ಮಂಗಳವಾರ, ನವೆಂಬರ್ 12, 2019
28 °C

ಉನ್ನತ ಸ್ಥಾನಕ್ಕೇರಿವು ಕನಸು ಕಾಣಿ: ಬೀಳಗಿ

Published:
Updated:
Prajavani

ದಾವಣಗೆರೆ: ಬಾಲ್ಯದಿಂದಲೇ ಬಣ್ಣದ ಕನಸುಗಳನ್ನು ಕಾಣಬೇಕು. ಆ ಕನಸಿನ ಬೆನ್ನತ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನಗರದ ಡಾನ್ ಬೋಸ್ಕೊ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಬಲವರ್ಧನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಸು ಕಾಣುವುದು ನಿಮ್ಮ ಹಕ್ಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಕನಸು ಕಾಣಿ. ಆ ಗುರಿಯನ್ನು ಮುಟ್ಟಲು ಶ್ರಮವಹಿಸಿ. ನಿಮ್ಮ ಕನಸು ಸಮಾಜಮುಖಿಯಾಗಿರಲಿ ಎಂದು ಸಲಹೆ ನೀಡಿದರು.

ಮಕ್ಕಳ ಕನಸುಗಳನ್ನು ಹಿರಿಯರು, ಶಿಕ್ಷಕರು ಬೆಂಬಲಿಸಬೇಕು. ಓದುವುದು, ಆಡವಾಡುವುದು, ಸರಿಯಾದ ಆಹಾರ ತೆಗೆದುಕೊಳ್ಳುವುದು, ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಮಕ್ಕಳ ಹಕ್ಕು. ಮನೆಯಲ್ಲಿ, ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದರೆ  ಸಹಾಯವಾಣಿಗೆ ಕರೆಮಾಡಿ, ಇಲ್ಲವೇ ಪೋಷಕರಿಗೆ ಹೇಳಿ ಎಂದು ಮಕ್ಕಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶೈಲಜಾ ಬಸವರಾಜ್, ‘ಮಕ್ಕಳ ಶಿಕ್ಷಣ ಎನ್ನುವುದು ಒಂದು ಹಕ್ಕಷ್ಟೇ ಅಲ್ಲ. ಅನಿವಾರ್ಯತೆ ಕೂಡ ಆಗಿದೆ. ಜ್ಞಾನವಿಲ್ಲದ ಮನುಷ್ಯನಿಗೆ ಬೆಲೆ ಇಲ್ಲ. ಶ್ರದ್ಧೆಯಿಂದ ಓದಿ ಉತ್ತಮ ಸಂಸ್ಕಾರ ಪಡೆದಾಗ ಜಗತ್ತು ನಿಮ್ಮ ಮಾತು ಕೇಳುತ್ತದೆ. ಹಕ್ಕುಗಳ ಜೊತೆಗೆ ಹಿರಿಯರನ್ನು ಗೌರವಿಸುವ, ಕಿರಿಯರನ್ನು ಕಾಳಜಿ ಮಾಡುವ ಕರ್ತವ್ಯಗಳನ್ನು ನಿಭಾಯಿಸಬೇಕು. ಭವಿಷ್ಯಕ್ಕೆ ಪೂರಕವಾಗುವ ಚಟುವಟಿಕೆಯನ್ನು ಮಾಡುತ್ತಾ, ಆಟಗಳನ್ನಾಡುತ್ತಾ ಸ್ವಚ್ಛಂದವಾಗಿ ಬೆಳೆಯಿರಿ’ ಎಂದು ಹಾರೈಸಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಯುನಿಸೆಫ್, ಸರ್ವಶಿಕ್ಷಣ ಅಭಿಯಾನ ಹಾಗೂ ಇನ್ನಿತರ ಸಂಸ್ಥೆಗಳಿಂದ ಸಿದ್ಧಗೊಂಡಿರುವ ಕ್ರೀಂ(ಸಿಆರ್‌ಇಎಎಂ) ಕೈಪಿಡಿ ಮತ್ತು ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು. ಕರ್ನಾಟಕ ಸರ್ಕಾರ ಅದನ್ನು ಮುದ್ರಿಸಿ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಲ್ಲಿ ಸಮಾಜವಿಜ್ಞಾನ ಶಿಕ್ಷಕರು ಒಂದು ವಿಷಯವಾಗಿ ಮಕ್ಕಳಿಗೆ ಬೋಧಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾಧಿಕಾರಿಗೆ ಸಂಸ್ಥೆಯ ಸದಸ್ಯರು ಹಾಗೂ ಮಕ್ಕಳು ಮನವಿ ಮಾಡಿದರು.

ಸಾರ್ವಜನಿಕ ಶಿಕ್ಷಣಾಧಿಕಾರಿ ನಿರಂಜನ, ಕ್ಷೇತ್ರ ಶಿಕ್ಷಣಾಧಿಕಾರಿ ಉಷಾ ಕುಮಾರಿ, ಡಾನ್ ಬೋಸ್ಕೊ ದಾವಣಗೆರೆ ಆಡಳಿತಾಧಿಕಾರಿ ಫಾ.ಜೋಸ್ ಜೋಸೆಫ್, ಡಾನ್ ಬೋಸ್ಕೊ ಆಲೂರಹಟ್ಟಿ ಆಡಳಿತಾಧಿಕಾರಿ ಫಾ. ವಿವೇಕ್, ಲಕ್ಷ್ಮೀ, ಸಿದ್ದಪ್ಪ ಉಪಸ್ಥಿತರಿದ್ದರು. ದುರುಗಪ್ಪ ಸ್ವಾಗತಿಸಿದರು. ಮಂಜಪ್ಪ ಬಿ. ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)