ಗುರುವಾರ , ಜೂನ್ 24, 2021
27 °C
ಸಾರ್ವಜನಿಕ ಗಣೇಶೋತ್ಸವ‌ಕ್ಕೆ ಅನುಮತಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

‘ಪೊಲೀಸರು ಬಂಧಿಸಿದರೂ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪೊಲೀಸರು ಬಂಧಿಸಿದರೂ ಗಣೇಶೋತ್ಸವ ಆಚರಿಸಿಯೇ ತೀರುತ್ತೇವೆ’ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಸಿದರು.

‘ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬಾಲಗಂಗಾಧರ ತಿಲಕರು ಇಡೀ ದೇಶವನ್ನು ಒಗ್ಗೂಡಿಸಲು ಮನೆಯ‌ಲ್ಲಿದ್ದ ಗಣೇಶನನ್ನು ಸಾರ್ವಜನಿಕಗೊಳಿಸಿ ಜಾತಿ, ಪ್ರಾಂತ್ಯ, ಭಾಷೆ ಹಾಗೂ ಪಕ್ಷಬೇಧ ಮರೆತು ಏಕತೆಯನ್ನು ಬೆಳೆಸಿದರು. ಕೋವಿಡ್–19ನೆಪದಲ್ಲಿ 125 ವರ್ಷಗಳ ಪರಂಪರೆ, ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರ್ಕಾರಕ್ಕೆ ಶೋಭೆಯಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಗಣೇಶ ಮೂರ್ತಿ ತಯಾರಕರು ಹಾಗೂ ಶಾಮಿಯಾನದವರನ್ನು ಸರ್ಕಾರ ಸಂಕಷ್ಟಕ್ಕೆ ತಳ್ಳಿದ್ದು, ಕೆಲವು ಮೂರ್ತಿ ತಯಾರಕರು ಗಣಪನನ್ನು ವಿಸರ್ಜಿಸುವಂತೆ ನಮ್ಮ ಪ್ರಾಣವನ್ನೇ ವಿಸರ್ಜನೆ ಮಾಡಿಕೊಳ್ಳುತ್ತೇವೆ’ ಎಂದು ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಸ್ವಂತ ವಿವೇಚನೆ ಮಾಡುವ ಶಕ್ತಿ ಇಲ್ಲ. ಅಧಿಕಾರಿಗಳ ಮಾತು ಕೇಳಿ ನಿಷೇಧಿಸಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದ್ದೇವೆ’ ಎಂದರು.

‘ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಘಟನೆಯಲ್ಲಿ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಸಂಚು ರೂಪಿಸಿ ಗಲಭೆ ನಡೆಸಿವೆ. ಈ ಬಗ್ಗೆ ಸಮಗ್ರ ಮಾಹಿತಿಗಳು ಹಾಗೂ ದಾಖಲೆ ಇದ್ದರೂ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ. ಶಾಸಕ ತನ್ವೀರ್ ಸೇಟ್ ಕೊಲೆ ಯತ್ನ ಸೇರಿ 11 ಗಲಭೆಗಳಲ್ಲಿ ಎಸ್‌ಡಿಪಿಐ ಭಾಗಿಯಾಗಿವೆ. ಕೂಡಲೇ ಇವೆರಡು ಸಂಘಟನೆಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆಯಿಂದಲೇ ಒಂದು ಸೇನೆ ತಯಾರು ಮಾಡಿ ಗುಂಡಾಗಳ ಮನೆಗೆ ನುಗ್ಗಿ ಶಿಕ್ಷಿಸುತ್ತೇವೆ’ ಎಂದು ಎಚ್ಚರಿಸಿದರು.

‘ದಾವಣಗೆರೆಯ ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಯಾರಿಗೂ ತಿಳಿಯುತ್ತಿಲ್ಲ. ಈ ಬಗ್ಗೆ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದು, ಶ್ರೀರಾಮಸೇನೆಯ ಕಾರ್ಯಕರ್ತರು ಇದನ್ನು ಗಮನಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡುತ್ತೇವೆ’ ಎಂದರು.

‘ಈಗ ದಲಿತ ಶಾಸಕರೊಬ್ಬರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಮನೆಗೆ ನುಗ್ಗಿ ನಾಶಗೊಳಿಸಿದರೂ ಅಚ್ಚರಿ ಇಲ್ಲ. ಸರ್ಕಾರ ಮುಸ್ಲಿಂ ಮತಗಳನ್ನು ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದ್ದು, ಮುಂದಿನ ದೇಶಭಕ್ತರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಪ್ರಧಾನ ಕಾರ್ಯದರ್ಶಿ ವಿನೋದ್‌ ರಾಜ್, ಡಿ.ಬಿ.ಶ್ರೀಧರ್, ಸಾಗರ್, ಕರಾಟೆ ರಮೇಶ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು