ಬುಧವಾರ, ಡಿಸೆಂಬರ್ 7, 2022
23 °C
ಹಿರೇಕೋಗಲೂರು: ಈ ಗ್ರಾಮದಲ್ಲಿ ಬೆಳಕಿನ ಹಬ್ಬ ಇಂದು

ಹಿರೇಕೋಗಲೂರಿನಲ್ಲಿ ವಿಶಿಷ್ಟ ‘ದೀಪಾವಳಿ’ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಮುಗಿದು ಒಂದು ವಾರವೇ ಕಳೆದಿದೆ. ದೇಶದಾದ್ಯಂತ ಅಕ್ಟೋಬರ್‌ 24ರಿಂದ 26ರವರೆಗೆ ಸತತ ಮೂರು ದಿನಗಳ ಕಾಲ ಜನರು ಹಬ್ಬ ಆಚರಿಸಿಯಾಗಿದೆ. ಆದರೆ, ಈ ಗ್ರಾಮದಲ್ಲಿ ಮಾತ್ರ ದೀಪಗಳ ಹಬ್ಬವನ್ನು ಶುಕ್ರವಾರ (ನವೆಂಬರ್‌ 4) ದಂದು ಆಚರಿಸಿ ಸಂಭ್ರಮಿಸಲಾಗುತ್ತದೆ.

ಮಧ್ಯ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ‘ದೀಪಾವಳಿ’ಯನ್ನೂ ಆಚರಿಸಿ ನಂತರ ‘ಕಿರು ದೀಪಾವಳಿ’ ಹೆಸರಲ್ಲಿ ಮತ್ತೆ ಹಬ್ಬ ಆಚರಿಸುವುದು ಅಲ್ಲಲ್ಲಿ ಕಂಡುಬರುತ್ತದೆ. ಆದರೆ, ಎಲ್ಲ ಜನರು ಹಬ್ಬ ಆಚರಿಸುವಾಗ ಈ ಗ್ರಾಮದಲ್ಲಿ ಹಬ್ಬದ ಸಡಗರ ಇರುವುದಿಲ್ಲ. ಇಲ್ಲಿ ಎಲ್ಲ ಊರುಗಳಲ್ಲೂ ಹಬ್ಬ ಆಚರಿಸಿಯಾದ ನಂತರ ಬರುವ ಮೊದಲ ಅಥವಾ ಎರಡನೇ ಶುಕ್ರವಾರವೇ ದೀಪಾವಳಿಯ ಮೆರುಗು.

ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಜನರೇ ಪ್ರತ್ಯೇಕವಾಗಿ ‘ದೀಪಾವಳಿ’ ಆಚರಿಸುತ್ತಾರೆ. ಶುಕ್ರವಾರ ಈ ಊರಲ್ಲಿ ಬಂಧು– ಮಿತ್ರರೊಡಗೂಡಿ ವಿಶಿಷ್ಟವಾಗಿ ಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ.

‘ಇತರ ಗ್ರಾಮಗಳಿಗಿಂತ ಭಿನ್ನವಾದ ಆಚರಣೆಯೇನೂ ಇರುವುದಿಲ್ಲ. ಬದಲಿಗೆ, ದಿನ ಮಾತ್ರ ಬದಲು’ ಎಂದು ಗ್ರಾಮಸ್ಥರು ಹೇಳುತ್ತಾರೆ. ಇತರರು ಆಚರಿಸಿದಂತೆಯೇ ಹಿರಿಯರನ್ನು ಸ್ಮರಿಸುವುದು, ಮನೆಯೆದುರು ಹಟ್ಟೆವ್ವನನ್ನು ಕೂರಿಸಿ ಅಲಂಕರಿಸುವುದು, ಮನೆಗಳಿಗೆ ಸುಣ್ಣ– ಬಣ್ಣ ಬಳಿಯುವುದು, ಹೊಸ ಬಟ್ಟೆ ತೊಟ್ಟು, ಪಟಾಕಿ ಸಿಡಿಸಿ ಸಂಭ್ರಮಿಸುವಂತಹ ವಾಡಿಕೆಯ ಆಚರಣೆಗಳೇ ಇರುತ್ತವೆ.

‘ಸಾಮಾನ್ಯವಾಗಿ ಇತರೆಡೆಗಳಲ್ಲಿ ಶನಿವಾರ ಅಥವಾ ಭಾನುವಾರದಂದು ಬಲಿಪಾಡ್ಯಮಿ ಇದ್ದರೆ, ಅದರ ನಂತರ ಬರುವ ಮೊದಲ ಶುಕ್ರವಾರದಂದು ನಮ್ಮಲ್ಲಿ ದೀಪಾವಳಿ ಇರುತ್ತದೆ. ಒಂದೊಮ್ಮೆ ಮಂಗಳವಾರ, ಬುಧವಾರ ಅಥವಾ ಗುರುವಾರ ಬಲಿಪಾಡ್ಯಮಿ ಇದ್ದರೆ ಹಬ್ಬದ ನಂತರದ ಎರಡನೇ ಶುಕ್ರವಾರ ಹಬ್ಬ ಆಚರಿಸುತ್ತೇವೆ’ ಎಂದು ಗ್ರಾಮದ ಸಿ.ಎಚ್‌. ವಿಜಯ್‌, ಎ.ಆರ್‌. ಪದ್ಮನಾಭ, ಎ.ಆರ್‌. ಮಂಜುನಾಥ, ಎಸ್‌.ವೈ. ಯೋಗೇಶ ಮತ್ತಿತರರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಣ್ಣುಮಕ್ಕಳ ಮೇಲಿನ ಪ್ರೀತಿ: ‘ನಮ್ಮ ಮನೆಯ ಹೆಣ್ಣುಮಕ್ಕಳು ತಮ್ಮ ಗಂಡನ ಮನೆಯಲ್ಲಿ ಹಬ್ಬ ಆಚರಿಸಿ ಮಕ್ಕಳೊಂದಿಗೆ ತವರುಮನೆಗೆ ಬರಲಿ. ನಮ್ಮ ಮನೆಯ ಸೊಸೆಯಂದಿರು ತಮ್ಮ ತವರಲ್ಲಿ ಹಬ್ಬ ಆಚರಿಸಿ ಇಲ್ಲಿಗೆ ಬರಲಿ. ಎಲ್ಲರೂ ಜೊತೆಯಾಗಿ ಹಬ್ಬ ಆಚರಿಸಿದರೆ ಅದರ ಸಂಭ್ರಮವೇ ಭಿನ್ನ ಎಂಬ ಉದ್ದೇಶದಿಂದ ನಮ್ಮಲ್ಲಿ ತುಸು ತಡವಾಗಿ ಹಬ್ಬ ಇರುತ್ತದೆ. ಹೆಣ್ಣುಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಸೊಸೆಯಂದಿರ ಮೇಲೆ ನಮ್ಮೂರಿನ ಜನರಿಗೆ ಇರುವ ಪ್ರೀತಿಯಿಂದಾಗಿಯೇ ನಮ್ಮಲ್ಲಿ ಹಲವಾರು ದಶಕಗಳಿಂದ ತಡವಾಗಿ ಹಬ್ಬ ಇಟ್ಟುಕೊಳ್ಳಲಾಗುತ್ತದೆ’ ಎಂದು ಅವರು
ಹೇಳಿದರು.

****

ಹೀಗಿರಲಿದೆ ದೀಪಾವಳಿ ಆಚರಣೆ

ಹಬ್ಬದ ಬೆಳಗಿನ ಜಾವಕ್ಕೆ ಮನೆಯ ಅಂಗಳವನ್ನು ಸಗಣಿಯಿಂದ ಸಾರಿಸಿ, ಕಾಶಿ ಕಡ್ಡಿ, ಬ್ರಹ್ಮದಂಟು, ಉತ್ತರಾಣಿ ಕಡ್ಡಿ, ರಾಗಿ ತೆನೆ, ಸಜ್ಜೆ ತೆನೆ, ಜೋಳದ ತೆನೆ, ಚಂಡು ಮತ್ತಿತರೆ ಹೂ, ತಳಿರು– ತೋರಣಗಳಿಂದ ಸಿಂಗರಿಸಿ, ಮಹಿಳೆಯರು ಹಟ್ಟೆವ್ವನನ್ನು ಕೂರಿಸುವುದರ ಮೂಲಕ ಬೆಳಕಿನ ಹಬ್ಬ ಆರಂಭವಾಗುತ್ತದೆ.

ನಂತರ ಭಕ್ಷ್ಯ ಭೋಜನಗಳ ತಯಾರಿ ಶುರುವಾಗುತ್ತದೆ. ವಿಶೇಷವಾಗಿ, ವಡ್ಡರಾಗಿ ಹಿಟ್ಟಿನ ಸಂಡಿಗೆ ಪಾಯಸ, ಅಕ್ಕಿ ಪಾಯಸ, ಹಾಲಿನ ಪಾಯಸ ಹಾಗೂ ಹೋಳಿಗೆ ಸೇರಿದಂತೆ ತರಹೇವಾರಿ ಸಿಹಿ ಭಕ್ಷ್ಯಗಳು ಸಿದ್ಧಗೊಳ್ಳುತ್ತವೆ. ಸಂಜೆ ಹಿರಿಯರ ಪೂಜೆ, ಲಕ್ಷ್ಮೀ ಪೂಜೆ ನೆರವೇರಿಸಿ, ಗುರು–ಹಿರಿಯರ ಆಶೀರ್ವಾದ ಪಡೆದು ಮನೆಯ ಮುಂದೆ ಸಾಲು ದೀಪಗಳನ್ನು ಹಚ್ಚಲಾಗುತ್ತದೆ. ನಂತರ ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಪಟಾಕಿ ಹೊಡೆದು ಸಂಭ್ರಮಿಸುವುದಲ್ಲದೆ, ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದು ವಾಡಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು