ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌
Last Updated 25 ಸೆಪ್ಟೆಂಬರ್ 2021, 6:20 IST
ಅಕ್ಷರ ಗಾತ್ರ

ದಾವಣಗೆರೆ: ಮುಂಚೂಣಿಯಲ್ಲಿರುವ ಅಂಗನವಾಡಿ, ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಉಚಿತವಾಗಿ ಲಸಿಕೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಬಳಿಕ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರಿಗೆ ಮನವಿ ಸಲ್ಲಿಸಿದರು.

ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ‘ಕರ್ನಾಟಕ ರಾಜ್ಯದಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕಳೆದ 19 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದುಡಿಯುತ್ತಿರುವ ಬಿಸಿಯೂಟ ತಯಾರಕರಿಗೆ ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ವೇತನ ನೀಡಿಲ್ಲ. ಸರ್ಕಾರ ಈ ಮಹಿಳೆಯರಿಗೆ ನೀಡುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಅಲಹಬಾದ್ ಹೈಕೋರ್ಟ್ ಆದೇಶದಂತೆ ಬಿಸಿಯೂಟ ತಯಾರಕಿಯರಿಗೆ ಕನಿಷ್ಠ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಬಿಸಿಯೂಟ ತಯಾರಕರಿಗೆ 2021 ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಮಂಚೂಣಿಯಲ್ಲಿರುವ ಅಂಗನವಾಡಿ, ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿರ್ದಿಷ್ಟ ಸುರಕ್ಷತಾ ಸಾಧನ ಒದಗಿಸಬೇಕು. ಕಾರ್ಯಕರ್ತೆಯರಿಗೆ ₹ 50 ಲಕ್ಷದ ಆರೋಗ್ಯ ವಿಮೆ ಮಾಡಿಸಬೇಕು. ಸೇವೆಯಲ್ಲಿ ನಿಧನರಾದವರಿಗೆ ಸೌಲಭ್ಯ ಕಲ್ಪಿಸಬೇಕು‘ ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯರಿ, ಖಜಾಂಚಿ ಆನಂದರಾಜ್, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳಾದ ಎಂ.ಬಿ. ಶಾರದಮ್ಮ. ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ, ರೇಣುಕಮ್ಮ, ಸುಧಾ, ಕಾಳಮ್ಮ, ಆವರಗೆರೆ ವಾಸು, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪದಾಧಿಕಾರಿಗಳಾದ ಚನ್ನಮ್ಮ, ಪದ್ಮಾ, ಸರೋಜ, ಸಿ.ರಮೇಶ್, ವನಜಾಕ್ಷಮ್ಮ, ಜ್ಯೋತಿಲಕ್ಷ್ಮಿ, ಮಳಲಕೆರೆ ಜಯಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT