ಭಾನುವಾರ, ಸೆಪ್ಟೆಂಬರ್ 20, 2020
22 °C

ದಾವಣಗೆರೆ: ರಜೆ ಪಡೆಯದೇ 30 ವರ್ಷ ದುಡಿದ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆ.ಎಸ್‌.ಆರ್‌.ಟಿ.ಸಿ ಬಸ್‌ ಚಾಲಕರಾಗಿ ಸೇವೆ ಸಲ್ಲಿಸಿದ 30 ವರ್ಷಗಳ ಅವಧಿಯಲ್ಲಿ ಇವರು ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ. ಬೆಂಗಳೂರು-ದಾವಣಗೆರೆ ಲೈನ್‌ನಲ್ಲಿಯೇ ಕಾರ್ಯ ನಿರ್ವಹಿಸಿರುವ ಇವರು ಒಮ್ಮೆಯೂ ಅಪಘಾತ ಮಾಡಿಲ್ಲ.

ಇವರೇ ಕೆ.ಎಸ್‌.ಆರ್‌.ಟಿ.ಸಿ.ಯ ದಾವಣಗೆರೆ ವಿಭಾಗದ ಚಾಲಕ ಎಂ.ಕೆ. ಕೃಷ್ಣಪ್ಪ. ಇವರು ತಮ್ಮ ಸೇವಾ ಅವಧಿಯಲ್ಲಿ ಪ್ರಯಾಣಿಸಿದ ದೂರ, ಖರ್ಚಾದ ಇಂಧನ, ಪಡೆದುಕೊಂಡ ವೇತನ ಎಲ್ಲವನ್ನೂ ಲೆಕ್ಕ ಹಾಕಿದ್ದಾರೆ. ಹಬ್ಬ, ಸಮಾರಂಭಗಳಿದ್ದರೂ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ.  

ಈಚೆಗೆ ನಿವೃತ್ತಿ ಹೊಂದಿದ ಕೃಷ್ಣಪ್ಪ ಅವರನ್ನು ಕೆಎಸ್‍ಆರ್‌ಟಿಸಿ ದಾವಣಗೆರೆ ಘಟಕ ಹಾಗೂ ಎಐಯುಟಿಸಿ ಆಶ್ರಯದಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಸನ್ಮಾನಿಸಿ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಸನ್ಮಾನ ಸ್ವೀಕರಿಸಿದ ಎಂ.ಕೆ.ಕೃಷ್ಣಪ್ಪ, ‘ನನ್ನ ವೃತ್ತಿ ಜೀವನದಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ತೊಂದರೆಯಾಗದಂತೆ ನಡೆದುಕೊಂಡಿದ್ದೇನೆ. ನನ್ನ ಪ್ರಯಾಣದ ಅವಧಿಯಲ್ಲಿ 24,40,470 ಕಿ.ಮೀ ದೂರ ಪ್ರಯಾಣಿಸಿದ್ದು, 4,83,187 ಲೀಟರ್ ಇಂಧನ ಖರ್ಚಾಗಿದೆ. 60,75,641 ವೇತನ ಪಡೆದುಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ರಾಮಚಂದ್ರಪ್ಪ ಮಾತನಾಡಿ, ‘ವೃತ್ತಿ ಜೀವನದಲ್ಲಿ ರಜೆರಹಿತವಾಗಿ ಕಾರ್ಯ ನಿರ್ವಹಿಸುವ ಮೂಲಕ ಹಾಗೂ ಅಪಘಾತ ರಹಿತವಾಗಿ ಚಾಲನೆ ಮಾಡಿ ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ’ ಎಂದು ಶ್ಲಾಘೀಸಿದರು.

ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಎಂ.ಮಹಾದೇವ, ಹಿರಿಯ ಘಟಕದ ವ್ಯವಸ್ಥಾಪಕ ಓ.ರೇಣುಕಪ್ಪ, ಚಿತ್ರದುರ್ಗದ ರಹೀಮ್ ಸಾಬ್, ಚಾಲಕರಾದ ಪಿ.ನಿಜಗುಣ, ಆವರಗೆರೆ ಎಚ್.ಜಿ.ಉಮೇಶ್, ರಾಚಪ್ಪ, ಪ್ರಕಾಶ್, ಕೃಷ್ಣಮೂರ್ತಿ, ಎಂ.ರಮೇಶ್, ಡಿ.ಎಂ. ಮಂಜಪ್ಪ, ಗುರುರಾಜ್, ವಿಜಯ್ ಕುಮಾರ್, ಮೂರ್ತಿನಾಯ್ಕ್, ರಂಗಸ್ವಾಮಿ ಹಾಗೂ ಮುಕುಂದ ತಳವಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು