ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಧರಣಿ

7

ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಧರಣಿ

Published:
Updated:
Deccan Herald

ದಾವಣಗೆರೆ: ಉತ್ತರ– ದಕ್ಷಿಣ ಎಂಬುದು ಕೇವಲ ದಿಕ್ಕಿಗೆ ಸೀಮಿತವಾಗಿರಬೇಕೆ ಹೊರತು, ಅಭಿವೃದ್ಧಿಗಲ್ಲ. ಸರ್ಕಾರ ತಾರತಮ್ಯ ಮಾಡದೇ ಸಮಗ್ರ ಕರ್ನಾಟಕವನ್ನು ಅಭಿವೃದ್ಧಿಗೊಳಿಸಬೇಕು ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದ ಅವರು, ‘ಕಾವೇರಿಯಿಂದ ಗೋದಾವರಿವರೆಗೆ ಇರುವ ಕನ್ನಡ ನಾಡು ಅಖಂಡವಾದದ್ದು. ಪ್ರತಿ ಬಾರಿಯೂ ಆ ಭಾಗ– ಈ ಭಾಗ ಎಂದು ಹೇಳುವುದು ಸರಿಯಲ್ಲ. ಕರ್ನಾಟಕ ಅಖಂಡವಾಗಿರಬೇಕು. ನಾಡಿನ ಪರಂಪರೆ ಉಳಿಸಬೇಕು ಎಂಬುದೇ ನಮ್ಮ ಅಭಿಪ್ರಾಯ. ಕರ್ನಾಟಕವನ್ನು ಎರಡು ಭಾಗ ಮಾಡಬೇಕು ಎಂಬುವವರಿಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಬೆಂಗಳೂರು ಒಂದನೇಯದ್ದು ಅಲ್ಲ; ಬೆಳಗಾವಿ ಎರಡನೇಯದ್ದೂ ಅಲ್ಲ. ಬೆಂಗಳೂರನ್ನು ಅಭಿವೃದ್ಧಿ ಮಾಡಿದ ರೀತಿಯಲ್ಲೇ ಪುಣೆ– ಬೆಂಗಳೂರು ಹೆದ್ದಾರಿಯ ಕೊನೆಯವರೆಗೂ ಸಾಫ್ಟ್‌ವೇರ್‌ ಕಂಪನಿಗಳನ್ನು ತಂದು ಯುವಕ– ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕ.ರ.ವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ರಾಮೇಗೌಡ ಮಾತನಾಡಿ, ‘ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿರುವುದು ಸ್ವಾಗತಾರ್ಹ. ಅದರ ಜೊತೆಗೆ ಮುಖ್ಯಮಂತ್ರಿ ದಾವಣಗೆರೆಗೂ ಬಂದು ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ನಂಜುಂಡಪ್ಪ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಸಿಕ್ಕಿರುವ 371 ಜೆ ಸೌಲಭ್ಯದಡಿ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು. ಮಹದಾಯಿ ನದಿ ನೀರಿನ ವಿವಾದವನ್ನು ಬಗೆಹರಿಸಬೇಕು. ಕಲಬುರ್ಗಿ ಮತ್ತು ಬೆಳಗಾವಿ ಕಂದಾಯ ವಿಭಾಗದಲ್ಲಿ ದೆಹಲಿಯ ಏಮ್ಸ್‌ ತರದ ವಿಶೇಷ ಸವಲತ್ತಿನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎರಡು ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಜಿಲ್ಲಾ ಅಧ್ಯಕ್ಷ ಟಿ. ಶಿವಕುಮಾರ್‌, ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ರಾಜ್ಯ ಸಂಚಾಲಕ ಕೆ.ಜಿ. ಶಿವಕುಮಾರ್‌, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿದಿಳ್ಯಪ್ಪ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಎನ್‌.ಎಸ್‌. ರಾಜು, ಕ.ರ.ವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ ಅವರೂ ಹಾಜರಿದ್ದರು. ಬಳಿಕ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !