ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ವ್ಯಕ್ತಿಗಳನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸದಿರಿ: ಮಹಾಂತೇಶ ಬೀಳಗಿ

ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಮಹಾಂತೇಶ ಬೀಳಗಿ
Last Updated 2 ಜನವರಿ 2022, 5:09 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನ್ ವ್ಯಕ್ತಿಗಳನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಬೇಕು. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಅಮರಶಿಲ್ಪಿ ಜಕಣಾಚಾರಿ ಅಮರವಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಮಹಾನ್ ಚೇತನಗಳ ಸ್ಮರಣೆಗೆ ಸರ್ಕಾರದಿಂದ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಕಷ್ಟದಲ್ಲಿರುವ ಜನರಿಗೆ ಮೇಲು ಸ್ತರದಲ್ಲಿರುವ ಜನರು ಸಹಾಯ ಮಾಡುವ ಮನಸ್ಸು ಹೊಂದಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ‘ಜಕಣಾಚಾರಿ ದೇಶಕಂಡ ದಂತಕಥೆ, ಚಾಲುಕ್ಯ ಹೊಯ್ಸಳ ಆಡಳಿತದಲ್ಲಿ ಶಿಲ್ಪಕಲೆ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೇಲೂರು ಹಳೇಬೀಡುಗಳಲ್ಲಿ ಅವರ ಶಿಲ್ಪಕಲೆ ವೈವಿಧ್ಯ ಹಾಗೂ ವೈಭವವನ್ನು ಕಾಣಬಹುದು. ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಸರ್ಕಾರ ಈ ಸಮುದಾಯದ ಅಭಿವೃದ್ದಿಗೆ ಕ್ರಮ ಕೈಗೊಂಡಿದೆ’ ಎಂದರು.

ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಶಿವಾನಂದ ಮಾತನಾಡಿ, ‘ಕನ್ನಡನಾಡು ದೇಶದಲ್ಲಿಯೇ ಶಿಲ್ಪಕಲೆ ಶ್ರೀಮಂತಿಕೆ ಹೊಂದಿದ್ದು, ಅದನ್ನು ನೋಡಲು ವಿದೇಶಿಯರು ಬರುತ್ತಿದ್ದಾರೆ. ಇದರ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಸರ್ಕಾರದಿಂದ ಅವರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಸರ್ಕಾರಿ ಅಭಿಯೋಜಕ ಎಸ್.ಪಿ. ಪಾಟೀಲ್ ಮಾತನಾಡಿ, ‘ವಿಶ್ವಕರ್ಮ ಸಮಾಜ ದೇಶದಾದ್ಯಂತ ನೆಲೆಸಿದೆ. ಆದರೆ ಕರ್ನಾಟಕದಲ್ಲಿ ಹೆಚ್ಚಿದ್ದರೂ ಅತೀ ಕಡಿಮೆ ಜನಸಂಖ್ಯೆ ಹೊಂದಿದೆ. ಹಾಸನ, ಬೇಲೂರು ಶಿಲ್ಪಕಲೆಗಳನ್ನು ಗಮನಿಸಿದಾಗ ಇಡೀ ಜಗತ್ತಿಗೆ ಮಾದರಿ. ಜಗತ್ತಿನ ಯಾವ ದೇಶದಲ್ಲಿಯೂ ಅಂತಹ ಅದ್ಬುತ ಶಿಲ್ಪಕಲೆ ಕಾಣಲು ಸಾಧ್ಯವಿಲ್ಲ. ಜಕಣಾಚಾರಿಯವರು ವಿಶ್ವಕರ್ಮ ಸಮುದಾಯಕ್ಕೆ ಸೀಮಿತವಾದ ದೇವಾಲಯಗಳನ್ನು ನಿರ್ಮಿಸಿಲ್ಲ. ಬದಲಾಗಿ ಅವರು ನಿರ್ಮಾಣ ಮಾಡಿದ ದೇವಾಲಯಗಳು ಸರ್ವ ಸಮುದಾಯಗಳು ಪೂಜಿಸಿ ಆರಾಧಿಸುವ ದೇವಾಲಯಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಅವರ ಜಯಂತಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

‘ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಆ ಕಾಯಕ ಪ್ರಜ್ಞೆಯನ್ನು ವಿಶ್ವಕರ್ಮ ಸಮುದಾಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾಣಬಹುದಾಗಿದೆ’ ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ವಿಶ್ವಕರ್ಮ ಸಮಾಜದ ನಾಗೇಂದ್ರಚಾರಿ, ವಿರೇಂದ್ರಚಾರಿ, ಸಾಲುಮರದ ವೀರಾಚಾರಿ, ತಹಶೀಲ್ದಾರ್ ಬಿ.ಎಸ್. ಗಿರೀಶ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT