ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಶೇಂಗಾ, ಕಡಲೆ ಬೆಳೆ ಹಾನಿ ಪರಿಶೀಲಿಸಿದ ಡಿಸಿ ಕವಿತಾ ಮನ್ನಿಕೇರಿ

Last Updated 1 ಡಿಸೆಂಬರ್ 2021, 5:37 IST
ಅಕ್ಷರ ಗಾತ್ರ

ಚಳ್ಳಕೆರೆ: ಅಕಾಲಿಕ ಮಳೆಯಿಂದ ಹಾನಿಗೊಳಗಾದ ಶೇಂಗಾ ಕಡಲೆ ಬೇಳೆಗಳನ್ನು ಪರಿಶೀಲಿಸಲುಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹಾಗೂ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಮಂಗಳವಾರ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ, ತಳಕು ಹೋಬಳಿ ವ್ಯಾಪ್ತಿಯ ಕೋಡಿಹಳ್ಳಿ, ರಾಮಜೋಗಿಹಳ್ಳಿ ಹಾಗೂ ಬಾಲೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ರೈತರ ಹೊಲಕ್ಕೆ ಹೋಗಿ ಹಾನಿ ವೀಕ್ಷಿಸಿದರು.

ಈ ಬಾರಿ ಸುರಿದ ಅಕಾಲಿಕ ಮಳೆಗೆ ಸಿಲುಕಿ ಹಾನಿಯಾದ ಬೆಳೆಗಳ ನಷ್ಟದ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಬೆಳೆ ನಷ್ಟಕ್ಕೆ ಆತಂಕಪಡಬಾರದು. ಜಿಲ್ಲೆಯ ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ ತರಿಸಿಕೊಡಲು ಎಲ್ಲ ಅಧಿಕಾರಿಗಳು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ದಿನಗಳಲ್ಲಿ ಎಕರೆಗೆ ಇಂತಿಷ್ಟು ಎಂದು ನಿರ್ಧಾರ ಮಾಡಿ ಸರ್ಕಾರ ಪರಿಹಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕೃಷಿ ಚಟವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಒಂದಲ್ಲ ಒಂದು ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ‘ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ 3 ಸಾವಿರ ಹೆಕ್ಟೆರ್ ಕಡಲೆ ಬೆಳೆ ಮತ್ತು ಮುಂಗಾರು ಹಂಗಾಮಿನ 40 ಸಾವಿರ ಹೆಕ್ಟೆರ್ ಶೇಂಗಾ ಸೇರಿ ತಾಲ್ಲೂಕಿನಲ್ಲಿ ಒಟ್ಟು 43 ಸಾವಿರ ಹೆಕ್ಟೆರ್ ಪ್ರದೇಶದ ಬೆಳೆ ನಷ್ಟವಾಗಿದೆ. ಕಡಲೆ ಬಿತ್ತನೆ ಮಾಡಿರುವ ರೈತರು, ಡಿಸೆಂಬರ್ 16 ರ ಒಳಗೆ ಬೆಳೆ ವಿಮೆಯನ್ನು ಪಾವತಿಸುವ ಮೂಲಕ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು’ ಎಂದು ಬೆಳೆಗಾರರಲ್ಲಿ ಮನವಿ ಮಾಡಿದರು.

ಅಕಾಲಿಕ ಮಳೆಗೆ ಸಿಲುಕಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ಈರುಳ್ಳಿ ಹಾಗೂ ಹಿಂಗಾರು ಹಂಗಾಮಿನ ಕಡಲೆ, ಹಣ್ಣು ಮತ್ತು ತರಕಾರಿ ಬೆಳೆಗಳು ನಷ್ಟವಾಗಿವೆ. ರೈತರ ಬದುಕು ತೀರಾ ದುಸ್ತರವಾಗಿದೆ ಎಂದು ಬಾಲೇನಹಳ್ಳಿ ಗ್ರಾಮದ ರೈತ ದಶರಥರೆಡ್ಡಿ ಸಮಸ್ಯೆ ವಿವರಿಸಿದರು.

ಅಕಾಲಿಕ ಮಳೆಯಿಂದ ತಾಲ್ಲೂಕಿನಲ್ಲಿ ಬೆಳೆಯ ಜತೆಗೆ ಮೇವು ನಷ್ಟವಾಗಿದೆ. ಹಾಗಾಗಿ ಪ್ರತಿ ಎಕರೆಗೆ ₹ 25 ಸಾವಿರ ಬೆಳೆ ಪರಿಹಾರ ತರಿಸಿಕೊಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಮನವಿ ಮಾಡಿದರು.

ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಪ್ರಭಾಕರ್ ಮಾತನಾಡಿದರು. ರೈತ ಮುಖಂಡ ನಾಗರಾಜ, ಮಹಾಂತೇಶ್, ಶ್ರೀಧರ, ಬೋರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT