ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ| ಜಿಲ್ಲೆಗೆ ಬೇಕಿದೆ ಬೃಹತ್‌ ಕೈಗಾರಿಕೆ, ಐಟಿ ಪಾರ್ಕ್: ಅಥಣಿ ವೀರಣ್ಣ

ರಾಜ್ಯ ಬಜೆಟ್‌ನತ್ತ ಜಿಲ್ಲೆಯ ಜನರ ಚಿತ್ತ; ಕೈಗಾರಿಕೆ ಅಭಿವೃದ್ಧಿಯ ನಿರೀಕ್ಷೆ
Last Updated 15 ಫೆಬ್ರುವರಿ 2023, 5:03 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ರಾಜ್ಯ ಬಜೆಟ್‌ನತ್ತ ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿದೆ. ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಬೇಕು. ಬೃಹತ್‌ ಕೈಗಾರಿಕೆಗಳನ್ನು ತರಬೇಕು ಎಂಬ ದಶಕದ ಬೇಡಿಕೆಗೆ ಈ ಬಾರಿಯಾದರೂ ಮನ್ನಣೆ ಸಿಗಬಹುದೇ ಎಂದು ಎದುರು ನೋಡುತ್ತಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಅನುಕೂಲವಾಗುವ ಯಾವುದೇ ಯೋಜನೆ ಘೋಷಿಸಿಲ್ಲ. ಹಿಂದಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಪ್ರಸ್ತಾಪವೇ ಆಗಿಲ್ಲ. ಈ ಬಾರಿಯಾದರೂ ಕೈಗಾರಿಕಾ ಅಭಿವೃದ್ಧಿಗೆ ಹೊಸ ಯೋಜನೆಗಳ ಘೋಷಣೆಯಾಗಬಹುದೇ ಎಂಬ ನಿರೀಕ್ಷೆ ಇಲ್ಲಿನ ಉದ್ಯಮಿಗಳದ್ದು.

ಕಿರ್ಲೋಸ್ಕರ್ ಕಾರ್ಖಾನೆ ಬಾಗಿಲು ಮುಚ್ಚಿ ಎರಡು ದಶಕಗಳಾಗಿವೆ. ಅಂದಿನಿಂದ ಹರಿಹರದ ಹೃದಯದಂತಿದ್ದ ಉಪಕರಣ ತಯಾರಿಕಾ ವಲಯ ನರಳುತ್ತಿದೆ.‌ ಇಂತಹ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಉದ್ಯಮ ಸ್ಥಾಪಿಸಲು ಆದ್ಯತೆ ನೀಡಬೇಕು. ಒಣ ಭೂಮಿ ಹೆಚ್ಚಿರುವ ಜಗಳೂರಿನಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶವಿದೆ. ಜಿಲ್ಲೆಗೊಂದು ಐಟಿ ಹಬ್, ಉದ್ಯೋಗ ಸೃಷ್ಟಿ ಯೋಜನೆಗಳು, ಜವಳಿ ಪಾರ್ಕ್, ಕೈಗಾರಿಕಾ ಕಾರಿಡಾರ್‌, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ, ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ‘ಲ್ಯಾಂಡ್‌ ಬ್ಯಾಂಕ್‌’ ಆರಂಭಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಒತ್ತಾಯ.

‘ಜವಳಿ ಪಾರ್ಕ್‌ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಸಮೀಪದ ಬಳ್ಳಾರಿಯಲ್ಲಿ ಇದೆ. ಶಿಗ್ಗಾವಿಯಲ್ಲಿ ಆಗುತ್ತಿದೆ. ಇಲ್ಲಿ ಮಾಡಿದರೆ ಉದ್ಯಮಿಗಳು ಬರುವುದು ಕಷ್ಟ. ಕೈಗಾರಿಕೆಗಳಿಗೆ ಸರ್ಕಾರ ಪೂರಕ ವಾತಾವರಣ ನಿರ್ಮಿಸಿದರೆ ಉದ್ಯಮಿಗಳು ಬರುತ್ತಾರೆ’ ಎಂದು ಅಭಿಪ್ರಾಯ ಪಡುತ್ತಾರೆ ಕೈಗಾರಿಕೋದ್ಯಮಿ ಅಥಣಿ ವೀರಣ್ಣ.

‘ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಇಲ್ಲ. ಕೈಗಾರಿಕೆ ಪ್ರದೇಶದಲ್ಲಿ ದಂಡ, ಬಡ್ಡಿ ಬಿಟ್ಟು ಆಸ್ತಿ ತೆರಿಗೆ ಕಟ್ಟುವಂತೆ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಅದಕ್ಕೆ ಸ್ಪಷ್ಟ ನೀತಿ ರೂಪಿಸಿಲ್ಲ. ದಾವಣಗೆರೆಯನ್ನು ಕೈಗಾರಿಕಾ ವಲಯ–2ಕ್ಕೆ ಸೇರಿಸಿದ್ದಾರೆ. ಇದರಿಂದ ತೆರಿಗೆ ಹೆಚ್ಚಾಗುತ್ತದೆ. ದಾವಣಗೆರೆ ಅಷ್ಟು ಮುಂದುವರಿದಿಲ್ಲ. ವಲಯ–1ಕ್ಕೆ ಸೇರಿಸಬೇಕು’ ಎಂದು ಹರಿಹರದ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ಆರ್‌. ನಾಯ್ಡು ಒತ್ತಾಯಿಸಿದರು.

‘ಕಿರ್ಲೋಸ್ಕರ್‌, ಸೋನಾಲ್‌ಕರ್‌ ನಂತಹ ದೊಡ್ಡ ಕಾರ್ಖಾನೆಗಳು ಮುಚ್ಚಿದವು. ಶೇ 60ರಷ್ಟು ಕೈಗಾರಿಕೆಗಳು ಬಂದ್‌ ಆದವು. ಬದಲಾದ ಕೈಗಾರಿಕಾ ನೀತಿ ಇದಕ್ಕೆ ಕಾರಣ. ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಖರೀದಿಸಿ ಅನಿವಾರ್ಯ ಕಾರಣಗಳಿಂದ ಕಟ್ಟಡ ಕಟ್ಟದವರು, ಎರಡರಷ್ಟು ದಂಡ ಕಟ್ಟಬೇಕಾದ ಸ್ಥಿತಿ ಇದೆ. ಹೀಗಾದರೆ ಯಾರು ಬರುತ್ತಾರೆ’ ಎಂದು ಪ್ರಶ್ನಿಸುತ್ತಾರೆ
ಅವರು.

‘ಪಾಳು ಬಿದ್ದಿರುವ ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಬೃಹತ್‌ ಕೈಗಾರಿಕೆಗಳನ್ನು ಸೆಳೆಯಬೇಕು. ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್‌ ಪಾರ್ಕ್ ಆರಂಭಿಸಬೇಕು’ ಎಂದು ಒತ್ತಾಯಿಸುತ್ತಾರೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್.

.............

ಬೃಹತ್‌ ಕೈಗಾರಿಕೆಗಳು ಬರಲಿ

ದಾವಣಗೆರೆ ಕೃಷಿ ಪ್ರಧಾನ ಜಿಲ್ಲೆ. ಕಾಟನ್‌ ಮಿಲ್‌ ಹೋಯಿತು. ಕೆಲ ಅಕ್ಕಿ ಗಿರಣಿಗಳೂ ಮುಚ್ಚಿವೆ. ಈಗ ಭತ್ತ, ಮೆಕ್ಕೆಜೋಳ ಹೆಚ್ಚು ಬೆಳೆಯಲಾಗುತ್ತಿದೆ. ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳು ಬಂದರೆ ಜಿಲ್ಲೆ ಅಭಿವೃದ್ಧಿಯಾಗಲಿದೆ. 50 ವರ್ಷಗಳಿಂದ ದಾವಣಗೆರೆ ಸುತ್ತ ಯಾವುದೇ ದೊಡ್ಡ ಕಾರ್ಖಾನೆಗಳ ಸ್ಥಾಪನೆಯಾಗಿಲ್ಲ. ದೊಡ್ಡ ಕೈಗಾರಿಕೆಗೆ ಭೂ ಸ್ವಾಧೀನವೂ ಸವಾಲು. ನೀರಾವರಿ ಇಲ್ಲದ ಜಮೀನುಗಳ ಸ್ವಾಧೀನಕ್ಕೆ ಯೋಚಿಸಬೇಕು. ವಿಮಾನ ನಿಲ್ದಾಣ ಬರಲೂ ಹೆಚ್ಚು ವರ್ಷ ಬೇಕು. ಇಂತಹ ಸ್ಥಿತಿಯಲ್ಲಿ ಹೆಚ್ಚು ಕೈಗಾರಿಕೆಗಳು ಬಂದರೆ ಅಭಿವೃದ್ಧಿ ಸಾಧ್ಯ. ಸುತ್ತಲಿನ ಜಿಲ್ಲೆಗಳು ಅಭಿವೃದ್ಧಿ ಸಾಧಿಸಿವೆ. ಆದರೆ, ನಮ್ಮದು ಹಾಗೆಯೇ ಇದೆ. ಬೃಹತ್‌ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು.

– ಅಥಣಿ ಎಸ್. ವೀರಣ್ಣ, ಕೈಗಾರಿಕೋದ್ಯಮಿ

ಆಟೊಮೊಬೈಲ್‌ ತಯಾರಿಕಾ ಘಟಕ ಬೇಕು

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳು ಇಲ್ಲ. ಪ್ರತಿ ಬಾರಿ ಸಭೆಯಲ್ಲೂ ಈ ಬಗ್ಗೆ ಮನವಿ ಮಾಡುತ್ತೇವೆ. ಆದರೆ, ಪ್ರಯೋಜನವಾಗಿಲ್ಲ. ಆಟೊಮೊಬೈಲ್‌, ಎಲೆಕ್ಟ್ರಾನಿಕ್‌ ವಸ್ತುಗಳ ತಯಾರಿಕಾ ಘಟಕ ಬೇಕು. ಎಂಜಿನಿಯರಿಂಗ್‌ ಓದಿದವರಿಗೆ ಇಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ಇಲ್ಲ. ಜವಳಿ ಪಾರ್ಕ್‌ಗೆ ಭೂಮಿ ಸ್ವಾಧೀನವೂ ಆಗಿತ್ತು. ಆದರೆ, ಆಗಲಿಲ್ಲ. ನಮ್ಮ ಭಾಗಕ್ಕೆ ಯಾವುದೇ ಕಾರ್ಖಾನೆಗಳು ಬರುತ್ತಿಲ್ಲ. ಕೈಗಾರಿಕೆಗೆ ಮೂಲಸೌಲಭ್ಯ ಕಲ್ಪಿಸಬೇಕು. ಏರೋಡ್ರಮ್‌ ಬೇಡಿಕೆ ಇಟ್ಟರೂ ಆಗಿಲ್ಲ. ಕೈಗಾರಿಕಾ ಕಾರಿಡಾರ್‌ ಪ್ರಸ್ತಾವ ಇದೆ. ಇನ್ನೂ ಕೆಲಸ ಆಗಿಲ್ಲ. ಈ ಬಗ್ಗೆ ಸರ್ವೆ ನಡೆಯಬೇಕು.

– ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ

.......

ಜಿಲ್ಲೆಯಲ್ಲಿ ಐಟಿ ಪಾರ್ಕ್‌ ಸ್ಥಾಪಿಸಿ ₹ 100 ಕೋಟಿ ಅನುದಾನ ನೀಡಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಪಾರ್ಕ್, ಎಸ್‌ಇಝಡ್‌ ನಿರ್ಮಿಸಬೇಕು.

ರೋಹಿತ್ ಎಸ್. ಜೈನ್, ಕಾರ್ಯದರ್ಶಿ, ನೈರುತ್ಯ ರೈಲ್ವೆ ಪ್ರಯಾಣಿಕರ ಸಂಘ

.........

ಜಿಲ್ಲೆಗೆ ಮೆಕ್ಕೆಜೋಳ ಘಟಕ, ಶಾಖೋತ್ಪನ್ನ ಘಟಕ ಬರಲಿಲ್ಲ. ಬೃಹತ್‌ ಕೈಗಾರಿಕೆಗಳು ಬಂದರೆ ಸಣ್ಣ ಕೈಗಾರಿಕೆಗಳಿಗೂ ಅನುಕೂಲ. ಕೇಂದ್ರ ಬಜೆಟ್‌ನಲ್ಲಿ ಕೈಗಾರಿಕೆ ಬಗ್ಗೆ ಪ್ರಸ್ತಾಪವಾಗದಿರುವುದು ಬೇಸರದ ಸಂಗತಿ.

-ಪಿ.ಆರ್‌. ನಾಯ್ಡು, ಅಧ್ಯಕ್ಷ, ಸಣ್ಣ ಕೈಗಾರಿಕೆಗಳ ಸಂಘ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT