ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಅವ್ಯವಹಾರ: ಐಎಎಸ್‌, ಕೆಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

Last Updated 26 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ರಾಗಿಮಸಲವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ₹ 16 ಲಕ್ಷ ಅವ್ಯವಹಾರ ಸಂಬಂಧ ಇಬ್ಬರು ಐಎಎಸ್‌ ಹಾಗೂ 4 ಜನ ಕೆಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಹರಪನಹಳ್ಳಿ ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಭ್ರಷ್ಟಾಚಾರ ವಿರೋಧಿ ವೇದಿಕೆ ಕರ್ನಾಟಕದ ರಾಜ್ಯ ಘಟಕದ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್‌, ‘ಗ್ರಾಮ ಪಂಚಾಯಿತಿಯಲ್ಲಿ 2009–10, 2010–11ರ ಸಾಲಿನಲ್ಲಿ ₹ 50 ಲಕ್ಷ ಅವ್ಯವಹಾರ ನಡೆದಿದ್ದು, ಇದರಲ್ಲಿ ₹ 16 ಲಕ್ಷದ ಅವ್ಯವಹಾರ ಸಂಬಂಧ ದಾಖಲೆಯೊಂದಿಗೆ ಲೋಕಾಯುಕ್ತಕ್ಕೆ 2013ರಲ್ಲಿ ದೂರು ನೀಡಲಾಗಿತ್ತು. ಈ ಸಂಬಂಧ 2017ರಲ್ಲಿ ಲೋಕಾಯುಕ್ತ ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ವರದಿ ಕೇಳಿತ್ತು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ಸಲ್ಲಿಸಲಾಗಿತ್ತು. ಆದರೂ ಕ್ರಮ ಕೈಗೊಳ್ಳದ ಕಾರಣ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಆರ್‌. ಚಿಕ್ಕನಗೌಡ ನ್ಯಾಯಾಲಯದಲ್ಲಿ 2019ರ ಆಗಸ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು’ ಎಂದು ವಿವರಿಸಿದರು.

ಈ ಸಂಬಂಧ ನ್ಯಾಯಾಲಯ ಈಗ ತನಿಖೆಗೆ ನಡೆಸುವಂತೆ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಪೊಲೀಸರಿಗೆ ಸೂಚಿಸಿದೆ ಎಂದು ಮಾಹಿತಿ ನೀಡಿದರು.

ವೇದಿಕೆ ರಾಜ್ಯಾಧ್ಯಕ್ಷ ಎ.ಉಮೇಶ್, ‘ಅವ್ಯವಹಾರ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಶೇಖರಗೌಡ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿದ್ದ ಎಸ್‌. ಅಶ್ವತಿ, ಎಚ್‌. ಬಸವರಾಜೇಂದ್ರ, ತಾಲ್ಲೂಕು ಪಂಚಾಯಿತಿ ಇಒ ಆಗಿದ್ದ ಮಮತಾ ಹೊಸಗೌಡರ, ಷಡಕ್ಷರಪ್ಪ, ಭೀಮಾನಾಯ್ಕ್‌, ಪಿಡಿಒ ಎಸ್‌. ನಾಗರಾಜ್‌, ತಿಪ್ಪೇಸ್ವಾಮಿ, ಬಸವರಾಜ್‌,ಪೂಜಾ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.ಪಿಡಿಒ ಎಸ್‌. ನಾಗರಾಜ್‌ ಅವರನ್ನು ಉಳಿಸಲು ಅಶ್ವತಿ ಪ್ರಕರಣ ಸಂಬಂಧ ಕ್ರಮ ಕೈಗೊಂಡಿರಲಿಲ್ಲ’ ಎಂದು ದೂರಿದರು.

ಪ್ರಕರಣ ಸಂಬಂಧ ಇದುವರೆಗೂ ಕಾನೂನು ಹೋರಾಟ ಕೈಗೊಳ್ಳಲಾಗಿತ್ತು. ನ್ಯಾಯಕ್ಕಾಗಿ ಇನ್ನು ಮುಂದೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿಎಸ್‌.ಆರ್‌. ಚಿಕ್ಕನಗೌಡ, ರಾಜು ಕಣಗಣ್ಣಾರ, ಬಿ.ಎಲ್‌. ಶಾಂತರಾಜ್‌, ಶಂಭುಲಿಂಗಪ್ಪ, ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT