ಶುಕ್ರವಾರ, ಜನವರಿ 24, 2020
17 °C
ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ* ಸ್ಥಳದಲ್ಲಿ ಬಿಗಿ ಭದ್ರತೆ

ಅನುಮತಿ ನಿರಾಕರಣೆ: ಶಾಂತಿಯುತ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಿಷೇಧಾಜ್ಞೆ ನಡುವೆಯೂ ಪೌರತ್ವ (ತಿದ್ದುಪಡಿ) ವಿರೋಧಿಸಿ ಇಲ್ಲಿನ ‘ಸಂವಿಧಾನ ಉಳಿಸಿ ವೇದಿಕೆ’ಯಡಿ ವಿವಿಧ ಸಂಘಟನೆಗಳ ಮುಖಂಡರು ಆಜಾದ್‌ನಗರ ಠಾಣೆ ಎದುರು ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಡೆಸು ಉದ್ದೇಶದಿಂದ ಅನುಮತಿ ಪಡೆಯಲು ಮುಸ್ಲಿಂ ಸಮಾಜದ ಮುಖಂಡರು ಠಾಣೆಗೆ ಬಂದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಠಾಣೆಯ ಎದುರೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಬಂದು ಪೊಲೀಸ್ ಬಂದೋಬಸ್ತ್‌ ಕೈಗೊಂಡರು.

ಮಧ್ಯಾಹ್ನದ ವೇಳೆ ಠಾಣೆಯ ಎದುರೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಜಿಲ್ಲಾಧಿಕಾರಿ ಬರುವವರೆಗೂ ಠಾಣೆಯ ಎದುರೇ ಕಾದು ಕುಳಿತರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಂತೆ ಪೊಲೀಸರು ಠಾಣೆಯ ಗೇಟಿನ ಎದುರು ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಕಾರರನ್ನು ನಿಯಂತ್ರಿಸಿದರು.

‘ಈ ದೇಶ ನಮ್ಮದು, ಸ್ವಾಂತಂತ್ರ್ಯ ಬೇಕು’ ‘ನಮ್ಮಲ್ಲಿ ಯಾವ ಧರ್ಮದ ರಕ್ತವೂ ಅಲ್ಲ. ಮಾನವ ಕೆಂಪು ರಕ್ತ ಒಂದೇ’, ‘ಹಿಂದೂ –ಮುಸ್ಲಿಂ ಶತ್ರುಗಳಲ್ಲ’ ಎಂದು ರಾಷ್ಟ್ರಧ್ವಜ ಪ್ರದರ್ಶಿಸಿ ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿ, ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅನುಮತಿ ಸಾಧ್ಯವಿಲ್ಲ. ನಿಷೇಧಾಜ್ಞೆ ಮುಗಿದ ನಂತರ ಎಸ್‌ಪಿಯವರಿಗೆ ಮನವಿ ನೀಡಿ’ ಎಂದು ಹೇಳಿದರು.

ಆ ವೇಳೆ ಜಿಲ್ಲಾಧಿಕಾರಿ ರಾಷ್ಟ್ರಗೀತೆ ಹಾಡಲು ಹೇಳಿದರು. ಎಲ್ಲರೂ ರಾಷ್ಟ್ರಗೀತೆಗೆ ಧ್ವನಿಗೂಡಿಸಿದರು. ನಂತರ ಶಾಂತಿಯುತವಾಗಿ ಮನೆಗೆ ತೆರಳಿದರು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಸಮಾಜದ ಮುಖಂಡ ಸೈಯ್ಯದ್ ಸೈಫುಲ್ಲಾ ಮಾತನಾಡಿ ‘ಸ್ವಾತಂತ್ರ್ಯ ಸಂದರ್ಭಗಳಲ್ಲಿ ಈ ದೇಶಕ್ಕೆ ಅನೇಕ ಮಹನೀಯರು ಪ್ರಾಣ ತೆತ್ತಿದ್ದಾರೆ. ದೇಶ ಒಗ್ಗಟ್ಟಾಗಿ, ಶಾಂತಿಯುತವಾಗಿ ಇರಬೇಕು. ದೇಶದ ನಾಯಕರು ಸಮಸ್ಯೆಗಳನ್ನು ಬಗೆಹರಿಸುವ ಬದಲು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯುವವರಿಗೂ ನಾವು ಬಿಡುವುದಿಲ್ಲ. ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಜೆಡಿಎಸ್‌ ಅಲ್ಪ ಸಂಖ್ಯಾತ ಘಟಕದ ಟಿ.ಅಜ್ಗರ್, ಯು.ಎಂ.ಮನ್ಸೂರ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್‌, ಕೋಮುಸೌಹಾರ್ದ ವೇದಿಕೆಯ ಇಸ್ಮಾಯಿಲ್ ದೊಡ್ಡಮನಿ, ಅರ್ಫಾತ್ ಚಾರಿಟಬಲ್ ಟ್ರಸ್ಟ್‌ನ ನಾಸಿರ್, ನಾಲ್ಕನೇ ವಾರ್ಡ್‌ನ ಪಾಲಿಕೆ ಸದಸ್ಯ ಅಹಮದ್ ಕಬೀರ್ ಖಾನ್‌, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಟಾರ್ಗೆಟ್ ಅಸ್ಲಾಂ, ಸ್ಲಂ ಜನಾಂದೋಲನ ವೇದಿಕೆಯ ಮೊಹಮದ್ ಮೊಹ್‌ಸಿನ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ಸ್‌ನ ಅಹಮದ್ ಬಾಷಾ, ದಾವಣಗೆರೆ ಮುಸ್ಲಿಂ ಫೆಡರೇಷನ್‌ನ ರಿಯಾಜ್ ರಜ್ವಿ, ಎಸ್‌ಎಸ್‌ಎಫ್‌ನ ಇಕ್ಬಾಲ್, ಎಸ್‌ಡಿಪಿಐನ ಇಸ್ಮಾಯಿಲ್ ಜಬೀಉಲ್ಲಾ, ಕರ್ನಾಟಕ ಸೋಷಿಯಲ್ ಸರ್ವೀಸ್‌ನ ಮೊಹಮ್ಮದ್ ಹಯಾತ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸುಬಾನಿ, ನೂರಾನಿ ಸ್ಪೋರ್ಟ್ಸ್ ನ ಇನಾಯತ್ ಖಾನ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು