ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಸೃಜನಶೀಲತೆ ನಿಂತ ನೀರಾಗದಿರಲಿ: ಕಲಾವಿದ ಬಿ.ಆರ್‌. ಕೊರ್ತಿ

ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ
Last Updated 27 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ದಾವಣಗೆರೆ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಕೊಂಡು ಚಿತ್ರಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಗರದ ಹಿರಿಯ ಕಲಾವಿದ ಬಿ.ಆರ್‌. ಕೊರ್ತಿ ಅವರನ್ನು ‘ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡುವ ಮೂಲಕ ಕರ್ನಾಟಕ ಲಲಿತಕಲಾ ಅಕಾಡೆಮಿಯು ಕೊರ್ತಿ ಅವರ ಸೇವೆಯನ್ನು ಗುರುತಿಸಿದೆ.

ಕೊರ್ತಿ ಅವರು ಜನಿಸಿದ್ದು ವಿಜಯಪುರದಲ್ಲಾದರೂ ಬಣ್ಣಗಳೊಂದಿಗೆ ಬದುಕು ಕಟ್ಟಿಕೊಂಡಿದ್ದು ದಾವಣಗೆರೆಯಲ್ಲಿ. 1979ರಿಂದ 2004ರವರೆಗೆ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಕೊರ್ತಿ ಅವರ ಗರಡಿಯಲ್ಲಿ ನೂರಾರು ಸೃಜನಶೀಲ ಚಿತ್ರಕಲಾವಿದರು ಹೊರಹೊಮ್ಮಿದ್ದಾರೆ.

‘ನಾನು ಎಂದೂ ಪ್ರಶಸ್ತಿಯ ಹಿಂದೆ ಬಿದ್ದವನಲ್ಲ. ಈ ಪ್ರಶಸ್ತಿ ಗಿಟ್ಟಿಸಿಕೊಳ್ಳಬೇಕು ಎಂದು ಮನಸ್ಸು ಮಾಡಿದ್ದರೆ ಎಂದೋ ಈ ಪ್ರಶಸ್ತಿ ಬರುತ್ತಿತ್ತು. ಅಕಾಡೆಮಿಯ ಅಧ್ಯಕ್ಷರು ಕರೆ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಹೇಳಿದಾಗ ಖುಷಿಯಾಯಿತು. ಪ್ರಾಮಾಣಿಕವಾಗಿ ನಮ್ಮ ಕೆಲಸ ಮಾಡುತ್ತಿದ್ದರೆ ತಡವಾಗಿಯಾದರೂ ಗುರುತಿಸುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ’ ಎಂದು ಕೊರ್ತಿ ಅವರು ಪ್ರತಿಕ್ರಿಯಿಸಿದರು.

ತಮ್ಮ ಕಲಾ ಪಯಣದ ಬಗ್ಗೆ ಕೊರ್ತಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಚಿತ್ರಕಲೆಯ ಬಗ್ಗೆ ನಿಮಗೆ ಆಸಕ್ತಿ ಬಂದಿದ್ದು ಹೇಗೆ?
ನಾನು ಜನಿಸಿದ ವಿಜಯಪುರದ ಜಿನಗಾರ ಗಲ್ಲಿಯಲ್ಲಿ ಚಿತ್ರಗಾರರು ತೊಟ್ಟಿಲು, ಮೂರ್ತಿ ಮಾಡುತ್ತಿದ್ದುದನ್ನು ನೋಡುತ್ತ ಬೆಳೆದೆ. ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಚಿತ್ರಕಲೆಯನ್ನು ಪ್ರೀತಿಯಿಂದ ಕಲಿತೆ. ಗಣಪತಿ ಮೂರ್ತಿ ತಯಾರಿಸುವಾಗ ಕಲಾವಿದರಿಗೆ ಸಹಾಯವನ್ನೂ ಮಾಡುತ್ತಿದ್ದೆ. ಇವು ನನಗೆ ಸ್ಫೂರ್ತಿ ನೀಡಿದವು. ಹೈಸ್ಕೂಲ್‌ನಲ್ಲಿದ್ದಾಗಲೇ ವಿಜಯಪುರದಲ್ಲಿ ಕಲಾಶಾಲೆಗೆ ಸೇರಿಕೊಂಡೆ. ನಿಸರ್ಗ ಚಿತ್ರಕಲಾವಿದ ಹಮಿತ್‌ ಖಾನಿ ಅವರು ಬರೆದ ಚಿತ್ರಗಳು ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದವು.

* ಕಲಾ ವೃತ್ತಿಯನ್ನು ಆರಂಭಿಸಿದ್ದು ಹೇಗೆ?
1968ರಲ್ಲಿ ಲಲಿತಕಲೆಯಲ್ಲಿ ಡಿಪ್ಲೊಮಾ ಪಡೆದೆ. 1970ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲಾವಿದನಾಗಿ ನೇಮಕಗೊಂಡೆ. 1973ರಲ್ಲಿ ಆರ್ಟ್‌ ಮಾಸ್ಟರ್‌ ಪದವಿಯನ್ನೂ ಪಡೆದೆ. ಒಂಬತ್ತು ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿದ್ದರೂ ಕೆಲಸದ ಬಗ್ಗೆ ತೃಪ್ತಿ ಇರಲಿಲ್ಲ. ಹೀಗಾಗಿ ಚಿತ್ರಕಲಾ ಶಿಕ್ಷಣದಲ್ಲಿ ಮುಂದುವರಿಯಬೇಕು ಎಂದುಕೊಂಡು 1979ರಲ್ಲಿ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. 2004ರಲ್ಲಿ ಲಲಿತಕಲಾ ವಿಭಾಗದ ಮುಖ್ಯಸ್ಥನಾಗಿ ನಿವೃತ್ತಿಯಾಗದೆ.

* ಯಾವ ಮಾಧ್ಯಮದಲ್ಲಿ ನೀವು ಚಿತ್ರ ಬಿಡಿಸುತ್ತೀರಿ? ಯಾವ ವಿಷಯ ನಿಮಗೆ ಅಚ್ಚುಮೆಚ್ಚು?
ಚಿತ್ರಕಲಾ ಪ್ರಾಧ್ಯಾಪಕನಾಗಿದ್ದ ನನಗೆ ಎಲ್ಲಾ ಮಾಧ್ಯಮಗಳ ಜ್ಞಾನವೂ ಇತ್ತು. ಆದರೆ, ನಾನು ಜಲವರ್ಣಗಳಲ್ಲಿ ಚಿತ್ರ ಬಿಡಿಸಿದ್ದೇ ಹೆಚ್ಚು. ನಿಸರ್ಗದ ಚಿತ್ರಗಳನ್ನು ಬಿಡಿಸುವುದರಲ್ಲೇ ನನಗೆ ಹೆಚ್ಚು ಖುಷಿ ಸಿಗುತ್ತಿದೆ. ಭಾವಚಿತ್ರಗಳನ್ನೂ ಬಿಡಿಸುತ್ತೇನೆ.

1982ರಿಂದ ನನಗೆ ಸಂಧಿವಾತ ಕಾಣಿಸಿಕೊಂಡಿತು. ಬ್ರಷ್‌ ಕೆಳಗೆ ಬಿದ್ದರೆ ಎತ್ತಿಕೊಳ್ಳುವುದು ಕಷ್ಟವಾಗುತ್ತಿತ್ತು. ಹೀಗಿದ್ದರೂ ಛಲ ಬಿಡದೇ ಆತ್ಮವಿಶ್ವಾಸದಿಂದ ಚಿತ್ರ ಬಿಡಿಸುತ್ತಿದ್ದೇನೆ. ಹಲವೆಡೆ ಕಲಾ ಪ್ರದರ್ಶನ ನೀಡಿ ಜನರಿಂದ ಮೆಚ್ಚುಗೆ ಗಳಿಸಿದ್ದೇನೆ. 76 ವರ್ಷವಾದೂ ಇಂದಿಗೂ ಚಿತ್ರಬಿಡಿಸುವುದನ್ನು ನಿಲ್ಲಿಸಿಲ್ಲ.

* ಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡು ಯಶಸ್ವಿಯಾಗಲು ಸಾಧ್ಯವೇ? ಯುವ ಕಲಾವಿದರಿಗೆ ಏನು ಹೇಳಲು ಬಯಸುತ್ತೀರಿ?
ಪ್ರಾಮಾಣಿಕವಾಗಿ ಪರಿಶ್ರಮ ಹಾಕಿ ಅಧ್ಯಯನ ಮಾಡಿದರೆ ಚಿತ್ರಕಲೆಯಲ್ಲೂ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ತಮ್ಮ ಕಲಾಕೃತಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರದರ್ಶನಗಳಿಗೆ ತೆಗೆದುಕೊಂಡು ಹೋಗಬೇಕು. ಆಗ ಜನರೂ ಕಲಾವಿದರನ್ನು ಗುರುತಿಸುತ್ತಾರೆ. ಅವರ ಕಲಾಕೃತಿಗಳಿಗೂ ಬೇಡಿಕೆ ಬರುತ್ತದೆ. ಎಲೆಮರೆಯ ಕಾಯಿಯಂತೆ ಇರುವ ಬದಲು ನಿಮ್ಮ ಕಲೆಯನ್ನು ಜಗತ್ತಿನ ಮುಂದೆ ಇಡಬೇಕು.

ಚಿತ್ರಕಲೆಯನ್ನು ಕಲಿಯುವವರಿಗೆ ಶಾಸ್ತ್ರೀಯ ಅಧ್ಯಯನ ಅಗತ್ಯವಿದೆ. ಶಾಸ್ತ್ರೀಯವಾಗಿ ಕಲಿತಾಗ ತಳಪಾಯ ಚೆನ್ನಾಗಿರುತ್ತದೆ. ನಂತರ ತಮಗೆ ಬೇಕಾದ ಪ್ರಕಾರಗಳಲ್ಲಿ ಛಾಪು ಮೂಡಿಸಲು ಸಾಧ್ಯವಾಗಲಿದೆ. ಖ್ಯಾತ ಕಲಾವಿದರಾದ ಪಿಕಾಸೊ, ಎಂ.ಎಫ್. ಹುಸೇನ್‌ ಅವರಂತಹ ಹಿರಿಯ ಕಲಾವಿದರ ಬಗ್ಗೆಯೂ ತಿಳಿದುಕೊಳ್ಳಬೇಕು. ಸೃಜನಶೀಲತೆ ನಿಂತ ನೀರಾಗಬಾರದು; ನಿರಂತರವಾಗಿ ಬೆಳೆಯುತ್ತಿರಬೇಕು. ವಿಜ್ಞಾನದಲ್ಲಿ ಯಾವ ರೀತಿ ಹೊಸ–ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆಯೋ ಕಲೆಯಲ್ಲೂ ವಿನೂತನ ಪ್ರಯೋಗಗಳನ್ನು ಮಾಡಬೇಕು.

ಬಿ.ಆರ್‌. ಕೊರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT