ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಯಾಗಡ್‌| ₹ 951 ಕೋಟಿ ವೆಚ್ಚದಲ್ಲಿ ತಾಂಡಾಗಳ ಅಭಿವೃದ್ಧಿ: ಬಸವರಾಜ ಬೊಮ್ಮಾಯಿ

ಸಂತ ಸೇವಾಲಾಲ್ ಜಯಂತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 15 ಫೆಬ್ರುವರಿ 2023, 5:07 IST
ಅಕ್ಷರ ಗಾತ್ರ

ಭಾಯಾಗಡ್‌ (ಸೂರಗೊಂಡನಕೊಪ್ಪ): ‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಒತ್ತು ನೀಡಿದ್ದರು. ನಿಗಮದಿಂದ ಸುಮಾರು ₹ 951 ಕೋಟಿ ವೆಚ್ಚದಲ್ಲಿ ತಾಂಡಾಗಳ ಅಭಿವೃದ್ಧಿ ಆಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 284ನೇ ಜಯಂತಿ ಕಾರ್ಯಕ್ರಮ ಹಾಗೂ ವಿವಿಧ ಕಟ್ಟಡಗಳನ್ನು ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಬಂಜಾರ ಸಮಾಜದ ಮಕ್ಕಳು ಶಿಕ್ಷಣ ಪಡೆಯಬೇಕು. ವಲಸೆ ಹೋಗುವವರ ಮಕ್ಕಳಿಗೆ ಶಿಕ್ಷಣ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಈಡೇರಿಸಲು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ವಿಶೇಷ ವಸತಿ ಶಾಲೆ ಪ್ರಾರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

‘ಬಂಜಾರ ಸಮಾಜದವರು ಅತ್ಯಂತ ಬುದ್ಧಿವಂತರಾಗಿದ್ದು, ಯಾರಿಗೂ ಕಡಿಮೆ ಇಲ್ಲದಂತೆ ಎಲ್ಲ ರಂಗದಲ್ಲಿ ಮುಂದೆ ಬರುತ್ತಿದ್ದಾರೆ. 200 ಜನ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೀಸಲಿದ್ದ ಧಾರವಾಡ ಕರ್ನಾಟಕ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ 98 ಜನ, ಇತ್ತೀಚಿನ ನ್ಯಾಯಾಧೀಶರ ನೇಮಕಾತಿಯಲ್ಲಿ ನೇಮಕಾತಿಯಲ್ಲಿ 14 ಜನರಲ್ಲಿ 6 ಮಂದಿ ಲಂಬಾಣಿ ಸಮಾಜದವರು ಆಯ್ಕೆಯಾಗಿರುವುದು ಹೆ‌ಮ್ಮೆಯ ಸಂಗತಿ’ ಎಂದು ಹೇಳಿದರು.

‘ಸಮಾಜಕ್ಕೆ ಅವಕಾಶ ಹೆಚ್ಚಬೇಕು, ಬುದ್ಧಿವಂತಿಕೆಗೆ ಅವಕಾಶ ಕೊಟ್ಟರೆ ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಾರೆ. ಈ ಕಾರಣಕ್ಕೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ 7ಕ್ಕೆ ಹೆಚ್ಚಿಸಿದೆ. ಇದರಿಂದ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಅವಕಾಶ ಸಿಗಲಿವೆ’ ಎಂದರು.

‘ಕೊಪ್ಪಳ ಜಿಲ್ಲೆಯಲ್ಲಿ ಬಹದ್ದೂರ್ ಬಂಡೆಯಲ್ಲಿ ಪಾರಂಪರಿಕ ಗ್ರಾಮ, ಬೀದರ್ ಜಿಲ್ಲೆಯಲ್ಲಿ ಕೌಶಲ ತರಬೇತಿ ನೀಡುವ ಕಾರ್ಯಕ್ರಮವನ್ನು ತಾಂಡಾ ಅಭಿವೃದ್ಧಿ ನಿಗಮದಿಂದ ವಿಶೇಷ ಅನುದಾನ ನೀಡಲಾಗುವುದು.

‘ಸಂತ ಸೇವಾಲಾಲರು ನ್ಯಾಮತಿಯಲ್ಲಿ ಹುಟ್ಟಿ, ಸಮಾಜವನ್ನು ಜಾಗೃತಗೊಳಿಸಿ, ತಮ್ಮ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸಿ ಬದುಕುವ ದಾರಿಯನ್ನು ತೋರಿಸಿದ್ದಾರೆ. ಸತ್ಯವನ್ನು ನುಡಿಯಿರಿ, ಪ್ರಾಣಿ ಹಿಂಸೆ ಮಾಡದಿರಿ, ದಯೆಯೇ ಧರ್ಮ, ದುಡಿಮೆಯಿಂದ ಬದುಕು ಎಂಬ ಮಂತ್ರಗಳಿಂದ ಈ ಸಮಾಜವನ್ನು ಉದ್ಧಾರ ಮಾಡುವ ಕೆಲಸ ಮಾಡಿದ್ದಾರೆ. ಅವರ ವಿಚಾರಧಾರೆಗಳು ಪ್ರಸ್ತುತ. ಬಂಜಾರ ಸಮಾಜ ವೈಶಿಷ್ಟ್ಯಪೂರ್ಣ ಸಮಾಜವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ. ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ’ ಎಂದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಶರಣ ಚಳವಳಿ ನಂತರ ದಾಸ ಪರಂಪರೆ, ಭಕ್ತಿ ಪಂಥದಲ್ಲಿ ಕೊಡುಗೆ ನೀಡಿದವರಲ್ಲಿ ಸಂತ ಸೇವಾಲಾಲ್ ಪ್ರಮುಖರು. ಅಲೆಮಾರಿ ಜನಾಂಗವಾದ ಬಂಜಾರರು ಇತ್ತೀಚೆಗೆ ಸರ್ವ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಸೇವಾಲಾಲರ ಜನ್ಮಸ್ಥಳವನ್ನು ಪವಿತ್ರ ಯಾತ್ರಾಸ್ಥಳವಾಗಿ ಅಭಿವೃದ್ಧಿಗೊಳಿಸಿ, ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಅನುಕೂಲ ಮಾಡಿಕೊಡುತ್ತಿದೆ. ಎಲ್ಲರನ್ನೂ ಒಳಗೊಂಡ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ನಮ್ಮ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಮುಂದೆಯೂ ಅಭಿವೃದ್ಧಿ ಕಾಮಗಾರಿ ಮುಂದುವರೆಯಲಿವೆ’ ಎಂದು ನುಡಿದರು.

ನವೀಕರಿಸಿದ ಸಂತ ಸೇವಾಲಾಲ್ ಗರ್ಭಗುಡಿ, ಧರ್ಮಶಾಲಾ ಕಟ್ಟಡ, ಸಿಬ್ವಂದಿ ವಸತಿಗೃಹ, ಬಸ್ ಟರ್ಮಿನಲ್ ಕಟ್ಟಡದಲ್ಲಿ ಮಳಿಗೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷ ರುದ್ರಪ್ಪ ಎಂ.ಲಮಾಣಿ ಮಾತನಾಡಿ,‘ ಸಂತ ಸೇವಾಲಾಲ್ ಗರ್ಭಗುಡಿಯನ್ನು ಪ್ರಭು ಚವ್ವಾಣ್ ಸ್ವಂತ ಅನುದಾನದಿಂದ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರಕ್ಕೆ 300 ವರ್ಷಗಳ ಇತಿಹಾಸವಿದೆ. ಸೂರಗೊಂಡನಕೊಪ್ಪದಲ್ಲಿ 15 ಎಕರೆ ಜಾಗವಿದ್ದು, ಅಲ್ಲಿ ವಸತಿ ಶಾಲೆ ನಿರ್ಮಾಣ ಮಾಡಬೇಕು. ಹಳೇ ಜೋಗದಿಂದ ಚಿನ್ನಿಕಟ್ಟೆವರೆಗೆ ರಸ್ತೆ ನಿರ್ಮಾಣ ಮಾಡಬೇಕು. ಇದನ್ನು ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಸೇವಾಲಾಲ್ ವಂಶಸ್ಥರಾದ ಧರ್ಮಗುರು ಬಾಬು ಸಿಂಗ್ ಮಹಾರಾಜ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಾಜಿ
ಶಾಸಕರಾದ ಎಂ.ಬಸವರಾಜ ನಾಯ್ಕ, ಚಂದ್ರನಾಯ್ಕ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ರಾಮಾನಾಯ್ಕ, ರಾಘವೇಂದ್ರ ನಾಯ್ಕ, ಭೋಜನಾಯ್ಕ, ಮಾರುತಿ ನಾಯ್ಕ, ಸುರೇಂದ್ರನಾಯ್ಕ, ಈರನಾಯ್ಕ, ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿವಿಧ ಬೇಡಿಕೆಗಳಿಗೆ ಮನವಿ

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಾತನಾಡಿ,‘ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ’ ಎಂದರು.

ಹಕ್ಕು ಪತ್ರ ನೀಡಿರುವವರಿಗೆ ₹ 5ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಬೇಕು. ಸಮಾಜದವರು ಕೂಲಿಗಾಗಿ ಹಲವು ಕಡೆ ವಲಸೆ ಹೋಗುತ್ತಿದ್ದು, ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು 5 ಜಿಲ್ಲೆಗಳಲ್ಲಿ ಋತುಮಾನ ಶಾಲೆ ಆರಂಭಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಬಹದ್ದೂರ್ ಬಂಡೆಯಲ್ಲಿ ಪಾರಂಪರಿಕ ಗ್ರಾಮ, ಬೀದರ್ ಜಿಲ್ಲೆಯಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭಿಸಬೇಕು. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಜೈ ಸೇವಾಲಾಲ್ ಘೋಷಣೆಗೆ ಆಗ್ರಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುವಾಗ ‘ಜೈಶ್ರೀರಾಂ’ ಎಂದು ಘೋಷಣೆ ಕೂಗಿದಾಗ ಕೆಲವರು ಕೂಗಿದರು. ಜೈ ಸೇವಾಲಾಲ್ ಘೋಷಿಸುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿ ಅದೇ ವಿಷಯಕ್ಜೆ ಬರುತ್ತೇನೆ ಎಂದು ಸುಮ್ಮನಾಗಿಸಿದರು. ಆರಂಭದಲ್ಲಿ ಬಂಜಾರಾ ಭಾಷೆಯಲ್ಲೇ ಸ್ವಾಗತ ಕೋರಿದರು.

**

ಶಿಕ್ಷಣ, ಉದ್ಯೋಗ, ಸೂರು, ಕುಲ ಕಸುಬಿಗೆ ಆರ್ಥಿಕ ಬೆಂಬವನ್ನು ಕಾಯಕ ಯೋಜನೆಯಡಿ ₹ 50 ಸಾವಿರ ನೀಡಲಾಗುವುದು. ಯುವಕರು ಸ್ವಾವಲಂಬಿಗಳಾಗಿ ಉನ್ನತ ಮಟ್ಟಕ್ಕೆ ಬೆಳೆಯಬೇಕು
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಸಂತ ಸೇವಾಲಾಲರು ಜನಿಸಿದ ಕ್ಷೇತ್ರ ನನ್ನ ತಾಲ್ಲೂಕಿನಲ್ಲಿರುವುದು ಅದೃಷ್ಟ. ಈ ಕ್ಷೇತ್ರವನ್ನು ಎರಡನೆಯ ಧರ್ಮಸ್ಥಳವನ್ನಾಗಿ ಮಾಡಬೇಕು. ಜಯಂತ್ಯುತ್ಸವಕ್ಕೆ ಸಿ.ಎಂ₹ 4.50 ಕೋಟಿ ಅನುದಾನ ನೀಡಿದ್ದಾರೆ.
ಎಂ.ಪಿ. ರೇಣುಕಾಚಾರ್ಯ, ಶಾಸಕ,

ಬಂಜಾರ ನಿಗಮಕ್ಕೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಬೇಕು. ಭಾಯಾಗಡ್‌ನಲ್ಲಿ ಮ್ಯೂಸಿಯಂ ಆರಂಭಿಸಬೇಕು.
-ಪ್ರಭು ಚವ್ಹಾಣ್, ಪಶು ಸಂಗೋಪನಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT