ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿಯೂ ಡೀಸೆಲ್‌ ಸಿಗದೆ ಪರದಾಟ

ಇಂದು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಲು ನಿರ್ಧಾರ
Last Updated 31 ಮೇ 2022, 3:30 IST
ಅಕ್ಷರ ಗಾತ್ರ

ದಾವಣಗೆರೆ: ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ ಕಂಪನಿಗಳ ನಿರ್ವಹಣೆಯಲ್ಲಿನ ವೈಫಲ್ಯದಿಂದ ತೊಂದರೆಗೆ ಸಿಲುಕಿರುವ ಪೆಟ್ರೋಲ್ ಬಂಕ್ ಮಾಲೀಕರು, ಜಿಲ್ಲೆಯಲ್ಲಿ ಮಂಗಳವಾರ ತೈಲ ಖರೀದಿ ನಿಲ್ಲಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದು, ನಗರ ಸೇರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊಳ್ಳಲು ಗ್ರಾಹಕರು ಮುಗಿಬಿದ್ದರು.

ನಗರದ ಅಂಬೇಡ್ಕರ್ ವೃತ್ತದ ಬಳಿ, ಹದಡಿ ರಸ್ತೆ, ಶಾಮನೂರು ರಸ್ತೆಯ ಬಳಿ ಇರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರು ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಖರೀದಿ ಬಂದ್ ಆತಂಕದಿಂದಾಗಿ ಕೆಲವು ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿದ್ದು, ರೈತರು ಹಾಗೂ ಗ್ರಾಹಕರು ಪರದಾಡುವಂತಾಗಿದೆ.

ಗ್ರಾಮೀಣ ಭಾಗಗಳ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್‌ಗಳನ್ನು ಕ್ಯೂನಲ್ಲಿ ಇಟ್ಟು ಡೀಸೆಲ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು. ರೈತರಿಗೆ ಭತ್ತದ ಕಟಾವು ಸಮಯವಾಗಿದ್ದರಿಂದ ಯಂತ್ರಗಳಿಗೆ ಡೀಸೆಲ್ ಅಗತ್ಯ. ಆತಂಕದಲ್ಲಿ ರೈತರು ಹೆಚ್ಚೆಚ್ಚು ಖರೀದಿ ಮಾಡುತ್ತಿರುವುದರಿಂದ ಡೀಸೆಲ್‌ಗೆ ಅಭಾವ ಉಂಟಾಗಿದೆ. ವಿವಿಧ ತಾಲ್ಲೂಕುಗಳ ಗ್ರಾಮೀಣ ಭಾಗಗಳ ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿನ
ಸಮಸ್ಯೆ ಕಂಡುಬಂದಿತು.

ಮಲೇಬೆನ್ನೂರು ವರದಿ: ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ವ್ಯಾಪಾರ ಭರದಿಂದ ಸಾಗಿದ್ದು, ಹೆಚ್ಚಿನ ಸಂಖ್ಯೆ ರೈತರು ಡೀಸೆಲ್ ಕೊಳ್ಳಲು ಮುಗಿಬಿದ್ದಿದ್ದಾರೆ.

ಕಳೆದ ವಾರ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಭತ್ತದ ಒಕ್ಕಲು ಕಾರ್ಯ ಮುಂದೂಡಲಾಗಿದ್ದು, ಒಕ್ಕಲು ಯಂತ್ರ, ಟ್ರ್ಯಾಕ್ಟರ್‌ಗಳಿಗೆ ಈಗ ಕೆಲಸ ಹೆಚ್ಚಾಗಿದೆ. ಇದೆ ವೇಳೆ ಡೀಸೆಲ್ ಸಮಸ್ಯೆ ಎದುರಾಗಿದ್ದು, ಒಕ್ಕಲಿಗೆ ಅಡ್ಡಿಯಾಗುತ್ತದೆ ಎಂದು ಹೆದರಿ ರೈತರು ಕ್ಯಾನ್‌ಗಳೊಂದಿಗೆ ಬಂಕ್‌ಗಳಿಗೆ ದಾಂಗುಡಿ ಇಟ್ಟಿದ್ದಾರೆ.

ಅಕ್ಕಪಕ್ಕದ ತಾಲ್ಲೂಕಿನ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದ ಕಾರಣ ದಾಸ್ತಾನು ಖಾಲಿ ಎಂಬ ನಾಮಫಲಕ ಬಹುತೇಕ ಬಂಕ್‌ಗಳಲ್ಲಿ ಕಾಣಿಸುತ್ತಿವೆ.

‘ಸದ್ಯ ಎಲ್ಲೆಡೆ ಪೆಟ್ರೋಲ್ ಲಭ್ಯವಾಗುತ್ತಿದೆ. ಡೀಸೆಲ್ ಸಾಗಾಟ ಸಮಸ್ಯೆಯಿಂದ ಪೆಟ್ರೋಲ್ ಕೊಳ್ಳುವವರಿಗೆ ಬಿಸಿ ತಟ್ಟಲಿದೆ’ ಎನ್ನುತ್ತಾರೆ ಜನ.

‘ಗ್ರಾಮೀಣ ಪ್ರದೇಶಗಳಲ್ಲಿ ಆದಾಯಕ್ಕಿಂತಲೂ ಗ್ರಾಹಕರ ಸೇವೆಯೇ ಮುಖ್ಯ. ತೈಲ ಬೆಲೆ ಏರುಗತಿಯಲ್ಲಿದ್ದಾಗ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ. ಆದರೆ ಒಮ್ಮೇಲೆ ₹ 8 ಇಳಿಕೆ ಮಾಡಲಾಗಿದೆ. ಹಿಂದಿನ ದಿನ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದ ತೈಲವನ್ನು ಕಡಿಮೆ ದರದಲ್ಲೇ ಮರುದಿನ ಮಾರಾಟ ಮಾಡಬೇಕು. ಇದರಿಂದಾಗಿ ನಮಗೆ ನಷ್ಟವಾಗಿದೆ’ ಎಂದು ಕೊಕ್ಕನೂರಿನ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

‘ಮಂಗಳೂರಿನಿಂದ ಡೀಸೆಲ್ ಸರಬರಾಜು ಆಗಬೇಕಿತ್ತು. ಆದರೆ ಬಂದಿಲ್ಲ. ಭಾನುವಾರ ಬಂದಿದ್ದ ಡೀಸೆಲ್‌ ಸೋಮವಾರ ಬೆಳಿಗ್ಗೆಯೇ ಖಾಲಿಯಾಗಿದೆ. 55 ಕಿ.ಮೀ ದೂರದ ಶಿಕಾರಿಪುರದಿಂದಲೂ ಗ್ರಾಹಕರು ನಮ್ಮ ಪೆಟ್ರೋಲ್‌ ಬಂಕ್‌ಗೆ ಬರುತ್ತಿದ್ದಾರೆ.ಆದರೆ ಪೂರೈಕೆ ಮಾಡಲು ಆಗುತ್ತಿಲ್ಲ’ ಎಂದು ಅವರು ಹೇಳಿದರು.

*

ದಾವಣಗೆರೆ ನಗರದಲ್ಲಿ ಡೀಸೆಲ್‌ಗೆ ಸಮಸ್ಯೆಯಾಗಿಲ್ಲ. ಕಮಿಷನ್ ಹೆಚ್ಚಳ ಮಾಡಬೇಕೆಂದು ಸರ್ಕಾರಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮಂಗಳವಾರ ತೈಲ ಖರೀದಿ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು
-ಸಿದ್ದಣ್ಣ, ಜಿಲ್ಲಾ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT