್ಟ್‌ ಸಿಟಿ ಯೋಜನೆ ಕೆಲಸವೇ ಬೇಡ ಎಂದು ಜನರು ಹೇಳುವಂತಾಗಿದೆ’ ಎಂದರು.

‘ಇ–ಟೆಂಡರ್‌ನಿಂದಲೇ ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಎಲ್ಲೋ ಇದ್ದವರು ಇ–ಟೆಂಡರ್ ಹಾಕಿ ಅರ್ಧಂಬರ್ಧ ಕೆಲಸ ಮಾಡಿ ಬಿಟ್ಟು ಹೋಗುತ್ತಾರೆ. ಆದ್ದರಿಂದ ಈ ವ್ಯವಸ್ಥೆ
ಯನ್ನು ರದ್ದುಪಡಿಸಬೇಕು’
ಎಂದರು.

ಮಾಜಿ ಉಪಮೇಯರ್ ಮಂಜಮ್ಮ ಹನುಮಂತಪ್ಪ, ನಗರಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್‌, ವೈ. ಮಲ್ಲೇಶ್ ಇದ್ದರು.

‘ಸಿದ್ದೇಶ್ವರ–ಶಾಮನೂರು ಮಾತಿನ ಜಗಳ್‌ ಬಂಧಿ’

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವೇದಿಕೆ ಹಂಚಿಕೊಂಡಿದ್ದು, ಇವರಿಬ್ಬರ ನಡುವೆ ಮಾತಿನ ಜಗಳ್‌ಬಂದಿ ನಡೆಯಿತು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಆ ಸಭೆಯಲ್ಲಿ ನೆರೆಪೀಡಿತ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಾವುದೇ ಅನುದಾನದ ಘೋಷಣೆ ಆಗಲಿಲ್ಲ. ಮುಂದೆ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳೋಣ’ ಎಂದರು.

‘ನಮ್ಮ ರಾಜ್ಯದ ಯಾವ ಸಂಸದರೂ ನರೇಂದ್ರ ಮೋದಿ ಮುಂದೆ ನಿಂತು ಧೈರ್ಯವಾಗಿ ಮಾತನಾಡುವುದಿಲ್ಲ. ನೀವು ನನ್ನನ್ನೇ ಹೆಚ್ಚು ಅವಲಂಬಿಸಬೇಡಿ, ನೀವು ಸಶಕ್ತರಾಗಿರಿ ಎಂದು ಮೋದಿಯವರೇ ಹೇಳಿದ್ದು, ವರದಿಯಾಗಿದೆ. ರಾಜ್ಯದ ಸಂಸದರು ಧೈರ್ಯದಿಂದ ಮಾತನಾಡಿದ್ದರೆ ಹೆಚ್ಚಿನ ಅನುದಾನ ಬರುತ್ತಿತ್ತು’ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಕ್ಕೆ ₹5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಈ ಹಣದಲ್ಲಿ ಮನೆ ಕಟ್ಟಲು ಆಗುತ್ತದೆಯೇ? ಆಶ್ರಯ ಯೋಜನೆಯಡಿ ಎಲ್ಲರಿಗೂ ಉಚಿತವಾಗಿ ಮನೆ ಮನೆ ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಸ್ವಜಲ್ ಯೋಜನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಶಂಕರಪ್ಪ, ‘ಕೇಂದ್ರ ಸರ್ಕಾರದವರು ಈಗ ಎಲ್ಲರಿಗೂ ನೀರು ಕೊಡುವ ಮಾತನಾಡುತ್ತಿದ್ದಾರೆ. ನಾವು 1971ರಲ್ಲೇ ಮನೆಗಳಿಗೆ ದಿನದ 24 ಗಂಟೆಯೂ ನೀರು ಕೊಡುವ ಯೋಜನೆ ಮಾಡಿದ್ದೆವು’ ಎಂದು ಟಾಂಗ್ ನೀಡಿದರು.

ಇದಕ್ಕೆ ಉತ್ತರಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ,‘ರಾಜ್ಯದ ಯಾವುದೇ ಸಂಸದರು ಮೋದಿಯವರ ಮುಂದೆ ಧೈರ್ಯವಾಗಿ ಮಾತನಾಡದೇ ಇರುವ ಪರಿಸ್ಥಿತಿ ಇಲ್ಲ. ಎಲ್ಲರೂ ಧೈರ್ಯವಾಗಿ ಮಾತನಾಡುತ್ತಾರೆ. ಬೇಕಾದರೆ ನೀವೂ ನಮ್ಮ ಜೊತೆಗೆ ಬನ್ನಿ ತೋರಿಸುತ್ತೇವೆ’ ಎಂದು ಪಂಥಾಹ್ವಾನ ನೀಡಿದರು.

‘ನೆರೆ ಸಂತ್ರಸ್ತರಿಗೆ ₹3 ಸಾವಿರ ಕೋಟಿಗೂ ಹೆಚ್ಚು ಅನುದಾನ ತರುತ್ತೇವೆ. ಒಂದೇ ಸಮಯಕ್ಕೆ ಎಲ್ಲವನ್ನೂ ತರಲು ಆಗುವುದಿಲ್ಲ. ಕೆಲವಾರು ನಿಬಂಧನೆಗಳು ಇವೆ. ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ. ಎಷ್ಟು ಬೇಕೋ ಅದಕ್ಕಿಂತ ಜಾಸ್ತಿ ಅನುದಾನ ತರುತ್ತೇವೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT