ಮೇಲ್ಸೇತುವೆ ಕಟ್ಟದಿದ್ದರೆ ಸಂಸದರ ಕಚೇರಿ ಮುಂದೆ ಧರಣಿ

7
ಜೆಡಿಎಸ್‌ ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಮಾನುಲ್ಲಾ ಖಾನ್‌ ಎಚ್ಚರಿಕೆ

ಮೇಲ್ಸೇತುವೆ ಕಟ್ಟದಿದ್ದರೆ ಸಂಸದರ ಕಚೇರಿ ಮುಂದೆ ಧರಣಿ

Published:
Updated:

ದಾವಣಗೆರೆ: ನಗರದ ಹಳೆಯ–ಹೊಸ ಬಡಾವಣೆಗಳನ್ನು ಬೆಸೆಯುವ ಅಶೋಕ ರಸ್ತೆ ಮೇಲ್ಸೇತುವೆ ಕಟ್ಟದಿದ್ದರೆ ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಜೆಡಿಎಸ್‌ ಯುವ ಘಟಕದ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾ ಖಾನ್‌ ಎಚ್ಚರಿಸಿದರು.

ಮೇಲ್ಸೇತುವೆ ನಿರ್ಮಾಣ ಮೂರು ದಶಕಗಳ ಹಿಂದಿನ ಬೇಡಿಕೆ. ಆದರೆ, ರಾಜಕೀಯ ಕಾರಣದಿಂದ ಯೋಜನೆ ಇದುವರೆಗೂ ಅನುಷ್ಠಾನಗೊಂಡಿಲ್ಲ. ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಂಸದ ಜಿ.ಎಂ. ಸಿದ್ದೇಶ್ವರ, ಜುಲೈ 1ರೊಳಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೇಲ್ಸೇತುವೆ ನಿರ್ಮಾಣವಾಗುವವರೆಗೂ ಅಧಿಕಾರಿಗಳ ಮೇಲೆ ಒತ್ತಡ ತಂದು, ಅವರು ಕೆಲಸ ಮಾಡಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದೊಮ್ಮೆ ಪಾಲಿಕೆ ಆಯುಕ್ತರು ಹಳೆ ಬಸ್‌ನಿಲ್ದಾಣದ ಬಳಿ ಮೇಲ್ಸೇತುವೆ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಭಾಗದಲ್ಲಿ ಯಾವುದೇ ವಾಣಿಜ್ಯ ಮಳಿಗೆ ಅಥವಾ ಖಾಸಗಿ ನಿವೇಶನಗಳಿಲ್ಲ. ಎರಡೂ ಭಾಗಗಳಲ್ಲಿ ನಗರಪಾಲಿಕೆಗೆ ಸೇರಿದ ಜಾಗವೇ ಇದೆ. ಹೀಗಾಗಿ, ಇಲ್ಲಿಯೇ ಮೇಲ್ಸೇತುವೆ ನಿರ್ಮಿಸಿದರೆ ಜನರಿಗೂ ಅನುಕೂಲವಾಗುತ್ತದೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಹಳೆಯ ಬಸ್‌ ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ವಾಣಿಜ್ಯ ಉದ್ದೇಶಕ್ಕೆ ಬಹುಮಹಡಿ ಕಟ್ಟಡ ಕಟ್ಟಲು ನಗರಪಾಲಿಕೆ ಚಿಂತನೆ ನಡೆಸಿದೆ. ಇದರ ಬದಲು, ಹಳೆಯ ಬಸ್‌ ನಿಲ್ದಾಣದ ಬಳಿಯೇ ರೈಲ್ವೆ ಮೇಲ್ಸೇತುವೆ ಕಟ್ಟಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಖಾದರ್‌ ಬಾಷಾ, ಮನ್ಸೂರ್‌ ಅಲಿ, ಮೌಲಾನಾ ಅಬ್ದುಲ್‌ ಹಜರತ್, ಅಬ್ದುಲ್‌ ಮುನಾಫ್, ಸುಲೇಮಾನ್‌, ಜಿಕ್ರಿಯಾ ಸಾಬ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !