ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಓರೆಕೋರೆಗಳನ್ನು ತಿದ್ದುವ ನಾಟಕಗಳು: ಮಹಾಂತ ರುದ್ರೇಶ್ವರ ಸ್ವಾಮೀಜಿ

ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ
Last Updated 29 ಏಪ್ರಿಲ್ 2022, 1:09 IST
ಅಕ್ಷರ ಗಾತ್ರ

ದಾವಣಗೆರೆ: ‘ನಾಟಕಗಳು ಮನುಕುಲದ ಓರೆಕೋರೆಗಳನ್ನು ನೇರವಾಗಿ ತಿದ್ದುವ ಮಾಧ್ಯಮ. ಮಕ್ಕಳ ಮೇಲೂ ಪರಿಣಾಮ ಬೀರುವ ಮೂಲಕ ಆದರ್ಶಗಳನ್ನು ನೇರವಾಗಿ ಮುಟ್ಟುತ್ತಿವೆ’ ಎಂದು ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸ್ನೇಹ ಬಳಗದಿಂದ ಇಲ್ಲಿನ ನೂತನ್ ಕಾಲೇಜು ಪಕ್ಕದ ಮೈದಾನದಲ್ಲಿ ಆಯೋಹಿಸಿದ್ದ ಶಿವ ಸಂಚಾರ ನಾಟಕೋತ್ಸವದಲ್ಲಿ 3ನೇ ದಿವಸ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾಟಕದ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಮಹಾಭಾರತದ, ಬಸವಣ್ಣ, ಅಕ್ಕಮಹಾದೇವಿ ಅವರ ಜೀವನ ಚರಿತ್ರೆಗಳನ್ನು ಪ್ರದರ್ಶನ ಮಾಡಿ ಮನುಕುಲದ ಓರೆಕೋರೆಗಳನ್ನು ತಿದ್ದುತ್ತಿವೆ. ನಾಟಕದ ಪರಂಪರೆಯನ್ನು ಹಿಡಿದುಕೊಂಡು ಗುಬ್ಬಿ ವೀರಣ್ಣ ನಾಟಕ ಕಂಪನಿ ಆರಂಭಿಸಿದರು. ಏಣಗಿ ಬಾಳಪ್ಪ, ಗುಡಿಗೇರಿ ಬಸವರಾಜ್, ಪುಟ್ಟರಾಜ ಗವಾಯಿಗಳು, ದಾವಣಗೆರೆಯಲ್ಲಿ ಚಿಂದೋಡಿ ಲೀಲಾ ಅವರು ನಾಟಕ ಪ್ರದರ್ಶನ ಮಾಡಿದರು. ಅವರಷ್ಟೇ ಅಲ್ಲದೇ ಶಿವಸಂಚಾರ ನಾಟಕದ ಮುಖೇನ ಸಮಾಜಕ್ಕೆ ಆದರ್ಶಪ್ರಾಯವಾದ ಕೆಲಸವನ್ನು ಸ್ವಾಮೀಜಿಗಳು ಮಾಡಿದ್ದಾರೆ’ ಎಂದರು.

‘ನಾಟಕ ತಾತ್ವಿಕ ಸಿದ್ಧಾಂತ ಧರ್ಮಪ್ರಚಾರ ಮಾಡಬೇಕು. ಮಹಾತ್ಮ ಗಾಂಧೀಜಿ ಅವರು ಸತ್ಯಹರಿಶ್ಚಂದ್ರ ಹಾಗೂ ಶ್ರವಣಕುಮಾರರ ನಾಟಕಗಳನ್ನು ನೋಡಿ ಸತ್ಯ ಹಾಗೂ ಭಕ್ತಿಯನ್ನು ರೂಢಿಸಿಕೊಂಡು ಮಹಾತ್ಮರಾದರು’ ಎಂದು ಹೇಳಿದರು.

ಕುಟುಂಬ ಪ್ರಮೋದ್‌ನ ಮುಖ್ಯಸ್ಥ ಕೆ.ಎಸ್‌. ರಮೇಶ್ ‘ನಮ್ಮ ಕುಟುಂಬ ನಮ್ಮ ಸಂಸ್ಕೃತಿ’ ವಿಷಯ ಕುರಿತು ಮಾತನಾಡಿ, ‘ವಿದೇಶದಲ್ಲಿ ಮದುವೆ ಕಾಂಟ್ರ್ಯಾಕ್ಟ್ ಆಗಿದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನೇಕ ವರ್ಷಗಳ ಬಹುಬಂಧನ. ಆರಂಭದಲ್ಲಿ ಎರಡು ಮೂರು ವರ್ಷಗಳು ಸಮಸ್ಯೆಗಳು ಆಗಬಹುದು. ಆದರೆ ಕುಟುಂಬದ ಶಕ್ತಿಯ ಆಧಾರದ ಮೇಲೆ 7 ಜನ್ಮಗಳು ಬದುಕುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬ್ರಿಟಿಷರು ಸಾವಿರಾರು ವರ್ಷಗಳ ಕಾಲ ನಮ್ಮನ್ನು ಆಳಿದರೂ ನಮ್ಮ ಸಂಸ್ಕೃತಿ ನಾಶವಾಗಿಲ್ಲ. ಆದರೆ ಕುಟುಂಬದ ಬೇರುಗಳು ಅಲುಗಾಡುತ್ತಿವೆ’ ಎಂದರು.

ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ,‘ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಲತಾ ಮಂಗೇಶ್ಕರ್ ಅವರು ಸತ್ತರೂ ಅವರ ಕಲೆಯ ಮೂಲಕ ಬದುಕಿರುತ್ತಾರೆ. ಜನರನ್ನು ತಿದ್ದಲು ಸಾಣೇಹಳ್ಳಿ ಶ್ರೀಗಳು ನಾಟಕವನ್ನು ಆಯೋಜಿಸಿ ವೇದಿಕೆ ಕಲ್ಪಿಸಿದ್ದಾರೆ. ನಾಟಕಕಾರರಿಗೆ ಉತ್ತಮ ಜೀವನ ಕೊಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್, ಪಂಚಾಕ್ಷರಪ್ಪ, ಕರಿಯಪ್ಪ, ರೈತ ಮುಖಂಡ ಶಾಮನೂರು ಲಿಂಗರಾಜ್, ಕೆ.ಬಿ.ಕೊಟ್ರೇಶ್, ಗುರುಸಿದ್ದಸ್ವಾಮಿ, ಈರಣ್ಣ, ರೇವಣಸಿದ್ದಪ್ಪ ಇದ್ದರು.

ಕಾರ್ಯಕ್ರಮದ ಬಳಿಕ ಬಿ.ಆರ್.ಹರಿಷಿಣಗೋಡಿ ರಚನೆಯ ವೈ.ಡಿ.ಬಾದಾಮಿ ನಿರ್ದೇಶನದ ‘ಬಸ್‌ ಕಂಡಕ್ಟರ್’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT