ಮರು ಬಿತ್ತನೆಗೂ ಬೀಜ ವಿತರಣೆಗೆ ಒತ್ತಾಯ

7
ಸರ್ಕಾರಕ್ಕೆ ಶಿಫಾರಸು ಕಳುಹಿಸಲು ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ನಿರ್ಣಯ

ಮರು ಬಿತ್ತನೆಗೂ ಬೀಜ ವಿತರಣೆಗೆ ಒತ್ತಾಯ

Published:
Updated:
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸಿಇಒ ಎಸ್‌. ಅಶ್ವತಿ ವಾಗ್ವಾದ ನಡೆಸಿದರು

ದಾವಣಗೆರೆ: ಮರು ಬಿತ್ತನೆಗೂ ಅವಶ್ಯವಿರುವಷ್ಟು ಬಿತ್ತನೆ ಬೀಜವನ್ನು ಜಿಲ್ಲೆಯಲ್ಲಿ ಕೃಷಿ ಇಲಾಖೆ ಮೂಲಕ ವಿತರಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

‘ಮೇ ತಿಂಗಳಲ್ಲೇ ಚುರುಕು ಪಡೆದಿದ್ದ ಮುಂಗಾರು ಜೂನ್‌ ತಿಂಗಳಿನಲ್ಲಿ ಮಂದವಾಗಿದೆ. ಜತೆಗೆ ಕಾಂಡಕೊರಕ ಹುಳುಬಾಧೆಯೂ ಕಾಡುತ್ತಿದೆ. ಇದರಿಂದಾಗಿ ಶೇ 60ರಷ್ಟು ಬೆಳೆ ಹಾಳಾಗಿದೆ. ಹೀಗಾಗಿ, ಅಳಿದುಳಿದ ಪೈರನ್ನು ಅಳಿಸಿ, ಮರು ಬಿತ್ತನೆ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ರೈತರು ಸಿಲುಕಿಕೊಂಡಿದ್ದಾರೆ. ಆದ್ದರಿಂದ ಮತ್ತೆ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ಎಂ.ಆರ್‌. ಮಹೇಶ್‌ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಇತರ ಸದಸ್ಯರೂ ಸಹಮತ ವ್ಯಕ್ತ‍ಪಡಿಸಿದರು.

ಹಾಗೆಯೇ ಜಿಲ್ಲಾ ಪಂಚಾಯಿತಿಯ ಕಾರ್ಯಕ್ರಮಗಳಿಗಾಗಿ ಸರ್ಕಾರ ಬಿಡುಗಡೆ ಮಾಡುವ ₹ 336 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಹರಪನಹಳ್ಳಿ ತಾಲ್ಲೂಕಿನಲ್ಲಿ ರಸಗೊಬ್ಬರಕ್ಕೆ ಮರಳು ಮಿಶ್ರಣ ಮಾಡಿ ಮಾರಾಟ ಮಾಡಿರುವ ಪ್ರಕರಣ ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುವರ್ಣ ನಾಗರಾಜ್ ಆಗ್ರಹಿಸಿದರು. ಸೈನಿಕ ಹುಳು, ಕಾಂಡ ಕೊರೆಯುವ ಹುಳು ನಿಯಂತ್ರಣಕ್ಕೆ ಏನು ಮಾಡುತ್ತಿರುವರಿ ಎಂದು ಉಚ್ಚಂಗಿದುರ್ಗ ಕ್ಷೇತ್ರದ ಸದಸ್ಯೆ ಜಿ. ರಶ್ಮಿ ಕೇಳಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಹುಳು ಬಾಧೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ರೈತರಿಗೆ ತಿಳಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದರು.

ಫಸಲ್‌ ಬಿಮಾ ಯೋಜನೆಯಡಿ 3,226 ರೈತರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 2,247 ರೈತರು ಬೆಳೆನಷ್ಟ ಅನುಭವಿಸಿದ್ದು, ಅವರಿಗೆ ಪರಿಹಾರ ನೀಡಲಾಗುತ್ತಿದೆ. ಒಟ್ಟು 97.61 ಲಕ್ಷ ಪರಿಹಾರ ಧನ ಸಿಗಲಿದೆ ಎಂದರು.

ಆರುಂಡಿ ಸುವರ್ಣ ನಾಗರಾಜ್, ‘ಫಸಲ್‌ ಬಿಮಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹಾರ ಕೊಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ವೈಯಕ್ತಿಕ ಪದ್ಧತಿಯಲ್ಲಿ ವಿಮಾ ಯೋಜನೆಗೊಳಿಸಬೇಕು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು’ ಎಂದರು. ಇದಕ್ಕೂ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಡಿಡಿಪಿಐ ಕೋದಂಡರಾಮ, ‘ಈ ಸಾಲಿನ ಪಠ್ಯಕ್ರಮಗಳು ಬಂದಿವೆ. ಇದರಲ್ಲಿ ಉರ್ದು ಪುಸ್ತಕ ಸರಬರಾಜು ಆಗಿಲ್ಲ. ಹೀಗಾಗಿ, ಹಳೆಯ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ, ಹೊಸ ವಿದ್ಯಾರ್ಥಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 1 ಜೊತೆ ಸಮವಸ್ತ್ರ ಸರಬರಾಜಾಗಿದ್ದು, ಮತ್ತೊಂದು ಜೊತೆ ಸರಬರಾಜು ಮಾಡಬೇಕಿದೆ’ ಎಂದು ಮಾಹಿತಿ ನೀಡಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 6ರಷ್ಟು ಸುಧಾರಣೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಫಲಿತಾಂಶವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ವಾಗೀಶ‌ಸ್ವಾಮಿ, ಜೆ. ಸವಿತಾ, ಎಂ.ಆರ್‌. ಮಹೇಶ್, ಉಪ ಕಾರ್ಯದರ್ಶಿ ಷಡಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಬಸವನಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ರೇಣುಕಾಚಾರ್ಯ–ಸಿಇಒ ವಾಗ್ವಾದ

ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಸಿಇಒ ಎಸ್. ಅಶ್ವತಿ ನಡುವಿನ ವಾಗ್ವಾದಕ್ಕೆ ವೇದಿಕೆಯಾಯಿತು.

ಸದಸ್ಯ ಸುರೇಂದ್ರನಾಯ್ಕ, ‘ಬಾಳೆ ಬೆಳೆ ನಷ್ಟವಾಗಿ ಎರಡು ವರ್ಷ ಕಳೆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹೀಗಾದರೆ ರೈತರು ಬದುಕುವುದು ಹೇಗೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಅವರನ್ನು ಪ್ರಶ್ನಿಸಿದರು.

‘ವರದಿ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಬೇಕು’ ಎಂದು ವೇದಮೂರ್ತಿ ಉತ್ತರ ನೀಡಿದರು. ಉತ್ತರದಿಂದ ಸುರೇಂದ್ರನಾಯ್ಕ ತೃಪ್ತರಾಗಲಿಲ್ಲ. ಆಗ ಮಧ್ಯಪ್ರವೇಶಿಸಿದ ಅಶ್ವತಿ, ‘ಜಿಲ್ಲಾಧಿಕಾರಿ ಕಚೇರಿಯಿಂದ ಬೆಳೆನಷ್ಟ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕಡತ ಕಳುಹಿಸಲಾಗಿದೆ. ಆದರೆ, ಅಲ್ಲಿಂದ ಇನ್ನೂ ಪರಿಹಾರ ಬಂದಿಲ್ಲ’ ಎಂದು ಹೇಳಿದರು.

ಈ ವೇಳೆ ಸಭೆಗೆ ಬಂದ ರೇಣುಕಾಚಾರ್ಯ, ‘ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಯಾಗಿ ನೀವು ಆರೋಪ ಮಾಡುತ್ತಿರುವುದು ಸರಿಯಲ್ಲ. ಪರಿಹಾರ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೂ ಇದೆ. ನೀವು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಸಿಇಒಗೆ ಆಕ್ರೋಶದಿಂದ ಹೇಳಿದರು.

‘ಎಲ್ಲಾ ಜನಪ್ರತಿನಿಧಿಗಳಿಗೂ ಗೌರವ ಕೊಡುತ್ತಿದ್ದೇನೆ. ಜನಪ್ರತಿನಿಧಿಯೂ ಅಧಿಕಾರಿಗಳಿಗೆ ಗೌರವ ಕೊಡಬೇಕು. ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ. ವಸ್ತುಸ್ಥಿತಿ ಬಗ್ಗೆ ತಿಳಿಸಿದ್ದೇನೆ ಅಷ್ಟೇ’ ಎಂದು ಅಶ್ವತಿ ತಿರುಗೇಟು ನೀಡಿದರು.

‘ಇದು ಬಿಜೆಪಿ ಕಚೇರಿಯಲ್ಲ’

ಶಾಸಕ–ಸಿಇಒ ವಾಗ್ವಾದದಿಂದ ಗೊಂದಲ ಉಂಟಾಗಿದ್ದಕ್ಕೆ ಸಿಡಿಮಿಡಿಗೊಂಡ ತೇಜಸ್ವಿ ಪಟೇಲ್‌, ‘ಒಬ್ಬ ಅಧಿಕಾರಿಯಾಗಿ ಸಿಇಒ, ಸರ್ಕಾರದ ಮಾಹಿತಿ ನೀಡಿದ್ದಾರೆ. ಅದರಲ್ಲಿ ತಪ್ಪು ಹುಡುಕುವ ಭಾವನೆ ಸಲ್ಲದು’ ಎಂದು ತೀಕ್ಷ್ಣವಾಗಿ ಹೇಳಿದರು.

‘ನಾನೂ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೂ ಸರ್ಕಾರದ ಕಾರ್ಯನಿರ್ವಹಣೆ ಗೊತ್ತಿದೆ ತೇಜಸ್ವಿ ಪಟೇಲರೆ’ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು. ‘ಇದು ಬಿಜೆಪಿ ಕಚೇರಿಯಲ್ಲ. ಜಿಲ್ಲಾ ಪಂಚಾಯಿತಿಯಲ್ಲ. ನಮ್ಮ ಸದಸ್ಯರ ಹಕ್ಕುಚ್ಯುತಿಯಾಗಬಾರದು’ ಎಂದೂ ತೇಜಸ್ವಿ ಕಟುವಾಗಿ ಹೇಳಿದರು.

ಸಭೆಯಲ್ಲಿ ಕೇಳಿಸಿದ್ದು...

ಜಗಳೂರು ಕ್ಷೇತ್ರದಲ್ಲಿ ಬಿತ್ತನೆಗೆ ಬೇಕಾದಷ್ಟು ಹದದ ಮಳೆಯಾಗಿದೆ. ಅಂತರ್ಜಲ ಹೆಚ್ಚುವಷ್ಟು ಅಲ್ಲ. ಹೀಗಾಗಿ, ಮಳೆಗಾಲದಲ್ಲೂ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆಸಬೇಕು.

–ಎಸ್‌.ವಿ. ರಾಮಚಂದ್ರ, ಜಗಳೂರು ಶಾಸಕ

**

ಶಾಲೆಗಳ ಸಮಸ್ಯೆ ಪರಿಹರಿಸಲು, ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಜನರು, ಇಂಥ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರವರೆಗೂ ಬರುವಂತೆ ಆಗಬಾರದು.

– ಪ್ರೊ. ಎನ್. ಲಿಂಗಣ್ಣ, ಮಾಯಕೊಂಡ ಶಾಸಕ

**

ಸರ್ಕಾರ ನೀಡಿರುವ ಅನುದಾನದಲ್ಲಿ ಶೇ 63ರಷ್ಟು ಸಿಬ್ಬಂದಿ ವೇತನಕ್ಕೇ ಖರ್ಚಾಗಲಿದೆ. ಶೇ 37ರಷ್ಟು ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸಲು ಶೇ 63ರಷ್ಟು ಖರ್ಚು ಮಾಡುವುದು ಸರಿಯೇ?

–ಶೈಲಜಾ ಬಸವರಾಜ್, ಬಾಡಾ ಕ್ಷೇತ್ರದ ಸದಸ್ಯ

**

ಎಲ್ಲಾ ಶಾಸಕರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಇಲ್ಲಿನ ಮಾಹಿತಿಯನ್ನು ಪಡೆದುಕೊಂಡು ಸದನದಲ್ಲಿ ಚರ್ಚಿಸಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

–ತೇಜಸ್ವಿ ಪಟೇಲ್, ಹೊಸಕೆರೆ ಕ್ಷೇತ್ರದ ಸದಸ್ಯ

**

ಮಳೆಗಾಲದಲ್ಲಾದರೂ ಮೂರು ತಿಂಗಳು ಕೃಷಿ ಕೆಲಸವನ್ನಷ್ಟೇ ಮಾಡಲು ಇಲಾಖೆ ಅಧಿಕಾರಿಗಳಿಗೆ ಅವಕಾಶ ನೀಡಬೇಕು. ಅವರಿಗೆ ಬೇರೆ ಜವಾಬ್ದಾರಿಗಳನ್ನು ಕೊಡಬಾರದು.

–ಮಂಜುನಾಥ ಉತ್ತಂಗಿ, ಚಿಗಟೇರಿ ಕ್ಷೇತ್ರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !