ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: 'ಮೀಸಲಾತಿ ಹೆಚ್ಚಳ ಆಗದೆಂಬ ಅನುಮಾನ ಬೇಡ'

ವಾಲ್ಮೀಕಿ ಜಾತ್ರೆಯ ಉದ್ಯೋಗ ಮೇಳ ಉದ್ಘಾಟಿಸಿದ ಪ್ರತಾಪಗೌಡ ಪಾಟೀಲ್
Last Updated 9 ಫೆಬ್ರುವರಿ 2023, 6:28 IST
ಅಕ್ಷರ ಗಾತ್ರ

ಹರಿಹರ: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅಲ್ಲಿ ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರ್ಪಡೆಯಾಗಲ್ಲ, ಮೀಸಲಾತಿ ಸಿಗಲ್ಲ ಎಂದು ಕೆಲವರಿಗೆ ಅನುಮಾನ ಇದೆ. ಇನ್ನು ಕೆಲವರು ಇದೇ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ. ಶೆಡ್ಯೂಲ್‌ 9ಕ್ಕೆ ಸೇರ್ಪಡೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಬುಧವಾರ ಆರಂಭಗೊಂಡ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್‌ ಮಾಡಿ ಶೆಡ್ಯೂಲ್‌ 9ಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಮೀಸಲಾತಿ ಹಿಂದೆಯೇ ಸಿಕ್ಕಿತ್ತು. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿರಲಿಲ್ಲ. ಈಗ ಮೀಸಲಾತಿ ಹೆಚ್ಚಿಸುತ್ತಿರುವುದರಿಂದ ಈ ಮೀಸಲಾತಿಯೂ ನಮ್ಮ ಮುಂದಿನ ಪೀಳಿಗೆಗೆ ಸಿಗಲಿದೆ ಎಂದರು.

ರಾಜ ನಾಲ್ವಡಿ ವೆಂಕಟಪ್ಪನಾಯಕ ಭಾವಚಿತ್ರ ಅನಾವರಣಗೊಳಿಸಿದ ಮಾಜಿ ಶಾಸಕ ಸಾಲಿಂಗಯ್ಯ ಮಾತನಾಡಿ, ‘ಬೆಂಗಳೂರಿನಲ್ಲಿ ಆರಂಭವಾಗಬೇಕಿದ್ದ ಮಠವನ್ನು ರಾಜನಹಳ್ಳಿಯಲ್ಲಿ ಸ್ಥಾಪಿಸಲು ಕಾರಣರಾದವರು ಪುಣ್ಯಾನಂದ ಪುರಿ ಸ್ವಾಮೀಜಿ’ ಎಂದು ನೆನಪಿಸಿಕೊಂಡರು.

ಮಠಕ್ಕೆ ಕೊಡುಗೆ ಎಂದರೆ ಸಮಾಜ. ಈ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಹೆಚ್ಚಿಸುವುದಕ್ಕಾಗಿ ಪಾದಯಾತ್ರೆ ನಡೆಸಿ ಸತ್ಯಾಗ್ರಹ ಮಾಡಿದವರು ಪ್ರಸನ್ನಾನಂದ ಸ್ವಾಮೀಜಿ. ಅದರ ಮೂಲಕ ದೇಶದ, ರಾಜ್ಯದ ಗಮನ ಸೆಳೆದವರು’ ಎಂದು ಹೇಳಿದರು.

ಪುಣ್ಯಾನಂದಪುರಿ ಸ್ವಾಮೀಜಿಯವರ ಭಾವಚಿತ್ರ ಅನಾವರಣ ಮಾಡಿದ ಉದ್ಯಮಿ ಎಂ. ನಾರಾಯಣ ಸ್ವಾಮಿ ಮಾತನಾಡಿ, ‘ಉದ್ಯೋಗ ಹೆಚ್ಚಾದರೆ, ಉದ್ಯಮ ಬೆಳೆದರೆ ಮಠ, ಸಮಾಜ, ದೇಶ ಬೆಳೆಯುತ್ತದೆ. ಮನುಷ್ಯರಿಗೆ ಮುಂದಾಲೋಚನೆ, ಗುರಿ ಇರಬೇಕು. ಉದ್ಯೋಗ ಅರಸುವುದು ಸಹಜ. ಜತೆಗೆ ತಾನು ಯಾಕೆ ಉದ್ಯಮಿ ಆಗಬಾರದು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಆಗ ಅವಕಾಶ ಸಿಕ್ಕಾಗ ಉದ್ಯಮ ಆರಂಭಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಪೀಠದಿಂದ ತರಬೇತಿ ಕೇಂದ್ರವನ್ನು ತೆರೆದು ಯುವಪೀಳಿಗೆಗೆ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಬೇಕಾದ ಕೌಶಲ ನೀಡಬೇಕು. ಎಲ್ಲರೂ ಸರ್ಕಾರಿ ಉದ್ಯೋಗವೇ ಬೇಕು ಎಂದರೆ ಕಷ್ಟ. ಇವತ್ತು ಎಲೆಕ್ಟ್ರೀಷಿಯನ್‌ ಸಿಗುತ್ತಿಲ್ಲ. ಬೇರೆ ಬೇರೆ ಕೌಶಲಗಳನ್ನು ಕಲಿಸಿಕೊಡಿ ಎಂದು ಮನವಿ ಮಾಡಿದರು.

ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಸ್‌.ವಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ. ಪಾಲಯ್ಯ, ಫಾ. ಎರಿಕ್‌ ಮಥಾಯಿಸ್‌ ಇದ್ದರು.

ರಾಜಮನೆತದ ರಾಜಾ ಮದಕರಿ ನಾಯಕ, ದೀಪಕ್‌ ಪಾಳೆಗಾರ, ರಾಜಾ ರವಿವರ್ಮ ನಾಯಕ, ದೊರೆ ಬಸವರಾಜ ನಾಯಕ, ರಾಜಾ ಶರಶ್ಚಂದ್ರ ನಾಯಕ, ರಾಜಾ ಶಿವರಾಜ ವರ್ಮ, ಬಸವರಾಜ ನಾಯಕ, ಎಂ. ದೇವರಾಜು ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಲಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಎಜುಕೇಶನಲ್‌ ಕಿಟ್‌ ನೀಡಲಾಯಿತು.

ಜನ–ನಾಯಕರ ಕೊರತೆಗೆ ಅಸಮಾಧಾನ

ಬಣ್ಣದ ಮಾತುಗಳಿಗೆ ಮಾತ್ರ ಜನ ಸೇರುತ್ತಾರೆ ಎಂದು ಕಾಣುತ್ತದೆ. ಸ್ವಾಮೀಜಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಜನರ ಸಂಖ್ಯೆ ಕಡಿಮೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ರಾಜಕೀಯ ನಾಯಕರೂ ಬಂದಿಲ್ಲ ಎಂದು ಉದ್ಯಮಿ ಎಂ. ನಾರಾಯಣ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಮುರುಗೇಶ್‌ ನಿರಾಣಿ ಯಾಕೆ ಬರಲಿಲ್ಲವೋ ಗೊತ್ತಿಲ್ಲ. ಅವರು ಬಂದಿದ್ದರೆ ನಾವು ಕೆಲವು ಬೇಡಿಕೆಗಳನ್ನು ಅವರ ಮುಂದೆ ಇಡಬಹುದಿತ್ತು. ಈ ಸಮಾಜದವರಾದ ಶಾಸಕ ಸತೀಶ್‌ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು ಎಂದು ಆಹ್ವಾನ ಪತ್ರಿಕೆಯಲ್ಲಿದೆ. ಅವರಿಗೆ ಬರಲಾಗದೇ ಇದ್ದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಯಾಕೆ ಹಾಕಿಸಿಕೊಳ್ಳಬೇಕಿತ್ತು. ಸಮಾಜದ ಕೆಲಸಕ್ಕಿಂತಲೂ ದೊಡ್ಡ ಕೆಲಸ ಅವರಿಗೆ ಏನಿತ್ತು ಎಂದು ಪ್ರಶ್ನಿಸಿದರು.

ಇನ್ನೂ ಅನೇಕರು ಬಂದಿಲ್ಲ. ಅವರನ್ನೆಲ್ಲ ನಮ್ಮ ನಾಯಕರು ಎಂದು ಹೇಗೆ ಕರೆಯೋದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT