ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿಗಾಲಲ್ಲಿ ಪಯಣ, ಬತ್ತದ ಉತ್ಸಾಹ

ದಾವಣಗೆರೆಯಿಂದ ಕೊಟ್ಟೂರಿಗೆ ಪಾದಯಾತ್ರೆ ಪಾದಯಾತ್ರೆ ಹೊರಟ ಭಕ್ತರು
Last Updated 16 ಫೆಬ್ರುವರಿ 2020, 9:00 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕೈಯಲ್ಲಿ ಕೋಲು, ಮತ್ತೊಂದರಲ್ಲಿ ಬ್ಯಾಟರಿ, ಹೆಗಲಲ್ಲಿ ಬ್ಯಾಗ್, ಅದರೊಳಗೆ ಬಟ್ಟೆ, ನೀರಿನ ಬಾಟೆಲ್, ಬರಿಗಾಲಿನಲ್ಲಿ ಪಯಣ..

–ಇವು ಶನಿವಾರ ಸಂಜೆ ಮಾಗಾನಗಳ್ಳಿ ರಸ್ತೆಯಲ್ಲಿ ಕಂಡು ಬಂದ ದೃಶ್ಯಗಳು. ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಟ್ರಸ್ಟ್ ಆಯೋಜಿಸಿದ್ದ 41ನೇ ಪಾದಯಾತ್ರೆಗೆ ಸಾವಿರಾರು ಭಕ್ತರು ಹಸಿವು, ನಿದ್ರೆಯನ್ನು ಲೆಕ್ಕಿಸದೇ ಕೊಟ್ಟೂರಿಗೆ ಪಾದಯಾತ್ರೆ ಬೆಳೆಸಿದರು.

ಹಾಸನ ಜಿಲ್ಲೆಯ ಅರಸೀಕರೆ, ಹೊನ್ನಾಳಿ, ಸಂತೆಬೆನ್ನೂರು, ಹರಿಹರ ಸೇರಿ ವಿವಿಧ ಭಾಗಗಳ ಭಕ್ತರು ದಾವಣಗೆರೆಯಿಂದ ಕೊಟ್ಟೂರಿನತ್ತ ಸಾಗಿದರು. ಮಕ್ಕಳು, ವೃದ್ಧರು, ಯುವಕ–ಯುವತಿಯರು, ನವಜೋಡಿಗ ಪಾಲ್ಗೊಂಡಿದ್ದು, ವೃದ್ಧರಲ್ಲೂ ಯುವಕರ ಉತ್ಸಾಹ ಕಾಣುತ್ತಿತ್ತು. ಹಸಿವು, ಬಾಯಾರಿಕೆಗಳ ಅರಿವಿಲ್ಲದೇ ಸಾಗಿದರು.

ದಾವಣಗೆರೆಯಿಂದ ಪಾದಯಾತ್ರೆ ಬೆಳೆಸಿದ ಭಕ್ತರು ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ನಿರ್ಮಿಸಿರುವ ಗುರುಬಸವರಾಜೇಂದ್ರ ಸ್ವಾಮಿಯ ದೇವಾಲಯದಲ್ಲಿ ಕೊಟ್ಟೂರೇಶ್ವರನಿಗೆ ನಮಿಸಿ ‘ಗುರುಕೊಟ್ಟೂರೇಶ್ವರ ಮಹಾರಾಜ್ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಮುನ್ನಡೆದರು.

ರಸ್ತೆಯುದ್ದಕ್ಕೂ ದಾನಿಗಳು ಭಕ್ತರಿಗೆ ಕುಡಿಯುವ ನೀರಿನ ಬಾಟೆಲ್‌, ಬಿಸ್ಕೆಟ್, ಮಿರ್ಚಿ–ಮಂಡಕ್ಕಿ, ಹಣ್ಣುಗಳು, ಟೀ, ಕಾಫಿ, ಮಜ್ಜಿಗೆ ಹಾಗೂ ಪಾನಕಗಳನ್ನು ನೀಡಿದರು.

‘62 ವರ್ಷಗಳಿಂದ ಬೇರೆಯವರ ಹೆಸರಿನಲ್ಲಿ ಇದ್ದ ಜಮೀನು ಪಾದಯಾತ್ರೆ ಕೈಗೊಂಡ ನಂತರ ನನ್ನ ಹೆಸರಿಗೆ ಬರೆದುಕೊಟ್ಟರು’ ಎನ್ನುತ್ತಾರೆ ರಾಮತೀರ್ಥದ ವಿರೂಪಾಕ್ಷಪ್ಪ.

ಭೂಸನೂರು ಸುಜಾತಮ್ಮ ‘ಮದುವೆಯಾದ ನಂತರ 13 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದೇನೆ. ಕಷ್ಟಗಳು ಪರಿಹರಿದಿವೆ’ ಎನ್ನುತ್ತಾರೆ.

ಶನಿವಾರ ಸಂಜೆ ನಡೆದ ಪಾದಯಾತ್ರೆಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಯ್ಯನಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪಾದಯಾತ್ರೆ ಮಾಡುವಾಗ ದೇವರಲ್ಲಿ ಶ್ರದ್ಧೆ ಭಕ್ತಿ ಇರಬೇಕು. ಪರಿಶುದ್ಧ ಮನಸ್ಸಿನಿಂದ ಪಾದಯಾತ್ರೆ ಬೆಳೆಸಿದರೆ ಭಗವಂತನು ಒಲಿಯುತ್ತಾನೆ’ ಎಂದು ಹೇಳಿದರು.

ಕೊಟ್ಟೂರು ಮಹಲ್ ಮಠದ ಶಂಕರಸ್ವಾಮಿ, ಶ್ರೀಗುರುಬಸವೇಶ್ವರ ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಸಹಕಾರ್ಯದರ್ಶಿ ಬಿ.ಚಿದಾನಂದ, ಅಜ್ಜಂಪುರ ಶೆಟ್ರು ಮೃತ್ಯುಂಜಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT