ಧರ್ಮ ವಿಭಜನೆಯಿಂದ ಪ್ರಜಾಪ್ರಭುತ್ವ ದುರ್ಬಲ

7
‘ಸಾಮೂಹಿಕ ಸತ್ಯಾಗ್ರಹ– ಜಾಗರಣೆ’ ಕಾರ್ಯಕ್ರಮದಲ್ಲಿ ಡಾ. ವಿಠ್ಠಲ ಭಂಡಾರಿ

ಧರ್ಮ ವಿಭಜನೆಯಿಂದ ಪ್ರಜಾಪ್ರಭುತ್ವ ದುರ್ಬಲ

Published:
Updated:
Deccan Herald

ದಾವಣಗೆರೆ: ‘ಕೋಮುವಾದಿಗಳು ಧರ್ಮ, ಭಾಷೆ ಆಧಾರದಲ್ಲಿ ವಿಭಜಿಸಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಸಿದ್ದಾಪುರ ತಾಲ್ಲೂಕಿನ ಕನ್ನಡ ಪ್ರಾಧ್ಯಾಪಕ ಡಾ. ವಿಠ್ಠಲ ಭಂಡಾರಿ ವಿಷಾದಿಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಆಶ್ರಯದಲ್ಲಿ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಾಮೂಹಿಕ ಸತ್ಯಾಗ್ರಹ– ಜಾಗರಣೆ 2018’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ, ಸೇತುವೆ ಬಿದ್ದು ಹೋದರೆ ಮತ್ತೆ ಕಟ್ಟಬಹುದು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಬಿದ್ದು ಹೋದರೆ ಪುನಃ ಕಟ್ಟುವುದು ಸುಲಭವಲ್ಲ. ಪ್ರಜಾಪ್ರಭುತ್ವ ಇನ್ನೂ ಘಟ್ಟಿಯಾಗಿರುವುದು ಕಾರ್ಮಿಕರು, ದುಡಿಯುವ ವರ್ಗದಿಂದ. ಆದರೆ, ಇಂದು ಏಕವ್ಯಕ್ತಿ ಚಕ್ರಾಧಿಪತ್ಯದ ಕಡೆಗೆ ದೇಶವನ್ನು ಒಯ್ಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶ ಪ್ರೇಮಿಗಳು ಹಾಗೂ ದೇಶ ಭಕ್ತರ ನಡುವೆ ಸಂಘರ್ಷ ನಡೆಯುತ್ತಿದೆ. ಭಗತ್‌ ಸಿಂಗ್‌, ಮಹಾತ್ಮ ಗಾಂಧಿ ಅವರಂತಹ ದೇಶ ಪ್ರೇಮಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಕಲೆ, ಕಾವ್ಯದ ಮೂಲಕ ದೇಶ ಕಟ್ಟುವ ಕೆಲಸವನ್ನು ದೇಶ ಪ್ರೇಮಿಗಳು ಮಾಡುತ್ತಿದ್ದಾರೆ. ಆದರೆ, ದೇಶ ಭಕ್ತರು ಯುವ ಜನರನ್ನು ಕೆಡವುವತ್ತ ಉದ್ದೀಪನಗೊಳಿಸುತ್ತಿದ್ದಾರೆ. ದೇಶ ಪ್ರೇಮಿಗಳ ನಿಜವಾದ ಆಶಯ ಅಪಮೌಲ್ಯಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧಿ, ಭಗತ್‌ ಸಿಂಗ್‌, ಅಂಬೇಡ್ಕರ್‌ ಅವರನ್ನೂ ಕೋಮುವಾದಿ ನೆಲೆಗಟ್ಟಿಗೆ ತಂದು ಜನಸಾಮಾನ್ಯರನ್ನು ದೇಶ ಭಕ್ತಿಯ ಹೆಸರಿನಲ್ಲಿ ಪ್ರಶ್ನಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ‘ಸೂರ್ಯ’ರನ್ನು ರಕ್ಷಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದು ಚುನಾವಣೆಯಲ್ಲಿ ಶಿಕ್ಷಣ, ಮಹಿಳಾ ಸುರಕ್ಷತೆ, ಯುವಜನತೆಗೆ ಉದ್ಯೋಗ ವಿಷಯಗಳ ಬದಲು ಭ್ರಮಾತ್ಮಕ ಪ್ರಶ್ನೆಗಳನ್ನು ಮುಂದಿಡಲಾಗುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷದವರೂ ಮೂಲಭೂತ ಹಕ್ಕಿನ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿದರು. ‘ಸ್ವಾತಂತ್ರ್ಯ ಭಾರತದ ಕನಸು– ನನಸು’ ವಿಷಯದ ಕುರಿತು ಕವಿಗೋಷ್ಠಿ ನಡೆಯಿತು. ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಎಲ್‌. ಭಟ್‌, ಡಾ. ಎ.ಬಿ. ರಾಮಚಂದ್ರಪ್ಪ, ಮಲ್ಲಿಕಾರ್ಜುನ ಕಡಕೋಳ, ಎಲ್‌.ಎಚ್‌. ಅರುಣಕುಮಾರ್‌, ಶ್ರೀನಿವಾಸ್‌ ಮೂರ್ತಿಕೆ.ಎಚ್‌. ಆನಂದರಾಜ್‌, ಐರಣಿ ಚಂದ್ರು ಅವರೂ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !