ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ಒಯ್ಯಲು ಪ್ಲಾಸ್ಟಿಕ್‌ ನೀಡಬೇಡಿ

ಕುರಿ, ಕೋಳಿ, ಮೀನು ಅಂಗಡಿಗಳ ತ್ಯಾಜ್ಯ ವಿಲೇವಾರಿ ಕುರಿತ ಸಭೆಯಲ್ಲಿ ಡಾ.ಸಂತೋಷ್‌ ಸೂಚನೆ
Last Updated 26 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕುರಿ, ಕೋಳಿ, ಮೀನು ಒಯ್ಯಲು ಬರುವವರಿಗೆ ಪ್ಲಾಸ್ಟಿಕ್‌ನಲ್ಲಿ ಕಟ್ಟಿಕೊಡಬೇಡಿ. ಕಾಗದದಲ್ಲಿ ಕಟ್ಟಿಕೊಡಿ. ಟಿಶ್ಯುಪೇಪರ್‌ ಕೂಡ ಬಳಸಬಹುದು ಎಂದು ಪಶು ವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕ, ಪಾಲಿಕೆಯ ಪ್ರಭಾರ ಆರೋಗ್ಯಾಧಿಕಾರಿ ಡಾ.ಸಂತೋಷ್ ಸಲಹೆ ನೀಡಿದರು.

ನಗರದಲ್ಲಿ ಕುರಿ, ಕೋಳಿ, ಮೀನು ಅಂಗಡಿಗಳ ತ್ಯಾಜ್ಯವನ್ನು ವಿಲೇವಾರಿಗೆ ಸರಿಯಾದ ಕ್ರಮ ವಹಿಸುವ ಬಗ್ಗೆ ಪಾಲಿಕೆಯಲ್ಲಿ ಗುರುವಾರ ನಡೆದ ಮಾಂಸದಂಗಡಿ ಮಾಲೀಕರ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು.‌

ಮಾಂಸದ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಾಜಾ ಮಾಂಸ ಮಾರಾಟ ಮಾಡಬೇಕು. ತ್ಯಾಜ್ಯ ಸಂಗ್ರಹಿಸಲು ಪ್ರಾಯೋಗಿಕವಾಗಿ ಪಾಲಿಕೆ ನಿಯೋಜಿಸಿರುವ ವಾಹನಗಳಿಗೆ ನಿಯಮಿತವಾಗಿ ತ್ಯಾಜ್ಯವನ್ನು ನೀಡಬೇಕು ಎಂದು ವಿನಂತಿ ಮಾಡಿಕೊಂಡರು.

ನಗರದಲ್ಲಿ ಕುರಿ, ಕೋಳಿ ಮತ್ತು ಮೀನು ಸೇರಿ ಒಟ್ಟು 238 ಅಂಗಡಿಗಳಿವೆ. ಅವುಗಳ ಪರಿವೀಕ್ಷಣೆಗೆ ತೆರಳಿದಾಗ ಸ್ವಚ್ಚತೆ ಕೊರತೆ ಕಂಡು ಬಂದಿದೆ. ಮಾಂಸಕ್ಕೆ ದೂಳು ತಾಗದಂತೆ ಅಂಗಡಿ ಮುಂಭಾಗ ಗಾಜು ಅಳವಡಿಸಬೇಕು. ಮಾಂಸದ ತ್ಯಾಜ್ಯ ಸಂಗ್ರಹಣೆಗಾಗಿ 2 ವಾಹನಗಳನ್ನು ಬಿಡಲಾಗಿದೆ ಎಂದು ಸೂಚಿಸಿದರು.

ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಶಂಕರ್ ಎಂಬುವವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಅಂಗಡಿಯವರು ತಿಂಗಳಿಗೆ ₹ 750 ನೀಡಬೇಕು. ಮಾಂಸ ಕತ್ತರಿಸಿ ರಕ್ತವನ್ನು ಚರಂಡಿಗೆ ಬಿಡುತ್ತಿರುವುದರಿಂದ ರಕ್ತ ಹೆಪ್ಪುಗಟ್ಟಿ ಚರಂಡಿಗಳು ಬ್ಲಾಕ್ ಆಗುತ್ತಿರುವುದು ಕಂಡು ಬರುತ್ತಿದೆ. ನಾಯಿಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ತ್ಯಾಜ್ಯ ಹಾಕಬೇಕು. ಚರಂಡಿಗೆ ಬೀಡಬಾರದು ಎಂದರು.

ಬೆಳಿಗ್ಗೆ ಬಂದು ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಲಾಗುವುದು ಎಂದು ಶಂಕರ್ ತಿಳಿಸಿದರು. ರಾತ್ರಿ ವೇಳೆ ತ್ಯಾಜ್ಯ ಸಂಗ್ರಹಿಸಿದರೆ ಉತ್ತಮ. ಮರುದಿನ ಬೆಳಿಗ್ಗೆ ಬಂದರೆ ತ್ಯಾಜ್ಯ ದುರ್ವಾಸನೆ ಬರುತ್ತದೆ ಎಂದು ಕೋಳಿ ಅಂಗಡಿಗಳ ಸಂಘದ ಅಧ್ಯಕ್ಷ ಶಂಶುದ್ದೀನ್ ತಬ್ರೇಜ್ (ಚಾರ‍್ಲಿ) ಸಲಹೆ ನೀಡಿದರು.

150 ಕೋಳಿ ಮಾಂಸದಂಗಡಿಗಳಿರುವುದರಿಂದ ಎರಡು ತ್ಯಾಜ್ಯ ಸಂಗ್ರಹ ಗಾಡಿ ಸಾಕಾಗುವುದಿಲ್ಲ. ಅಲ್ಲದೇ ಶುಲ್ಕ ₹ 750 ಜಾಸ್ತಿಯಾಯಿತು ಎಂದು ಮಾಂಸದಂಗಡಿ ಮಾಲೀಕರಾದ ಸುರೇಶ್ ತಕರಾರು ಎತ್ತಿದರು.

ಮಾಂಸದಂಗಡಿಗಳಿಗೆ ಬುಧವಾರ ಮತ್ತು ಭಾನುವಾರವೇ ವ್ಯಾಪಾರ ಹೆಚ್ಚು. ಕೆಲವು ಹಬ್ಬ, ಜಯಂತಿಗಳಿಗೆ ಮಾಂಸ ನಿಷೇಧ ಮಾಡಲಾಗುತ್ತಿದೆ. ಮುಖ್ಯವಾದವುಗಳನ್ನು ಹೊರತುಪಡಿಸಿ ಉಳಿದ ಹಬ್ಬ, ಜಯಂತಿಗಳಿಗೆ ಮಾಂಸ ಮಾರಾಟ ನಿಷೇಧ ಮಾಡಬಾರದು ಎಂದು ಮುಸ್ತಾಕ್‌ ಕೋರಿದರು.

ಸ್ಟಾಲ್‌ಗಳಲ್ಲಿ ಆಡು, ಕುರಿ ಮಾಂಸ ಕತ್ತರಿಸುವುದಿಲ್ಲ. ಸ್ಲಾಟರ್ ಹೌಸ್‌ಗಳಲ್ಲಿ ಕತ್ತರಿಸಲಾಗುತ್ತದೆ. ನಗರದಲ್ಲಿ ವ್ಯವಸ್ಥಿತವಾದ ಸ್ಲಾಟರ್ ಹೌಸ್‌ಗಳಿಲ್ಲ. ಪಾಲಿಕೆ ನೀಡಿವ ಮಳಿಗೆಗಳೂ 30 ವರ್ಷಗಳ ಹಳೇಯದ್ದಾಗಿದೆ. ಹಾಗಾಗಿ ಸ್ಲಾಟರ್ ಹೌಸ್ ಮತ್ತು ದೊಡ್ಡಿ ಅವಶ್ಯಕತೆ ಇದೆ ಎಂದು ಕುರಿ ಮಾಂಸದಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಪಿ. ಕಲಾಲ್‌ ಮನವಿ ಮಾಡಿದರು.

ಸ್ಲಾಟರ್ ಹೌಸ್ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಉಳಿದ ಪ್ರಕ್ತಿಯೆಗಳು ನಡೆಯುತ್ತಿವೆ ಎಂದು ಡಾ.ಸಂತೋಷ್ ಮಾಹಿತಿ ನೀಡಿದರು.

ಟ್ರೇಡ್ ಲೈಸೆನ್ಸ್ ಕಡ್ಡಾಯ: ಎಲ್ಲ ಅಂಗಡಿಯವರು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಮಾಡಿಸಬೇಕು. ಮಾಂಸದಂಗಡಿಗಳ ಸಂಘದವರು ಈ ಬಗ್ಗೆ ಜವಾಬ್ದಾರಿ ವಹಿಸಿಕೊಂಡು ಎಲ್ಲರ ಟ್ರೇಡ್ ಲೈಸೆನ್ಸ್ ಮಾಡಿಸಲು ಸಹಕರಿಸಬೇಕು ಎಂದು ಡಾ.ಸಂತೋಷ್ ತಿಳಿಸಿದರು.

ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಅನೇಕ ವರ್ಷಗಳಿಂದ ಬಾಕಿ ಇರುವವರು ಕೂಡ ಬಾಕಿ ಕಟ್ಟಲು ಅನುವು ಮಾಡಿಕೊಡಲಾಗುವುದು ಎಂದು ಆರೋಗ್ಯ ನಿರೀಕ್ಷಕ ಹೇಳಿದರು.

ಬೀಫ್‌ ಸ್ಟಾಲ್‌ಗಳ ಬಗ್ಗೆ ಪ್ರಸ್ತಾಪವಾದಾಗ, ಅದರ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು ಎಂದು ಡಾ. ಸಂತೋಷ್‌ ಹೇಳಿದರು.

‘ಪ್ಲಾಸ್ಟಿಕ್‌ ಎಲ್ಲಿಂದ ಬರುತ್ತಿದೆ?’

ಅಂಗಡಿಗಳಿಗೆ ಪ್ಲಾಸ್ಟಿಕ್‌ ಎಲ್ಲಿಂದ ಸಿಗುತ್ತದೆ ಎಂಬ ಚರ್ಚೆಗೆ ಸಭೆ ಸಾಕ್ಷಿಯಾಯಿತು.

ಪ್ಲಾಸ್ಟಿಕ್‌ ಉತ್ಪನ್ನ ನಿಲ್ಲಿಸಿದರೆ ನಾವು ಬಳಸುವುದಿಲ್ಲ ಎಂದು ಕುರಿ ಮಾಂಸದಂಗಡಿಗಳ ಸಂಘದ ಅಧ್ಯಕ್ಷ ಮಾಲತೇಶ್ ಕಲಾಲ್ ತಿಳಿಸಿದರು. ಎಲ್ಲೆಡೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ನಗರಾದ್ಯಂತ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ದಾಳಿ ನಡೆಸಿ, ವಶ ಪಡಿಸಿಕೊಳ್ಳಲಾಗುತ್ತಿದೆ. ನಿಮಗೆ ಪ್ಲಾಸ್ಟಿಕ್ ಎಲ್ಲಿ ಸಿಗುತ್ತಿದೆ ಮಾಹಿತಿ ನೀಡಿ ಎಂದು ಪರಿಸರ ಎಂಜಿನಿಯರ್‌ ಚಿನ್ಮಯಿ ಕೋರಿದರು.

ವಶಪಡಿಸಿಕೊಂಡ ಪ್ಲಾಸ್ಟಿಕ್‌ ಎಲ್ಲಿಗೆ ಹೋಗುತ್ತದೆಯೋ ಅಲ್ಲಿಂದಲೇ ಬರುತ್ತದೆ ಎಂದು ಸಭೆಯಲ್ಲಿದ್ದವರು ಮಾರ್ಮಿಕವಾಗಿ ಉತ್ತರಿಸಿದರು. ಮಾಂಸದಂಗಡಿಗಳಿಗೆ ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತುವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಾ. ಸಂತೋಷ್‌ ಚರ್ಚೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT