ಮಾಧ್ಯಮ ನೀಡಿದ್ದೆಲ್ಲ ಸ್ವೀಕರಿಸುವ ಗುಣ ಬೇಡ

7
‘ಮೌಲ್ಯನಿಷ್ಠ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ’ ವಿಚಾರ ಸಂಕಿರಣದಲ್ಲಿ ಪ್ರೀತಿ ನಾಗರಾಜ್‌

ಮಾಧ್ಯಮ ನೀಡಿದ್ದೆಲ್ಲ ಸ್ವೀಕರಿಸುವ ಗುಣ ಬೇಡ

Published:
Updated:
Deccan Herald

ದಾವಣಗೆರೆ: ಕೊಳೆತ ತರಕಾರಿಯನ್ನು ಉಚಿತವಾಗಿ ನೀಡಿದರೂ ತೆಗೆದುಕೊಳ್ಳದ ನಾವು ಕೊಳೆತ ಸುದ್ದಿಗಳನ್ನು ಯಾಕೆ ಸ್ವೀಕರಿಸಬೇಕು. ಮಾಧ್ಯಮ ನೀಡಿದ್ದನ್ನೆಲ್ಲ ಓದುವ, ನೋಡುವ ಗುಣ ಸರಿಯಲ್ಲ ಎಂದು ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್‌ ಹೇಳಿದರು.

ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥಾನದ ಮೀಡಿಯಾ ವಿಭಾಗ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಸೋಮವಾರ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಹಮ್ಮಿಕೊಂಡ ‘ಮೌಲ್ಯನಿಷ್ಠ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ’ ಮಾಧ್ಯಮ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಭುತ್ವ ಮತ್ತು ಮಾಧ್ಯಮದ ಮಾಲೀಕತ್ವ ಪರಸ್ಪರ ಸ್ನೇಹಿತರಾಗಿದ್ದಾರೆ. ಹಾಗಾಗಿ ಪತ್ರಕರ್ತರಿಗೆ ಬೈದು ಪ್ರಯೋಜನವಿಲ್ಲ. ಟಿ.ವಿ.ಯ ರಿಮೋಟ್‌, ಪತ್ರಿಕೆಗಳನ್ನು ಬದಲಾಯಿಸುವ ಆಯ್ಕೆ ಎರಡೂ ನಿಮ್ಮ ಕೈಯಲ್ಲೇ ಇವೆ. ಅದನ್ನು ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾಜಕೀಯ ನನಗೆ ಇಷ್ಟ ಇಲ್ಲ ಎಂದು ಬಹಳಷ್ಟು ಮಂದಿ ಹೇಳುವುದನ್ನು ಕೇಳುತ್ತೇವೆ. ಈ ರೀತಿ ರಾಜಕೀಯಕ್ಕೆ ಬೆನ್ನು ಹಾಕುವುದು ಸರಿಯಲ್ಲ. ಹುಟ್ಟಿನಿಂದ ಸಾಯುವವರೆಗೆ ಎಲ್ಲದರಲ್ಲೂ ಪ್ರಭಾವ ಬೀರುವ, ಪರಿಣಾಮ ಹೊಂದಿರುವ ಏಕೈಕ ಕ್ಷೇತ್ರ ರಾಜಕೀಯ. ನೆಲ, ಭಾಷೆ, ಬದುಕು ಎಲ್ಲವೂ ರಾಜಕೀಯವೇ ಆಗಿದೆ. ಹಾಗಾಗಿ, ಈ ಬಗ್ಗೆ ಅವಜ್ಞೆ ಸಲ್ಲದು ಎಂದು ತಿಳಿಸಿದರು.

ಮೌಲ್ಯನಿಷ್ಠ ಸಮಾಜದ ಸ್ಥಾಪನೆಗಾಗಿ ಮಾಧ್ಯಮ ಸಂಚಾಲಕ ಭೂಪಾಲಿನ ಪ್ರೊ. ಕಮಲ್‌ ದೀಕ್ಷಿತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬದ್ಧತೆ ಪ್ರದರ್ಶಿಸಿದೇ ಇದ್ದಾಗ, ಆರೋಗ್ಯ, ಶಿಕ್ಷಣ ಮುಂತಾದ ಸೇವಾ ಕ್ಷೇತ್ರಗಳು ಮೌಲ್ಯ ಕಳೆದುಕೊಂಡಾಗ ಅವುಗಳನ್ನು ಎಚ್ಚರಿಸಲು ಮಾಧ್ಯಮ ಬೇಕು. ಆದರೆ ಮಾಧ್ಯಮ ಕೂಡಾ ಲಾಭದ ದೃಷ್ಟಿಕೋನವನ್ನು ಇಟ್ಟುಕೊಂಡಿದೆ. ದೊಡ್ಡ ವ್ಯವಹಾರವಾಗಿ ಬದಲಾಗಿದೆ ಎಂದರು.

ಸಮಾಜವನ್ನು ಯಾವ ದಿಕ್ಕಿಗೆ ಬೇಕಾದರೂ ಒಯ್ಯುವ ಸಾಮರ್ಥ್ಯ ಇರುವ ಮಾಧ್ಯಮಗಳು ಸಮಾಜವನ್ನು ಉನ್ನತ ಮಟ್ಟಕ್ಕೆ ಒಯ್ಯುವಂತೆ ಮಾಡಲು ಚೈತನ್ಯ ತುಂಬಿಸುವ ಕೆಲಸವನ್ನು ಇಂಥ ವಿಚಾರ ಸಂಕಿರಣಗಳು ಮಾಡುತ್ತವೆ ಎಂದು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಅಧ್ಯಕ್ಷತೆ ವಹಿಸಿದ್ದರು. ಮೌಂಟ್‌ ಅಬು ಪ್ರಧಾನ ಕೇಂದ್ರ ಮೀಡಿಯಾ ಸಂಚಾಲಕ ಬಿ.ಕೆ. ಶಾಂತನು, ರಾಷ್ಟ್ರೀಯ ಸಂಯೋಜಕ ಬಿ.ಕೆ. ಶುಶಾಂತ್‌, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ.ಹಲಸೆ, ಬ್ರಹ್ಮಕುಮಾರಿ ಸುನೀತಾ ಉಪಸ್ಥಿತರಿದ್ದರು.

ಹಿರಿಯ ವ್ಯಂಗ್ಯಚಿತ್ರಕಾರ ಎಚ್‌.ಬಿ. ಮಂಜುನಾಥ್‌, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ. ಏಕಾಂತಪ್ಪ, ವಿ. ಹನುಮಂತಪ್ಪ, ಬಸವರಾಜ್‌ ದೊಡ್ಮನಿ, ಕೆ. ಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ, ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ ಎನ್‌.ಆರ್‌. ನಟರಾಜ್‌, ಎಚ್‌.ಎಂ. ರಾಜಶೇಖರ್‌, ಐ. ಗುರುಶಾಂತಪ್ಪ, ಮಂಜುನಾಥ್‌ ಕಾಡಜ್ಜಿ, ಎಚ್‌.ಟಿ. ಪರಶುರಾಮ್‌ ಅವರನ್ನು ಸನ್ಮಾನಿಸಲಾಯಿತು. ಬಿ.ಕೆ. ಸುನೀತಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇ.ಎಂ. ಮಂಜುನಾಥ್‌ ಸ್ವಾಗತಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !