ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅಣಕು ಶವಯಾತ್ರೆ

ಉಚ್ಚಂಗಿದುರ್ಗದ ಬಗರ್‌ಹುಕುಂ ಸಾಗುವಳಿ ದಲಿತ ರೈತ ಕುಟುಂಬದಿಂದ ಪ್ರತಿಭಟನೆ
Last Updated 4 ಅಕ್ಟೋಬರ್ 2018, 11:29 IST
ಅಕ್ಷರ ಗಾತ್ರ

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ದಲಿತ ಕುಟುಂಬವೊಂದು ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಕಲ್ಲು ಗಣಿಕಾರಿಕೆ ನೀಡಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಹಾಗೂ ಹರಪನಹಳ್ಳಿಯ ಆಗಿನ ತಹಶೀಲ್ದಾರರ ಅಣಕು ಶವಯಾತ್ರೆಯನ್ನು ಗುರುವಾರ ನಡೆಸಿ ಪ್ರತಿಭಟಿಸಿತು.

ಬಗರ್‌ಹುಕುಂ ಸಾಗುವಳಿ ಪತ್ರ ನೀಡುವಂತೆ ಒತ್ತಾಯಿಸಿ ಒಂದು ವರ್ಷದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರೂ ತಮಗೆ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸತ್ತ ಉಚ್ಚಂಗಿದುರ್ಗದ ದುಗ್ಗತ್ತಿ ಹುಚ್ಚೆಂಗೆಪ್ಪ ಕುಟುಂಬವು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದಿ) ಆಶ್ರಯದಲ್ಲಿ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರ ಗಮನ ಸೆಳೆಯಲು ಯತ್ನಿಸಿತು.

ಪಿ.ಬಿ. ರಸ್ತೆಯ ಶನಿ ಮಂದಿರದಿಂದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹಾಗೂ ಹರಪನಹಳ್ಳಿಯ ಆಗಿನ ತಹಶೀಲ್ದಾರ್‌ ಗುರುಬಸವರಾಜ್‌ ಅವರ ಅಣಕು ಶವವನ್ನು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ತರಲಾಯಿತು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್‌. ಮಲ್ಲೇಶ್‌, ‘ಹುಚ್ಚೆಂಗಪ್ಪ ಉಚ್ಚಂಗಿದುರ್ಗದ ಸರ್ವೆ ನಂ. 441/ಎ2ರ 19.42 ಎಕರೆ ಪ್ರದೇಶದಲ್ಲಿ ಬಗರ್‌ಹುಕುಂ ಸಾಗುವಳಿ ನಡೆಸುತ್ತಿದ್ದರು. ಆದರೆ, ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಪ್ರಬಲ ಕೋಮಿನವರಿಗೆ ಸೇರಿದ ನಂದಿ ಸ್ಟೋನ್‌ ಕ್ರಷರ್‌ಗೆ ಏಳು ಎಕರೆ ಜಮೀನನ್ನು ಕಲ್ಲು ಗಣಿಗಾರಿಕೆಗೆ ನೀಡಲಾಗಿದೆ. ಉಳಿದ 12 ಎಕರೆಯನ್ನಾದರೂ ಮಂಜೂರು ಮಾಡುವಂತೆ ಹೋರಾಟ ನಡೆಸಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಇವರ ಪಾಲಿಗೆ ಸತ್ತಿದ್ದಾರೆ ಎಂದು ತಿಳಿದುಕೊಂಡು ಶವಯಾತ್ರೆ ನಡೆಸಿದ್ದೇವೆ’ ಎಂದರು.

ಈಗಲಾದರೂ ಈ ದಲಿತ ಕುಟುಂಬಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದ್ದರೆ, ಅಕ್ಟೋಬರ್‌ 10ರಿಂದ ಜಿಲ್ಲಾಧಿಕಾರಿ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು ಎಂದಷ್ಟೇ ಹೇಳಿದರು.

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಪ್ರೊ. ಸಿ.ಕೆ. ಮಹೇಶ್‌, ದ.ಸಂ.ಸ. ಜಿಲ್ಲಾ ಸಂಚಾಲಕ ಡಿ. ಹನುಮಂತಪ್ಪ, ಬಿ.ಎನ್‌. ನಾಗೇಶ್‌, ಪಿ. ತಿಪ್ಪೇರುದ್ರಪ್ಪ, ಎಚ್‌.ಸಿ. ಮಲ್ಲಪ್ಪ, ಜಿ.ಎಸ್. ಲೋಕೇಶ್‌, ಅಂಜಿನಪ್ಪ ನೀಲಗುಂದ, ಜಿ.ಎಚ್‌. ನಾಗರಾಜ್‌, ನಾರಾಯಣಪ್ಪ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ನ್ಯಾಯ ಸಿಗದಿದ್ದರೆ ಆತ್ಮಹತ್ಯೆ’

‘45 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ನಮ್ಮ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಕಲ್ಲು ಕ್ವಾರಿ ಸ್ಫೋಟ ಪ್ರಕರಣದಲ್ಲಿ ಈ ಜಾಗದ ಮಾಲೀಕ ನಾನು ಎಂದು ನ್ಯಾಯಾಲಯವೂ ಪರಿಗಣಿಸಿದ್ದರಿಂದ ಐದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇನೆ. ಆದರೆ, ಈಗ ಈ ಜಮೀನು ನನಗೆ ಸೇರಿಲ್ಲ ಎನ್ನುತ್ತಿದ್ದಾರೆ. ಆದರೆ, ಈ ಜಮೀನಿಗೆ ಈ ಹಿಂದೆ ನನ್ನಿಂದ ಕಂದಾಯವನ್ನೂ ಕಟ್ಟಿಸಿಕೊಂಡಿದ್ದಾರೆ. 430 ದಿನಗಳ ಕಾಲ ಹೋರಾಟ ನಡೆಸಿದರೂ ನಮ್ಮ ಬಗ್ಗೆ ಕರುಣೆ ತೋರುತ್ತಿಲ್ಲ’ ಎಂದು ದುಗ್ಗತ್ತಿ ಹುಚ್ಚೆಂಗೆಪ್ಪ ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿ ಬಡವರಿಗೆ ಕಣ್ಣಾಗಬೇಕಾಗಿತ್ತು. ಸರ್ಕಾರಿ ನೌಕರಿ ನಡೆಸಲು ಬಂದಿರುವ ಇವರು, ಯಾರದೋ ಒತ್ತಡಕ್ಕೆ ಮಣಿದು ನಮ್ಮ ಕಣ್ಣನ್ನೇ ಕಿತ್ತುಕೊಂಡಿದ್ದಾರೆ. ನನಗೆ ಭೂಮಿ ಕೊಡದೇ ಇದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಹುಚ್ಚೆಂಗೆಪ್ಪ ಎಚ್ಚರಿಕೆ ನೀಡಿದರು.

ಹುಚ್ಚೆಂಗ್ಗೆಪ್ಪನ ಪತ್ನಿ ಮಂಜಮ್ಮ, ಪುತ್ರಿಯರಾದ ದುರ್ಗಮ್ಮ, ರೇಣುಕಮ್ಮ, ಸುಜಾತಮ್ಮ ಸಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT