ಬುಧವಾರ, ಮೇ 18, 2022
23 °C

ದಾವಣಗೆರೆ: ಮಾರ್ಚ್ 1ರಿಂದ ಜಿಲ್ಲಾ ಅಕ್ಷರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾರ್ಚ್ 1ಹಾಗೂ 2ರಂದು ಎನ್.ಟಿ. ಯರ‍್ರಿಸ್ವಾಮಿ ಸಾರಥ್ಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

‘ಕಸಾಪ ಅಧ್ಯಕ್ಷ ಮನು ಬಳಿಗಾರ್ ಸಮ್ಮೇಳನ ಉದ್ಘಾಟಿಸಲಿದ್ದು, ಸಂವಾದ, ವಿಚಾರಗೋಷ್ಠಿ, ಕವಿಗೋಷ್ಠಿಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರೈತರನ್ನು ಬಾಧಿಸುತ್ತಿರುವ ಕೃಷಿ ಕಾಯ್ದೆಗಳು ಹಾಗೂ ಕೊರೊನಾ ಕುರಿತ ಕವಿಗೋಷ್ಠಿಗಳು ಇರಲಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್‌. ಮಂಜುನಾಥ ಕುರ್ಕಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾರ್ಚ್ 1ರಂದು ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣಗಳು ನೆರವೇರಲಿದ್ದು, ಬೆಳಿಗ್ಗೆ 9.30ಕ್ಕೆ ನಡೆಯುವ ಮೆರವಣಿಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉದ್ಘಾಟಿಸುವರು. ಮೆರವಣಿಗೆ ವಿದ್ಯಾನಗರ 4ನೇ ಬಸ್ ನಿಲ್ದಾಣದಿಂದ ಆರಂಭವಾಗಿ ವಿದ್ಯಾನಗರದ ಮಹಾತ್ಮಗಾಂಧಿ ಸರ್ಕಲ್ ಮೂಲಕ ಕುವೆಂಪು ಕನ್ನಡ ಭವನ ತಲುಪಲಿದೆ’ ಎಂದು ಮಾಹಿತಿ ನೀಡಿದರು.

‘ಸಮ್ಮೇಳನದಲ್ಲಿ ಸಮಕಾಲೀನ ಸಮಸ್ಯೆಗಳು, ವಿಶ್ವಪ್ರಜ್ಞೆ, ಮಾನವೀಯ ಮೌಲ್ಯಗಳು, ಪರಿಸರ ಪ್ರಜ್ಞೆ, ದೇಸಿ ಭಾಷೆಗೆ ಇರುವ ಆತಂಕಗಳು, ಸವಾಲುಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸಾಮಾಜಿಕ ಸಂಬಂಧಗಳ ಬಗ್ಗೆ ಕವನ ವಾಚನಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಾಗೂ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ದಾವಣಗೆರೆಯಲ್ಲಿ ಮುಂದಿನ ಸಮ್ಮೇಳನ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸ‌ಮ್ಮೇಳನ ದಾವಣಗೆರೆಯಲ್ಲಿ ನಡೆಯುವ ನಿರೀಕ್ಷೆ ಇದೆ. ಪರಿಷತ್ತಿನ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರು ದಾವಣಗೆರೆಯಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಒಲವು ಹೊಂದಿದ್ದು, ಸಮ್ಮೇಳನ ನಡೆಯುವ ವಿಶ್ವಾಸ ಇದೆ ಎಂದು ಮಂಜುನಾಥ್ ಕುರ್ಕಿ ತಿಳಿಸಿದರು.

ಜಿ.ಎಸ್.ಷಣ್ಮುಖಪ್ಪ, ಎ.ಆರ್.ಉಜಿನಪ್ಪ, ಟಿ. ದಿಳ್ಯೆಪ್ಪ, ರಾಜು ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು