ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಬಿಗೆ ಮಣಿದು ಕೊಳವೆಬಾವಿ ಕೊರೆಸಬೇಡಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌ ಸೂಚನೆ
Last Updated 16 ಮಾರ್ಚ್ 2019, 14:22 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆಯಲ್ಲಿ ಕೊಳವೆಬಾವಿ ಲಾಬಿ ಜಾಸ್ತಿ ಇರುವಂತೆ ಕಂಡುಬರುತ್ತಿದೆ. ಅನಗತ್ಯವಾಗಿ ಕೊಳವೆಬಾವಿ ಕೊರೆಸಬೇಡಿ. ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್‌ ಮೂಲಕ ಶುದ್ಧ ನೀರು ಪೂರೈಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಬೇಸಿಗೆಯ ಎರಡು–ಮೂರು ತಿಂಗಳ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡಿ ಹೆಚ್ಚಿನ ಆಳದವರೆಗೆ ಕೊಳವೆಬಾವಿ ಕೊರೆಸುವುದರ ಬದಲು ಟ್ಯಾಂಕರ್‌ ನೀರು ಕೊಡುವುದೇ ಉತ್ತಮ. ಟ್ಯಾಂಕರ್‌ ನೀರಿನ ಗುಣಮಟ್ಟ ಉತ್ತಮವಾಗಿರುತ್ತದೆ. ಆಳದ ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್‌ ಹಾಗೂ ಖನಿಜಾಂಶಗಳ ಪ್ರಮಾಣ ಹೆಚ್ಚಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಂದು ಬಾರಿ ಹಣ ವಿನಿಯೋಗಿಸಿದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ಜಿಲ್ಲಾಡಳಿತ ಈ ಯೋಜನೆಗೆ ಅನುದಾನ ತರಲು ಯತ್ನಿಸಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು’ ಎಂದು ಉಮಾಶಂಕರ್‌ ಅವರು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಅವರಿಗೆ ಸೂಚಿಸಿದರು.

ಇದಕ್ಕೂ ಮೊದಲು ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಎನ್‌. ರಾಜು, ‘ಜಿಲ್ಲೆಯ 58 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. 73 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 60 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ’ ಎಂದರು.

‘ಎಂಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಜಗಳೂರು ತಾಲ್ಲೂಕಿನ 172 ಹಳ್ಳಿಗಳಿಗೆ ನೀರು ಕೊಡುವ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ರಾಜು ತಿಳಿಸಿದರು.

‘ಜಲಾಶಯ, ಕೆರೆಗಳಲ್ಲಿ ಸಂಗ್ರಹಿಸಿರುವ ನೀರನ್ನು ಈಗಲೇ ಬಳಸಿ ಬರಿದು ಮಾಡಬೇಡಿ. ಮೇ ಅಂತ್ಯದವರೆಗೂ ಅವು ಸ್ವಲ್ಪ ಮಟ್ಟಿಗಾದರೂ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಖಾಸಗಿ ಕೊಳವೆಬಾವಿಗಳನ್ನೂ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಜಗಳೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ಸೂಳೆಕೆರೆಯಿಂದ ನೀರು ತಂದು 15 ದಿನಗಳಿಗೆ ಒಮ್ಮೆ ಕೊಡಲಾಗುತ್ತಿದೆ. ನಿತ್ಯದ ಬಳಕೆಗೆ ಸ್ವಲ್ಪ ಪ್ರಮಾಣದಲ್ಲಿ ಕೊಳವೆಬಾವಿಯಿಂದ ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಲಾಶಯದಲ್ಲಿನ ನೀರಿನ ಮಟ್ಟದ ವಿವರ ಪಡೆದ ಉಮಾಶಂಕರ್‌, ‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT