ಮಂಗಳವಾರ, ಮಾರ್ಚ್ 2, 2021
23 °C
‘ಪಟ್ಟಣಗಳ ಸಾಮಾಜಿಕ ಪಿಡುಗು’ ಪುಸ್ತಕ ಬಿಡುಗಡೆಗೆ ಅವರಿಲ್ಲ!

ಧಾರವಾಡದ ಅಪಘಾತದಲ್ಲಿ ಮೃತಪಟ್ಟವರ ಮನಮಿಡಿಯುವ ಕತೆಗಳಿವು...!

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

ದಾವಣಗೆರೆ: ಒಬ್ಬರು ಮೆಡಿಕಲ್ ಸೀಟ್‌ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಜ್ಜನ ಹೆಸರಲ್ಲಿ ಚಿನ್ನದ ಪದಕಕ್ಕಾಗಿ ಧನಸಹಾಯ ಮಾಡಿದರೆ, ಮತ್ತೊಬ್ಬರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪುಸ್ತಕ ತರಲು ನಿರ್ಧರಿಸಿದ್ದರು..! 

ಧಾರವಾಡದಲ್ಲಿ ಇಟ್ಟಿಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಲ್ಲಿ ಡಾ.ಮತ್ತಿಹಳ್ಳಿ ಪ್ರಕಾಶ್ ಅವರ ಪತ್ನಿ ಡಾ. ವೀಣಾ ಪ್ರಕಾಶ್ ಹಾಗೂ ಮಾಜಿ ಶಾಸಕ ಗುರುಸಿದ್ದನಗೌಡ ಅವರ ಸೊಸೆ, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್ ಅವರ ಪತ್ನಿ ಪ್ರೀತಿ ರವಿಕುಮಾರ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪರಂಜ್ಯೋತಿ ಎಂಬವರು ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ತಂಗಿಯ ಸೊಸೆಯಾಗಿದ್ದು, ಮೃತಪಟ್ಟವರಲ್ಲಿ ಹೆಚ್ಚಿನ ಮಂದಿ ಗೃಹಿಣಿಯರೇ ಇದ್ದಾರೆ. 

ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಅವರ ಸಹೋದರ ಎಚ್.ಎಂ.ಮಲ್ಲಪ್ಪ ಅವರ ಸೊಸೆ ವೇದಾ ಅವರಿಗೆ ತೀವ್ರ ಗಾಯಗಳಾಗಿದ್ದು, ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

‘ಡಾ.ವೀಣಾ ಪ್ರಕಾಶ್ ಸಂಬಂಧಿಕ ವಿದ್ಯಾರ್ಥಿಯೊಬ್ಬರಿಗೆ ಮೆಡಿಕಲ್ ಸೀಟ್‌ಗಾಗಿ ₹ 2.50 ಲಕ್ಷವನ್ನು ನೀಡಿದ್ದಾರೆ. ಬೆಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ಸೀಟು ಸಿಕ್ಕಿದ್ದು, ಅವರಿಗೆ ಶುಲ್ಕ ಪಾವತಿಸುವ ಶಕ್ತಿ ಇರಲಿಲ್ಲ. 15 ದಿನಗಳ ಹಿಂದಷ್ಟೇ ಹಣ ನೀಡಿದ್ದರು. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅಜ್ಜನ ಹೆಸರಲ್ಲಿ ಚಿನ್ನದ ಪದಕಕ್ಕಾಗಿ ₹ 50 ಸಾವಿರ ನೀಡಿದ್ದು, ಇದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ’ ಎಂದು ವೀಣಾ ಪ್ರಕಾಶ್ ಅವರ ತಂದೆ ಡಾ.ರಾಜಶೇಖರ್ ಹೆಮ್ಮೆಯಿಂದ ಹೇಳಿದರು.


ಮಕ್ಕಳ ಜೊತೆ ಡಾ. ವೀಣಾ 

ಆಸ್ಪತ್ರೆಗಳಲ್ಲಿ ನೀರವ ಮೌನ

‌ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಸುಜನ್ ಉದರರೋಗ ಮತ್ತು ಸ್ತ್ರೀ ಆರೈಕೆ ಕೇಂದ್ರಕ್ಕೆ ಬೆಳಿಗ್ಗೆ ಎಂದಿನಂತೆಯೇ ಕ್ಲಿನಿಕ್‌ಗೆ ಬಂದ ರೋಗಿಗಳು ಡಾ.ವೀಣಾ ಪ್ರಕಾಶ್ ಅವರ ಸಾವಿನ ಸುದ್ದಿ ಕೇಳಿ ಒಂದು ಕ್ಷಣ ಸ್ತಬ್ಧರಾದರು. ಚಿಕಿತ್ಸೆ ಸಿಗದೆ ವಾಪಸ್ ಹೋದರು. ಪ್ರೀತಿ ರವಿಕುಮಾರ್ ಅವರ ಆರೈಕೆ ಆಸ್ಪತ್ರೆಯಲ್ಲಿಯೂ ನೀರವ ಮೌನ ಆವರಿಸಿತ್ತು. ಸಿಬ್ಬಂದಿ ತಮ್ಮ ಒಡತಿಯ ಸಾವಿನ ಸುದ್ದಿ ಕೇಳಿ ಕಣ್ಣೀರಾದರು.

ವಾರದ ಹಿಂದೆ ಚರ್ಚೆ

ಪ್ರವಾಸ ಹೊರಡುವ ಸಂಬಂಧ ಡಾ.ವೀಣಾ ಪ್ರಕಾಶ್ ಅವರು ತಮ್ಮ ಸ್ನೇಹಿತೆಯರ ಜೊತೆ ವಾರದ ಹಿಂದೆಯಷ್ಟೇ ಐಎಂಎ ಸಭಾಂಗಣದಲ್ಲಿ ಚರ್ಚೆ ನಡೆಸಿದ್ದರು. ಯಾವಾಗ ಹೇಗೆ ಹೋಗಬೇಕು ಎಂಬುದನ್ನು ನಿರ್ಧರಿಸಲಾಗಿತ್ತು.  

ಡಿ. 30ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು: ಡಾ.ವೀಣಾ ಪ್ರಕಾಶ್ ಹಾಗೂ ಡಾ.ಮತ್ತಿಹಳ್ಳಿ ಪ್ರಕಾಶ್ ಅವರು ಡಿಸೆಂಬರ್ 30ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಅಲ್ಲದೇ ಮನೆಯಲ್ಲಿ ಹೋಮ, ಪೂಜೆ ನಡೆಸಿದ್ದರು.

‘ಡಾ.ವೀಣಾ ಉತ್ತಮ ವೈದ್ಯರಾಗಿ ದ್ದರು. ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಅವರು ಇಲ್ಲದಿರು ವುದನ್ನು ನೆನೆಸಿಕೊಳ್ಳಲು ಕಷ್ಟವಾಗುತ್ತದೆ’ ಎಂದು ಮಹಾನಗರ ಪಾಲಿಕೆಯ ಗೋವಿಂದರಾಜು, ಗೋವಿಂದ ನಾಯ್ಕ ಹೇಳುತ್ತಾರೆ.

‘ಸಾಮಾಜಿಕ ಪಿಡುಗುಗಳ’ ಬಗ್ಗೆ ಪುಸ್ತಕ


Caption

ಪ್ರೀತಿ ರವಿಕುಮಾರ್ ಅವರು ‘ಪಟ್ಟಣಗಳಲ್ಲಿರುವ ಸಾಮಾಜಿಕ ಪಿಡುಗುಗಳು’ ಕುರಿತು ಪುಸ್ತಕ ಬರೆದಿದ್ದರು. ನಗರ ಪ್ರದೇಶಗಳ ನಿರುದ್ಯೋಗ, ಬಡತನ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಈ ಪುಸ್ತಕ ಬರೆದಿದ್ದರು. ಫೆಬ್ರುವರಿ 3ಕ್ಕೆ ಅವರ ವಿವಾಹವಾಗಿ 25 ವರ್ಷಗಳು ತುಂಬಲಿದ್ದು, ಅಂದು ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸಂಜಯ್ ಗುಬ್ಬಿ ಹಾಗೂ ಉಲ್ಲಾಸ್ ಕಾರಂತ್ ಇವರಲ್ಲಿ ಒಬ್ಬರು ಬಿಡುಗಡೆ ಮಾಡಬೇಕಿತ್ತು. ಆದರೆ ಪುಸ್ತಕ ಬಿಡುಗಡೆಗೆ ಅವರು ಇಲ್ಲ’ ಎಂದು ಪ್ರೀತಿ ಅವರ ಮಾವ, ಮಾಜಿ ಶಾಸಕ ಗುರುಸಿದ್ದನಗೌಡ ತಿಳಿಸಿದರು.

‘20 ಮಂದಿ ತೆರಳಲು ನಿರ್ಧರಿಸಿದ್ದರು’

‘ಪ್ರೀತಿ ತಮ್ಮ ಬ್ಯಾಚ್‌ಮೇಟ್‌ಗಳ ಜೊತೆ ಸಂಕ್ರಾಂತಿ ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದರು. ಆರಂಭದಲ್ಲಿ 20ಕ್ಕಿಂತ ಹೆಚ್ಚು ಮಂದಿ ಹೋಗಬೇಕು ಎಂದು ನಿರ್ಧರಿಸಿದ್ದರು. ಆದರೆ 13 ಮಂದಿಯಾದ್ದರಿಂದ ಮಿನಿ ಬಸ್‌ನಲ್ಲಿ ಹೊರಟಿದ್ದರು. ಪ್ರೀತಿ ಎಂ.ಎಸ್ಸಿ ಮುಗಿಸಿ ಪಿಎಚ್.ಡಿ ಮಾಡಿದ್ದು, ನನ್ನ ತಂಗಿಯ ಮಗಳನ್ನೇ ನನ್ನ ಮಗನಿಗೆ ಮದುವೆ ಮಾಡಿದ್ದೆ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದಳು’ ಎಂದು ವಿವರಿಸಿದರು.

ಸೇಂಟ್ಸ್ ಪಾಲ್ಸ್ ಶಾಲೆಯ ವಿದ್ಯಾರ್ಥಿಗಳು: ಅಪಘಾತದಲ್ಲಿ ಮೃತಪಟ್ಟವರು ಸೇಂಟ್ ಪಾಲ್ಸ್ ಪ್ರೌಢ ಶಾಲೆಯವರು. 1989ರ ಆಸುಪಾಸಿನ ಬ್ಯಾಚ್‌ನವರಾದ ಇವರು ಎನ್‌ಸಿಸಿ ಕೆಡೆಟ್‌ ಸಹ ಆಗಿದ್ದರು. ‘ಇಂದಿನ ದಿನ ಶಾಲೆಗೆ ದುಃಖದ ದಿನವಾಗಿದೆ. ನಮ್ಮ ಶಾಲೆಯಲ್ಲಿ ಕಲಿತು ಉತ್ತಮ ಸಮಾಜ ಸೇವೆ ಮಾಡುತ್ತಿದ್ದ ವೈದ್ಯರು ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಜೀವವಾಹಿನಿಯಾಗಿ ಅವರು ನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 1946ರಲ್ಲಿ ಆರಂಭವಾದ ಈ ಶಾಲೆ ಈ ವರ್ಷ ಅಮೃತ ಮಹೋತ್ಸವ ಆಚರಿಸುವುದರಲ್ಲಿ ಇತ್ತು. ಈ ದಿನ ಅಮೂಲ್ಯ ರತ್ನಗಳನ್ನು ನಮ್ಮ ಶಾಲೆ ಕಳೆದುಕೊಂಡಿದೆ’ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬರ್ನಿ ಹಾಗೂ ಶಿಕ್ಷಕಿ ಮಂಜುಳಾ ತಿಳಿಸಿದರು. 

‘ಗೋವಾ ಪ್ರವಾಸಕ್ಕೆ ಬೆಳಗಾವಿ ಯಿಂದ ಮೂವರು ಧಾರವಾಡಕ್ಕೆ ಬಂದು ಅಲ್ಲಿಂದ ಪ್ರವಾಸಕ್ಕೆ ಹೊರಡಬೇಕಿತ್ತು. ಆದರೆ ಆದರೆ ಅವರು ಬರುವ ಮುಂಚೆಯೇ ಅಪಘಾತವಾಗಿದೆ. ಧಾರವಾಡದಿಂದ 4 ಕಿ.ಮೀ. ದೂರದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ತಿಂಡಿ ತಿಂದು ಹೊರಡುವ ಯೋಚನೆಯಿತ್ತು. ಅಷ್ಟರಲ್ಲಿ ಅಪಘಾತವಾಗಿದೆ. ಬೆಳಗಾವಿಯಿಂದ ಬಂದವರೇ ಅಲ್ಲಿದ್ದು, ಆಂಬುಲೆನ್ಸ್ ಕರೆಸಿದರು’ ಎಂದು ಐಎಂಎ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಅಂದನೂರು ರುದ್ರಮುನಿ ಮಾಹಿತಿ ನೀಡಿದರು.

ವಾಟ್ಸ್‌ಆ್ಯಪ್ ಸ್ಟೇಟಸ್ ಫೋಟೊ

ಗೋವಾ ಪ್ರವಾಸಕ್ಕೆಂದು ಮಿನಿ ಬಸ್ ಹತ್ತುತ್ತಿದ್ದಂತೆಯೇ ಬಾಲ್ಯ ಸ್ನೇಹಿತೆಯರೆಲ್ಲರೂ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ‘ಗೊ ಗೋವಾ ವಿತ್ ಸ್ಕೂಲ್ ಬಡ್ಡೀಸ್’ ಎಂದು ಬರೆದುಕೊಂಡಿದ್ದರು. ಅವರು ಬದುಕಿದ್ದಾಗ ಕೊನೆಯ ಫೋಟೊ ಇದೇ ಎನ್ನುತ್ತಾ ಕುಟುಂಬದವರು ಗೋಳಾಡುತ್ತಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು