ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವೆಂಟಿಲೇಟರ್‌ನಲ್ಲಿದ್ದ ಮಹಿಳೆಗೆ ಹೆರಿಗೆ

ತಾಯಿ–ಮಗು ಆರೋಗ್ಯವಾಗಿ ಎಸ್‌ಎಸ್‌ ಆಸ್ಪತ್ರೆಯಿಂದ ಬಿಡುಗಡೆ
Last Updated 29 ಜುಲೈ 2020, 15:34 IST
ಅಕ್ಷರ ಗಾತ್ರ
ADVERTISEMENT
""

ದಾವಣಗೆರೆ: ಕೊರೊನಾ ಪಾಸಿಟಿವ್‌ ಬಂದಿದ್ದ, ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ವೆಂಟಿಲೇಟರ್‌ನಲ್ಲಿ ಇದ್ದ ಮಹಿಳೆಗೆ ಅವಧಿಗೆ ಮುನ್ನ ಹೆರಿಗೆಯಾಗಿದ್ದು, ಮಗು ಮತ್ತು ತಾಯಿ ಆರೋಗ್ಯದಿಂದ ಇದ್ದಾರೆ. ಬುಧವಾರ ಸಂಜೆ ಬಿಡುಗಡೆಗೊಂಡಿದ್ದಾರೆ ಎಂದು ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದರು.

ಆಸ್ಪತ್ರೆಯ ವೈದ್ಯರ ಸಾಧನೆಯ ಬಗ್ಗೆ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಹೈಫ್ಲೋ ನೇಸಲ್‌ ಆಕ್ಸಿಜನ್‌ ಮಷಿನ್‌

8 ತಿಂಗಳ ಗರ್ಭಿಣಿಯಾಗಿದ್ದ 35 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರ ಶಿಫಾರಸಿನಂತೆ ಎಸ್‌ಎಸ್‌ ಆಸ್ಪತ್ರೆಗೆ ಜುಲೈ 8ರಂದು ಬಂದಿದ್ದರು. ಅವರಿಗೆ ಎರಡೂ ಶ್ವಾಸಕೋಶದಲ್ಲಿ ತೀವ್ರತರಹದ ನ್ಯುಮೋನಿಯಾ ಕಂಡು ಬಂದಿತ್ತು. ಹೆಚ್‌ಸಿಕ್ಯೂ, ಅಜಿತ್ರೊಮೈಸಿನ್‌, ಒಸೆಲ್ಟಾಮಿವಿರ್‌, ಸ್ಇರಾಯ್ಡ್‌, ಆಂಟಿ ಕೊರಾಯಗುಲೆಂಟ್ಸ್‌ ಚಿಕಿತ್ಸೆ ಆರಂಭಿಸಲಾಯಿತು. ಹೈ ಫ್ಲೋ ನೇಸಲ್‌ ಆಕ್ಸಿಜನ್‌ ಹೊರತಾಗಿಯೂ ಅವರ ಉಸಿರಾಟದ ಸಮಸ್ಯೆ ಹೆಚ್ಚಾಯಿತು. ಹಾಗಾಗಿ ಜುಲೈ 10ರಂದು ವೆಂಟಿಲೇಟರ್‌ ಅಳವಡಿಸಬೇಕಾಯಿತು ಎಂದು ವಿವರಿಸಿದರು.

ಆಮ್ಲಜನಕದ ಕೊರತೆಯಿಂದ ಮಗುವಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಯಿತು. ಈ ಹೆಣ್ಣು ಶಿಶುವನ್ನು ಎನ್‌ಐಸಿಯುಗೆ ಸ್ಥಳಾಂತರಿಸಲಾಯಿತು. ಐದು ದಿವಸಗಳ ಬಳಿಕ ಮಹಿಳೆ ನ್ಯುಮೋನಿಯಾದಿಂದ ಗುಣಮುಖರಾಗಿ ವೆಂಟಿಲೇಟರ್‌ನಿಂದ ಹೊರಗೆ ಬಂದರು. ಕೋವಿಡ್‌ ಸಂಬಂಧದ ಡಿವಿಟಿ ತೊಂದರೆಗೂ ಚಿಕಿತ್ಸೆ ನೀಡಲಾಯಿತು. ಈಗ ಕೊರೊನಾ ಮುಕ್ತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮಗುವಿಗೆ ಉಸಿರಾಟದ ತೊಂದರೆ ಹಾಗೂ ನಂಜು ಇರುವುದಕ್ಕಾಗಿ ಐಸಿಯುನಲ್ಲಿ ಇಟ್ಟು ಮೂರು ದಿನಗಳ ಕಾಳಾ ವೆಂಟಿಲೇಟರ್‌ ಅಳವಡಿಸಿ ಸರ್ಫೆಕ್ಟೆಂಟ್‌ ಚಿಕಿತ್ಸೆ ನೀಡಲಾಯಿತು. ಈಗ ಮಗು ಕೂಡ ಆರೋಗ್ಯವಾಗಿದೆ ಎಂದರು.

ಮೆಡಿಸಿನ್‌ ವಿಭಾಗದ ಡಾ. ಮಧುನವೀನ್‌ ರೆಡ್ಡಿ, ಡಾ. ಹರ್ಷ ಕುಲಕರ್ಣಿ, ಅನಸ್ತೇಶಿಯ ವಿಭಾಗದ ಡಾ. ಅರುಣ್ ಕುಮಾರ್‌ ಅಜ್ಜಪ್ಪ, ಡಾ. ಕಿರಣ್‌, ಒಬಿಜಿ ವಿಭಾಗದ ಡಾ. ಪ್ರೇಮಾ ಪ್ರಭುದೇವ್‌, ಪಲ್ಮನಲಾಜಿ ವಿಭಾಗದ ಡಾ. ಅಜಿತ್‌ ಈಟಿ, ಡಾ. ಪ್ರಿಯದರ್ಶಿನಿ ಎಸ್‌.ಆರ್‌., ಎಮರ್ಜನ್ಸಿ ವಿಭಾಗದ ಡಾ. ನರೇಂದ್ರ ಎಸ್‌.ಎಸ್‌., ಡಾ. ಗಣೇಶ್‌, ಮಕ್ಕಳ ವಿಭಾಗದ ಡಾ. ಕೆ. ಕಾಳಪ್ಪನವರ್‌, ಡಾ. ಲತಾ ಜಿ.ಎಸ್‌., ಡಾ. ವೀರೇಶ್‌ ಬಾಬು, ಸರ್ಜರಿ ವಿಭಾಗದ ಡಾ. ಎಲ್‌ ಎಸ್‌. ಪಾಟೀಲ್‌, ರೇಡಿಯಾಲಜಿ ವಿಭಾಗದ ಡಾ. ಅಖಲಿ್‌ ಕುಲಕರ್ಣಿ ಸಮನ್ವಯದಿಂದ ಕೆಲಸ ಮಾಡಿರುವುದರಿಂದ ಈ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಪ್ರಾಂಶುಪಾಲ ಡಾ. ಬಿ.ಎಸ್‌. ಪ್ರಸಾದ್‌ ತಿಳಿಸಿದರು.

ವೆಂಟಿಲೇಟರ್‌ಗೆ ಬಂದರೆ ಅವಕಾಶ ಕಡಿಮೆ

ವೆಂಟಿಲೇಟರ್‌ ಅನ್ನುವುದು ಅಂತಿಮ ಹಂತದ ಪ್ರಯತ್ನ. ವೆಂಟಿಲೇಟರ್‌ಗೆ ಬಂದರೆ ಶೇ 90ಕ್ಕೂ ಅಧಿಕ ಮರಣ ಪ್ರಮಾಣ ಇರುತ್ತದೆ. ಅಂಥ ಸಂದಿಗ್ಧ ಸ್ಥಿತಿಯಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕಾಳಪ್ಪನವರ್‌ ತಿಳಿಸಿದರು.

ಸರ್ಕಾರ ನಿಗದಿಪಡಿಸಿದ ಶುಲ್ಕವನ್ನಷ್ಟೇ ಪಡೆಯಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ನಮ್ಮಲ್ಲಿಗೆ ರೋಗದ ಆರಂಭದ ಹಂತದಲ್ಲೇ ಬಂದರೆ ಚಿಕಿತ್ಸೆ ನೀಡಿ ಗುಣಪಡಿಸುವುದು ಸುಲಭ. ಆದರೆ ಅಂಗಾಂಗ ವೈಫಲ್ಯಗೊಂಡ ಬಳಿಕ ಬಂದರೆ ನಮಗೂ ಕಷ್ಟವಾಗುತ್ತದೆ. ನಮ್ಮ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

‘ಬಾಪೂಜಿ ಮತ್ತು ಹೈಟೆಕ್‌ ಆಸ್ಪತ್ರೆಗಳಲ್ಲಿ 500 ಬೆಡ್‌ಗಳು ಇವೆ. ಹಾಗಾಗಿ ಬೆಡ್‌ ಕೊರತೆ ಎಂಬುದು ನಮ್ಮಲ್ಲಿ ಇಲ್ಲ. ಹೈಫ್ಲೋ ನೇಸಲ್ ಆಕ್ಸಿಜನ್‌ ಮೆಶಿನ್‌ ಒಂದಕ್ಕೆ ₹ 3.5 ಲಕ್ಷ ಇದೆ. ಸದ್ಯ 10 ಇದೆ. ಇನ್ನಷ್ಟು ಖರೀದಿಸಲು ನಾವು ತಯಾರಿದ್ದೇವೆ. ಪೂರೈಕೆ ಇಲ್ಲ. 35 ವೆಂಟಿಲೇಟರ್‌ ಇದೆ’ ಎಂದು ಎಸ್‌ಎಸ್‌ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT