ದಾವಣಗೆರೆ: ಪರಿಶಿಷ್ಟ ಜಾತಿ ಉಪ ಯೋಜನೆ, ಬುಡಕಟ್ಟು ಉಪ ಯೋಜನೆ ಅಡಿ ಮಂಜೂರಾದ ಅನುದಾನ ಸಮರ್ಪಕವಾಗಿ ಬಳಕೆಯಾಗದೇ ವಾಪಸ್ ಹೋಗುವುದು ಒಂದು ಕಡೆಯಾದರೆ, ಮತ್ತೊಂದೆಡೆ ಹಲವು ಇಲಾಖೆಗಳಿಗೆ 2023–24ನೇ ಸಾಲಿನ ಕಾಮಗಾರಿಗಳಿಗೆ ಅನುದಾನವೇ ಬಿಡುಗಡೆ ಆಗಿಲ್ಲ.
ಮಹಾನಗರ ಪಾಲಿಕೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೃಷಿ, ಸಣ್ಣ ನೀರಾವರಿ, ಸಹಕಾರ ಸಂಘಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪದವಿಪೂರ್ವ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಪಶು ಸಂಗೋಪನೆ, ತೋಟಗಾರಿಕೆ, ಕಂದಾಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಬೆಸ್ಕಾಂ, ಕೆಎಸ್‌ಆರ್‌ಟಿಸಿ, ದಾವಣಗೆರೆ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆಯಾಗಿಲ್ಲ.
‘2023–24ನೇ ಸಾಲಿಗೆ ವಿವಿಧ ಇಲಾಖೆಗಳ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಅಡಿ ಆಗಸ್ಟ್ ಅಂತ್ಯದವರೆಗೆ ದಾವಣಗೆರೆ ಜಿಲ್ಲೆಗೆ ₹ 516 ಕೋಟಿ ನಿಗದಿಪಡಿಸಲಾಗಿತ್ತು. ಅದರಲ್ಲಿ ₹ 203 ಕೋಟಿ ಬಿಡುಗಡೆಯಾಗಿದ್ದು, ₹ 115 ಕೋಟಿ ಖರ್ಚಾಗಿದೆ’ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
‘ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ₹ 11,000 ಕೋಟಿಯನ್ನು ಸರ್ಕಾರದ 5 ಗ್ಯಾರಂಟಿ ಯೋಜನೆಗಾಗಿ ಬಳಸಿಕೊಂಡಿರುವ ಅನುಮಾನವಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಆವರಗೆರೆ ವಾಸು ದೂರಿದ್ದಾರೆ.
‘ಕಳೆದ ಜುಲೈನಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಿಗಾಗಿ ₹ 34,293 ಕೋಟಿ ಅನುದಾನ ಮೀಸಲಿಟ್ಟಿರುವುದನ್ನು ಸೆಕ್ಷನ್ 7(ಡಿ) ಮೂಲಕ ಬೇರೆ ಯೋಜನೆಗಳಿಗೆ ವರ್ಗಾಯಿಸುವ ದುರುದ್ದೇಶದಿಂದ ಮಾಡಿರುವ ತಿದ್ದುಪಡಿಯನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹವಾದ ಕ್ರಮ. ಆದರೆ, ಅನುದಾನ ಬಿಡುಗಡೆಯಾಗದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ವಾಸಿಸಿರುವ ಗ್ರಾಮ, ಕಾಲೊನಿಗಳಲ್ಲಿ ರಸ್ತೆ, ಚರಂಡಿ, ಶೌಚಾಲಯಗಳು ನಿರ್ಮಾಣವಾಗಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘ಮಹಾನಗರ ಪಾಲಿಕೆಗೆ ಅನುದಾನ ಬಂದಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಕಾಲೊನಿಗಳ ಕಾಮಗಾರಿಗೆ ಟೆಂಡರ್ ಕರೆಯುತ್ತಾರೆ. ಆದರೆ ಈ ಬಾರಿ ಟೆಂಡರ್ ಕರೆದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರೊಬ್ಬರು ತಿಳಿಸಿದರು.
‘ಪರಿಶಿಷ್ಟ ಜಾತಿ ಉಪ ಯೋಜನೆ ಬುಡಕಟ್ಟು ಉಪ ಯೋಜನೆಯ ಅನುದಾನ ಬಿಡುಗಡೆ ಆಗದ್ದರಿಂದ ಗ್ರಾಮೀಣ ಭಾಗದಲ್ಲಿ ರಸ್ತೆ ಚರಂಡಿ ಹಾಗೂ ಶೌಚಾಲಯ ನಿರ್ಮಾಣ ಆಗುತ್ತಿಲ್ಲ. ಇದರಿಂದಾಗಿ ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೂ ಹೊಡೆತ ಬಿದ್ದಿದೆ. ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡಂತಾಗಿದೆ’ ಎಂದು ಆವರಗೆರೆ ವಾಸು ತಿಳಿಸಿದ್ದಾರೆ.
‘ರಾಜ್ಯವಲಯ ಕಾರ್ಯಕ್ರಮಗಳಿಂದ ಇಲಾಖೆಗಳಿಗೆ ಹಂಚಿಕೆಯಾಗಿದ್ದರೆ ಅನುದಾನ ಬಿಡುಗಡೆಯಾಗುತ್ತದೆ. ಕೆಲವೊಂದು ಯೋಜನೆಗಳಿಗೆ ಮೀಸಲಿರಿಸಲಾದ ಅನುದಾನ ಮಾರ್ಚ್ ಅಂತ್ಯಕ್ಕೆ ಖರ್ಚು ಮಾಡದಿದ್ದರೆ ವಾಪಸ್ ಹೋಗುತ್ತದೆ. ಕೆಲವೊಂದು ಹೆಡ್ ಆಫ್ ಅಕೌಂಟ್‌ನ ಅನುದಾನವನ್ನು ನಿಧಾನವಾಗಿ ಖರ್ಚು ಮಾಡಬಹುದು. ಕೆಲವೊಂದು ಅಕ್ಟೋಬರ್ ನವೆಂಬರ್ ತಿಂಗಳಿಗೆ ಬರುತ್ತವೆ. ಕೆಲವು ಇಲಾಖೆಗಳಲ್ಲಿ ರಾಜ್ಯ ವಲಯದ ಕಾರ್ಯಕ್ರಮಗಳು ಇಲ್ಲದೇ ಇದ್ದಾಗ ಅನುದಾನ ಬಿಡುಗಡೆಯಾಗುವುದಿಲ್ಲ. ಫಲಾನುಭವಿಗಳ ಪಟ್ಟಿ ನೋಡಿ ಮುಂದಿನ ಮಾರ್ಚ್ ವೇಳೆಗೆ ಬಿಡುಗಡೆಯಾಗುತ್ತದೆ’ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ನಾಗರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.