ಶುಕ್ರವಾರ, ಜುಲೈ 30, 2021
27 °C
ಪಶುಸಂಗೋಪನಾ ಮತ್ತು ವಕ್ಫ್ ಖಾತೆಯ ಸಚಿವ ಪ್ರಭು ಚವ್ಹಾಣ್ ಭರವಸೆ

ದಾವಣಗೆರೆ | ಪಶು ಸಂಗೋಪನಾ ಇಲಾಖೆ: ಹುದ್ದೆಗಳ ಭರ್ತಿಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನಾ ಮತ್ತು ವಕ್ಫ್ ಖಾತೆಯ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.

ಇಲ್ಲಿನ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಭಾಸ್ಕರ್‌ ನಾಯ್ಕ್ ಮಾತನಾಡಿ, ‘ಜಿಲ್ಲೆಯಲ್ಲಿ 612 ಹುದ್ದೆ ಮಂಜೂರಾಗಿದ್ದು, ಅವುಗಳಲ್ಲಿ 303 ಹುದ್ದೆಗಳು ಭರ್ತಿಯಾಗಿವೆ. 309 ಖಾಲಿ ಹುದ್ದೆಗಳು ಇವೆ. 10 ಜನರಿಗೆ ತಾತ್ಕಾಲಿಕ ನಿಯೋಜನೆ ಪತ್ರ ನೀಡಿದ್ದೇವೆ. ಈ ಪೈಕಿ 86 ಹುದ್ದೆಗಳು ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸಲಾಗುತ್ತಿದೆ. 20 ಸಂಸ್ಥೆಗಳಲ್ಲಿ ಒಬ್ಬ ‘ಡಿ’ಗ್ರೂಪ್ ನೌಕರನೂ ಇಲ್ಲ’ ಎಂದು ಹೇಳಿದರು.

‘ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಒಂದೂ ಪತ್ರ ಬಂದಿಲ್ಲ ಎಂದು ಹೇಳಿದರು. ಪಶುಸಂಗೋ‍ಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.

ಪಶುವೈದ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರಿಗೆ ಚಿಕಿತ್ಸೆ ನೀಡಬೇಕು. ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಪಶುಸಂಗೋಪನಾ ಮತ್ತು ವಕ್ಫ್ ಖಾತೆಯ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿ

‘ವೈದ್ಯರು ಹಳ್ಳಿಗಳಿಗೆ ಬರುತ್ತಿಲ್ಲ ಎಂದು ಅನೇಕ ರೈತರು ದೂರವಾಣಿ ಮೂಲಕ ಅಳಲು ತೋಡಿಕೊಳ್ಳುತ್ತಿದ್ದು, ಬರೀ ಕಾಗದ ಪತ್ರಗಳಲ್ಲಿ ಕೆಲಸ ತೋರಿಸುವುದಲ್ಲ. ಹಳ್ಳಿಗಳಲ್ಲಿ ತಳಮಟ್ಟದಿಂದ ಪ್ರಾಯೋಗಿಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನೀವು ಮಾಡಿದ ಕೆಲಸವನ್ನು ವಾಟ್ಸ್‌ಆ್ಯಪ್ ಮೂಲಕ ಚಿತ್ರಸಮೇತ ನನಗೆ ಕಳುಹಿಸಿಕೊಡಬೇಕು’ ಎಂದು ತಾಕೀತು ಮಾಡಿದರು.

‘ಸರ್ಕಾರದ ಕಡೆಯಿಂದ ಅಗತ್ಯವಾದ ಸವಲತ್ತುಗಳನ್ನು ಕಾನೂನು ಚೌಕಟ್ಟಿನಲ್ಲಿ ಒದಗಿಸುವ ಪ್ರಯತ್ನ ಮಾಡುತ್ತೇನೆ. ಆದರೆ ಸಮಸ್ಯೆ ಬಂದ ತಕ್ಷಣ ವೈದ್ಯರು ಹಾಗೂ ಅಧಿಕಾರಿಗಳು ಹಳ್ಳಿಗಳಿಗೆ ದಿಢೀರ್ ಭೇಟಿ ನೀಡಿ ಹಸುಗಳಿಗೆ ಚಿಕಿತ್ಸೆ ನೀಡಿ ಔಷಧ ನೀಡುವ ಕೆಲಸ ಮಾಡಬೇಕು. ನೀವೂ (ಉಪ ನಿರ್ದೇಶಕರು) ದಿಢೀರ್ ಭೇಟಿ ನೀಡಿ ಕೆಲಸ ಮಾಡಬೇಕು. ಮುಂದಿನ ಸಭೆಯಲ್ಲಿ ದೂರು ಬಂದರೆ ನಾನು ಸುಮ್ಮನಿರುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

'ಏನು ಕ್ರಮ ತೆಗೆದುಕೊಂಡಿದ್ದೀರಿ?'

ಗೋಶಾಲೆಯಿಂದ ಹಸುಗಳು ಕಸಾಯಿಖಾನೆಗೆ ಹೋಗುತ್ತಿವೆ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಚಿವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಭಾಸ್ಕರ್‌ನಾಯ್ಕ್ ‘ಜಿಲ್ಲೆಯಲ್ಲಿ ನಾಲ್ಕು ಗೋಶಾಲೆಗಳು ಇದ್ದು, ಇವುಗಳಿಗೆ ₹22.38 ಲಕ್ಷ ಸಹಾಯಧನ ನೀಡಲಾಗಿದೆ. ಯಾವೊಂದು ಹಸುವೂ ಕಸಾಯಿಖಾನೆಗೆ ಹೋಗಿಲ್ಲ’ ಎಂದು ಉತ್ತರಿಸಿದರು.

‘ಹರಿಹರದ ಬನ್ನಿಕೋಡುವಿನಲ್ಲಿ ಹಕ್ಕಿಜ್ವರ ಬಂತು. ಅಲ್ಲದೇ ಲಾಕ್‌ಡೌನ್ ವೇಳೆ ಕೋಳಿಗಳಿಗೆ ಆಹಾರ ಸಿಗದೇ ಕೆಲವು ಕೋಳಿಫಾರಂ ಮಾಲೀಕರು ಜೀವಂತವಾಗಿ ಕೋಳಿಗಳನ್ನು ನಾಶಪಡಿಸಿದರು. ಲಾಕ್‌ಡೌನ್ ವೇಳೆ 1 ಲಕ್ಷ ಮೊಟ್ಟೆಗಳನ್ನು ಬಡವರಿಗೆ ವಿತರಿಸಲಾಗಿದೆ. 20 ಸಾವಿರ ಲೀಟರ್ ಹಾಲು ಹಾಗೂ 300 ಮಿನಿಕಿಟ್‌ಗಳನ್ನು ವಿತರಿಸಲಾಗಿದೆ. ಪ್ರತಿನಿತ್ಯ 2 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಜಗಳೂರು ಬಿಟ್ಟರೆ ಉಳಿದ ಕಡೆ ಸಮೃದ್ಧವಾಗಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು