ಸೋಮವಾರ, ಜನವರಿ 17, 2022
18 °C
ವೀರ ಸೇನಾನಿ ದೋಂಡಿಯಾವಾಘ ಸಂಸ್ಮರಣಾ ಕಾರ್ಯಕ್ರಮ

‘ಬ್ರಿಟಿಷರ ವಿರುದ್ಧ ಹೋರಾಡಿದ ಕರುನಾಡಿನ ಹುಲಿ ದೋಂಡಿಯಾವಾಘ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿ 1857ಕ್ಕಿಂತ 25 ವರ್ಷಗಳ ಮುಂಚೆ ಕೆಚ್ಚೆದೆಯಿಂದ ಹೋರಾಟ ನಡೆಸಿದ ದೋಂಡಿಯಾವಾಘ ಚನ್ನಗಿರಿಯಲ್ಲಿ ಹುಟ್ಟಿದವರು ಎಂದು ಈ ತಾಲ್ಲೂಕಿನ ಬಹುತೇಕರಿಗೆ ತಿಳಿದಿಲ್ಲ. ಅವರ ಬಗ್ಗೆ ಸಂಶೋಧನೆ ಮಾಡಿ, ಪುಸ್ತಕವನ್ನು ಬರೆಯಲಾಗಿದೆ ಎಂದು ಸಾಹಿತಿ, ನಿವೃತ್ತ ತಹಶೀಲ್ದಾರ್ ಕ.ವೆಂ. ನಾಗರಾಜ್ ರಾವ್ ತಿಳಿಸಿದರು.

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಭಾನುವಾರ ದೋಂಡಿಯಾವಾಘ ಗೆಳೆಯರ ಬಳಗದಿಂದ ನಡೆದ ದೋಂಡಿಯಾವಾಘ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಮಹಾನ್ ಸೇನಾನಿಯ ಬಗ್ಗೆ ಇಡೀ ನಾಡಿನ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮುಂಬುರುವ ದಿನಗಳಲ್ಲಿ ಮಾಡಲಾಗುವುದು. ದೋಂಡಿಯಾವಾಘ ಅವರ ಬಗ್ಗೆ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲು ಪ್ರೊ. ದೊಡ್ಡರಂಗೇಗೌಡ ಅವರ ನೇತೃತ್ವದಲ್ಲಿ ಜಾಗೃತಿ ಸಮಿತಿಯನ್ನು ರಚಿಸಲಾಗಿದೆ. ಹಾಗೆಯೇ ದೋಂಡಿಯಾವಾಘ ಒಬ್ಬ ರಾಜರಿಗೆ ಸೀಮಿತವಾಗಿರಲಿಲ್ಲ. ಈ ರಾಜ್ಯವನ್ನು ಆಳುವ ಎಲ್ಲ ರಾಜರೂ ಈತನ ಸೈನ್ಯದ ಸಹಾಯವನ್ನು ಪಡೆದುಕೊಂಡಿದ್ದರು. ಗೆರಿಲ್ಲಾ ಮಾದರಿ ಯುದ್ಧ ಮಾಡುವುದರಲ್ಲಿ ಆತ ನಿಸ್ಸೀಮನಾಗಿದ್ದನು. ಈತನ ಸೈನ್ಯದಲ್ಲಿ 90 ಸಾವಿರ ಸೈನಿಕರಿದ್ದರು ಎಂದು ವಿವರಿಸಿದರು.

ಕೈಯಲ್ಲಿ ಎರಡು ಖಡ್ಗಗಳನ್ನು ಹಿಡಿದುಕೊಂಡು ಯುದ್ಧವನ್ನು ಮಾಡುತ್ತಿದ್ದ ಅಪ್ರತಿಮ ಹೋರಾಟಗಾರ ದೋಂಡಿಯಾವಾಘ. ಈತನ ಮುಖ್ಯ ಗುರಿ ಬ್ರಿಟಿಷರನ್ನು ಈ ದೇಶದಿಂದ ಓಡಿಸಬೇಕು ಎಂಬುದಾಗಿತ್ತು. ಇದರಲ್ಲಿ 1 ಖಡ್ಗ ಶಿಕಾರಿಪುರ ಹುಚ್ಚರಾಯನ ದೇವಸ್ಥಾನದಲ್ಲಿ ಸಂರಕ್ಷಿಸಿ ಇಡಲಾಗಿದೆ. ಪ್ರಸ್ತುತ ಇತಿಹಾಸವನ್ನು ಮರೆಮಾಚುವ ಕಾರ್ಯವನ್ನು ಆಳುವ ಸರ್ಕಾರಗಳು ಮಾಡುತ್ತಿವೆ. ಈತ ಹುಟ್ಟಿದ ಚನ್ನಗಿರಿ ಪಟ್ಟಣದಲ್ಲಿ ಪ್ರತಿಮೆಯನ್ನು ಸ್ಥಾಪಿಸಬೇಕು. ಒಂದು ರಸ್ತೆಗೆ ದೋಂಡಿಯಾವಾಘ ಹೆಸರು ಇಡಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಎನ್. ಚನ್ನಗಿರಿ ಸುಧೀಂದ್ರ, ಶಾನುಭೋಗ್ ತಿರುಮಲರಾವ್, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಚಿನ್ನಸ್ವಾಮಿ, ಎಂ. ಅಣ್ಣೋಜಿರಾವ್ ಪವಾರ್, ಕ್ಷತ್ರಿಯ ಮರಾಠ ಪರಿಷತ್‌ ಅಧ್ಯಕ್ಷ ಸತೀಶ್ ಪವಾರ್, ಹಿರಿಯ ಮುಖಂಡ ಮಂಜುನಾಥ್ ಜಾಧವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು