ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ವರದಿಯಿಂದ ಮಾಧ್ಯಮಕ್ಕೆ ಘನತೆ

ಮಾಧ್ಯಮ ದಿನಾಚರಣೆ, ಜಿಲ್ಲಾ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೈರತಿ ಬಸವರಾಜ
Last Updated 27 ಸೆಪ್ಟೆಂಬರ್ 2022, 4:15 IST
ಅಕ್ಷರ ಗಾತ್ರ

ದಾವಣಗೆರೆ: ಮಾಧ್ಯಮಗಳು ಎಲ್ಲರ ಕಣ್ಣು ತೆರೆಸುವ ಕೆಲಸಗಳನ್ನು ಮಾಡುತ್ತಿವೆ. ನೈಜ ವರದಿ ಮಾಡಲು ಸಂವಿಧಾನವು ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ನೈಜ ವರದಿ ಮಾಡಿದಾಗ ಘನತೆ ಬರುತ್ತದೆ. ಅದನ್ನು ಮೀರಿ ತಮಗೆ ಬೇಕಾದ ಹಾಗೆ ವರದಿ ಮಾಡುವುದು ಸಮಂಜಸವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಿಂದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ನಡೆದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ನಾಲ್ಕನೇ ಅಂಗ ಎಂಬ ಹಿರಿಮೆಗೆ ಪಾತ್ರವಾಗಿರುವ ಈ ಕ್ಷೇತ್ರವು ಆ ಹಿರಿಮೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೂಟಕ್ಕೆ ನಿವೇಶನ ಕೊಡಿಸಬೇಕು ಎಂಬ ವರದಿಗಾರರ ಸಂಘದ ಬೇಡಿಕೆಯನ್ನು ಈಡೇರಿಸಬೇಕು. ಪಾಲಿಕೆ ಆಯುಕ್ತರು ಏನು ಮಾಡುತ್ತೀರಿ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ನಿವೇಶನ ಗುರುತಿಸಿ ನೀಡಬೇಕು ಎಂದು ಆಯುಕ್ತರಿಗೆ ವೇದಿಕೆಯಲ್ಲಿಯೇ ಸೂಚನೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಡಿ.ವಿ.ಜಿ. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಪತ್ರಿಕೆಗಳು ಇಂದಿಗೂ ತಮ್ಮ ಗೌರವವನ್ನು ಉಳಿಸಿಕೊಂಡಿವೆ. ದೃಶ್ಯ ಮಾಧ್ಯಮಗಳಲ್ಲಿ ಜಿಲ್ಲಾ ಮಟ್ಟದ ವರದಿಗಾರರು ಸರಿಯಾಗಿ ವರದಿ ಮಾಡಿದರೂ ಮೇಲಿನವರು ಅವರಿಗೆ ಬೇಕಾದುದನ್ನಷ್ಟೇ ತೆಗೆದುಕೊಂಡು ನಮ್ಮನ್ನು ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವರದಿಗಾರರ ಕೂಟಕ್ಕೆ ನಿವೇಶನವನ್ನು ಒದಗಿಸುವ ಜವಾಬ್ದಾರಿ ನಮ್ಮದು. ಮಂಜೂರು ಮಾಡಿಸಿಕೊಳ್ಳುವ ಜವಾಬ್ದಾರಿ ಕೂಟದ್ದು. ಆಯುಕ್ತರು ಸರಿಯಾದ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತರಾದ ಡಿ.ಎಂ. ಮಹೇಶ್‌, ಸುರೇಶ್‌ ಆರ್‌. ಕುಣೇಬೆಳಕೆರೆ, ಎ. ಫಕೃದ್ಧೀನ್‌, ಮಲ್ಲಿಕಾರ್ಜುನ ಕೈದಾಳೆ, ಆರ್‌. ಶಾಂತಕುಮಾರ್‌ ಅವರಿಗೆ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು.ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಕೂಟದ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ ಮುಂತಾದವರು ಉಪಸ್ಥಿತರಿದ್ದರು.

ಬಸವ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕೂಟದ ಖಜಾಂಚಿ ಮಧು ನಾಗರಾಜ್‌ ಕುಂದವಾಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಿ. ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರವಿಬಾಬು ವಂದಿಸಿದರು. ದೇವಿಕಾ ಸುನಿಲ್‌, ತೇಜಸ್ವಿನಿ ಪ್ರಕಾಶ್‌ ನಿರೂಪಿಸಿದರು.

‘ಹೊಸತನಕ್ಕೆ ತೆರೆದುಕೊಳ್ಳಿ’

ಮಾಧ್ಯಮದಲ್ಲಿ ಕೆಲಸ ಮಾಡಬೇಕಾದವರು ಸಮಯದ ಜತೆಗೆ ಗುದ್ದಾಡಬೇಕಾಗುತ್ತದೆ. ನಮ್ಮ ಕಷ್ಟ, ಶ್ರಮ, ಮನೆಯ ಸ್ಥಿತಿ ಇದು ಯಾವುದೂ ಹೊರಗೆ ಗೊತ್ತಾಗುವುದಿಲ್ಲ. ನಾವು ನೀಡುವ ಸುದ್ದಿಗಳಷ್ಟೇ ಅವರನ್ನು ತಲುಪುತ್ತವೆ. ಹಾಗಾಗಿ ನಮ್ಮ ನೋವು ನಲಿವುಗಳಿಗೆ ಬೇರೆಯವರು ಸ್ಪಂದಿಸುತ್ತಾರೆ ಎಂಬ ಭರವಸೆ ಇರುವುದಿಲ್ಲ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಅವರು, ‘ಕಂಪ್ಯೂಟರ್‌ನಲ್ಲಿ ಕೀ ಮಾಡಲು ಬರುತ್ತದೆಯೇ ಎಂದು ಹಿಂದೆ ಯುವ ಪತ್ರಕರ್ತರಿಗೆ ಕೇಳುವ ಪದ್ಧತಿ ಇತ್ತು. ಈಗ ಅದು ಹಳೇಯದಾಗಿದೆ. ಕೀ ಮಾಡುವುದು ಗೊತ್ತಿರಲೇಬೇಕು. ಫೋಟೊಶಾಪ್‌ ಬರುತ್ತಾ? ಪೇಜ್‌ ಡಿಸೈನ್‌ ಬರುತ್ತಾ ಎಂದು ಕೇಳಲಾಗುತ್ತಿದೆ. ಓದುವುದು ಮತ್ತು ಬರೆಯುವುದು ಎರಡು ಸಾಕಾಗುವುದಿಲ್ಲ. ಜತೆಗೆ ತಂತ್ರಜ್ಞಾನವೂ ಪತ್ರಕರ್ತನಿಗೆ ತಿಳಿದಿರಬೇಕು. ಹೊಸತನಕ್ಕೆ ಯಾವಾಗಲೂ ತೆರೆದುಕೊಳ್ಳಬೇಕು’ ಎಂದು ವಿವರಿಸಿದರು.

‘4ಜಿ ಹೋಗಿ 5ಜಿ ಬಂದಿದೆ. ಕೈಗಾರಿಕೆಯಲ್ಲಿ 5–6ನೇ ಪೀಳಿಗೆಗಳ ಜಮಾನ ಇದು. ಹಾಗಾಗಿ ನಾವು 4ನೇ ಪೀಳಿಗೆಯವರು ಅಪ್‌ಡೇಟ್‌ ಆಗಬೇಕು. ಮಾತು, ಪದಗಳಿಗೂ ಇಂದು ದುಡ್ಡು ಬರುತ್ತದೆ. ಯೂಟ್ಯೂಬ್‌, ಬ್ಲಾಗ್‌ಗಳ ಮೂಲಕ ಸಶಕ್ತವಾದುದನ್ನು ನೀಡಲು ಸಾಧ್ಯವಾದರೆ ಜನ ನೋಡಿಯೇ ನೋಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT