ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣ ಘಟಕಕ್ಕೆ ಟ್ಯಾಂಕರ್‌ ನೀರು ತುಂಬಲು ಸೂಚನೆ

ಬರ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಸಂಪು‌ಟ ಉಪ ಸಮಿತಿ ಅಧ್ಯಕ್ಷ ಶಿವಶಂಕರರೆಡ್ಡಿ
Last Updated 13 ಜನವರಿ 2019, 20:00 IST
ಅಕ್ಷರ ಗಾತ್ರ

ದಾವಣಗೆರೆ: ಟ್ಯಾಂಕರ್‌ ನೀರನ್ನೂ ಶುದ್ಧೀಕರಣ ಘಟಕಗಳಿಗೆ ಪೂರೈಕೆ ಮಾಡಿ. ಜನರಿಗೆ ಶುದ್ಧ ನೀರು ಕೊಡಿ ಎಂದು ಸಂಪು‌ಟ ಉಪ ಸಮಿತಿ ಅಧ್ಯಕ್ಷ, ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಚಿವ ಸಂಪುಟದ ಉಪ ಸಮಿತಿಯಿಂದ ಜಿಲ್ಲೆಯ ಬರ ನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಿ. ಹೆಚ್ಚಿನ ಅನುದಾನ ಬೇಕಾದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ‘ಜಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿದೆ. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಗತ್ಯ ಇರುವ ಕಡೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ ಅವರಿಗೆ ಸೂಚನೆ ನೀಡಿದರು.

‘ಹೊಸ ಕೊಳವೆಬಾವಿ ಕೊರೆಯುವ ಬದಲು ಬತ್ತಿಹೋದ ಕೊಳವೆಬಾವಿಗಳನ್ನೇ ರಿಬೋರ್‌ ಮಾಡಿ, ಆಳ ಹೆಚ್ಚಿಸಿ. ನಮ್ಮ ಜಿಲ್ಲೆ ತುಮಕೂರಿನಲ್ಲಿ 1,200 ಅಡಿವರೆಗೂ ಕೊಳವೆಬಾವಿ ಕೊರೆಯುಸುತ್ತೇವೆ. ಅಂತರ್ಜಲ ಮಟ್ಟ ಕುಸಿದಿದೆ. ಈಗೆಲ್ಲಾ 800 ಅಡಿ ಕೊರೆದರೆ ನೀರು ಸಿಗಲ್ಲ. 1,200 ಅಡಿ ಕೊಳವೆಬಾವಿ ತೋಡಿಸಿದರೆ ಖಂಡಿತ ನೀರು ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ ಸೂಚನೆ ನೀಡಿದರು. ಇದಕ್ಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಸಹ ದನಿಗೂಡಿಸಿದರು.

ಮೇವು ಕೊರತೆಯಾಗದಿರಲಿ:ಜಾನುವಾರಿಗೆ ನೀರು, ಮೇವು ಕೊರತೆಯಾಗದಂತೆ ಎಚ್ಚರವಹಿಸಿ. ಮೇವಿನ ಬೀಜಗಳ ಕಿಟ್‌ ವಿತರಿಸಿ, ಮೇವು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಿ. ಮೇವು ಖರೀದಿಸುವ ಭರವಸೆ ನೀಡಿದರೆ ರೈತರು ಬೆಳೆಯಲು ಮುಂದಾಗುತ್ತಾರೆ. ಈ ಬಗ್ಗೆ ಗಮನಹರಿಸಿ ಎಂದು ಶಿವಶಂಕರರೆಡ್ಡಿ ಹೇಳಿದರು.

ಜಿಲ್ಲೆಯಲ್ಲಿ 4,04,933 ಜಾನುವಾರು ಇದ್ದು, ಒಂದು ವಾರಕ್ಕೆ 13,096 ಮೆಟ್ರಿಕ್‌ ಟನ್ ಮೇವು ಅಗತ್ಯವಿದೆ. ಸದ್ಯ ಜಿಲ್ಲೆಯಲ್ಲಿ 3,03,898 ಟನ್ ಮೇವು ಸಂಗ್ರಹವಿದ್ದು, ಇನ್ನೂ 23 ವಾರಗಳಿಗೆ ಇದು ಸಾಕಾಗುತ್ತದೆ. 25,445 ಮೇವಿನ ಪೊಟ್ಟಣಗಳ ಸರಬರಾಜು ಮಾಡಲು ಆದೇಶ ಬಂದಿದ್ದು, ಇದರಲ್ಲಿ 13,916 ಕಿಟ್‌ಗಳು ಸರಬರಾಜಾಗಿದ್ದು, ಇನ್ನೂ 11,529 ಮೇವಿನ ಪೊಟ್ಟಣಗಳನ್ನು ವಿತರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪದ್ಮ ಬಸವಂತಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

* * *

ಬೆಳೆ ಹಾನಿಯಿಂದ ₹ 497 ಕೋಟಿ ನಷ್ಟ

ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ವೈಫಲ್ಯದಿಂದ ಅಂದಾಜು 497.31 ಕೋಟಿ ನಷ್ಟ ಉಂಟಾಗಿದೆ. ಇದರಲ್ಲಿ ಮಾನದಂಡಗಳಿಗೆ ಅನುಗುಣವಾಗಿ ₹ 90.37 ಪರಿಹಾರ ವಿತರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೌತಮ್‌ ಮಾಹಿತಿ ನೀಡಿದರು.

ಮುಂಗಾರಿನಲ್ಲಿ 67,009 ಹೆಕ್ಟೇರ್‌ ಮೆಕ್ಕೆಜೋಳ, 11,605 ಹೆಕ್ಟೇರ್‌ ಶೇಂಗಾ, 2,001 ಹೆಕ್ಟೇರ್‌ ಹತ್ತಿ, 1,894 ಹೆಕ್ಟೇರ್‌ ರಾಗಿ, 1,368 ಹೆಕ್ಟೇರ್‌ ತೊಗರಿ ಸೇರಿ ಒಟ್ಟು 84,161 ಹೆಕ್ಟೇರ್‌ನಷ್ಟು ಬೆಳೆಹಾನಿಯಾಗಿದೆ. 2,581 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೂ ಮುಂಗಾರು ಮಳೆ ಕೊರತೆ ಬಾಧಿಸಿದೆ. ಹಿಂಗಾರಿನಲ್ಲಿ 4,801 ಹೆಕ್ಟೇರ್‌ ಕಡಲೆ, 2,003 ಹೆಕ್ಟೇರ್‌ ಜೋಳ, 1,053 ಹೆಕ್ಟೇರ್‌ ಅಲಸಂದಿ, 216 ಹೆಕ್ಟೇರ್‌ ಗೋದಿ, 69 ಹೆಕ್ಟೇರ್‌ ರಾಗಿ, 30 ಹೆಕ್ಟೇರ್‌ ಸೂರ್ಯಕಾಂತಿ, 21 ಹೆಕ್ಟೇರ್‌ನಲ್ಲಿ ಬಿತ್ತಿದ್ದ ಮೆಕ್ಕೆಜೋಳ ಹಾಳಾಗಿದೆ. ಹಿಂಗಾರು ಹಿನ್ನಡೆಯಿಂದಾಗಿ 3,585 ಹೆಕ್ಟೇರ್‌ನಲ್ಲಿ ಹಾಕಿದ್ದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂಕಿ ಅಂಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT