ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣ ಮೈಮರೆತರೂ ಅಪಾಯಕ್ಕಿಡಾಗುವ ಚಾಲಕ ಕೆಲಸ: ಸಚಿವ ಎಸ್‌.ಆರ್‌. ಶ್ರೀನಿವಾಸ್‌

ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ಬೆಳ್ಳಿ ಪದಕ ವಿತರಣೆ
Last Updated 26 ಜನವರಿ 2019, 12:08 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕ್ಷಣವೂ ಮೈಮರೆತರೂ ಅಪಾಯಕ್ಕೀಡಾಗುವ ಕೆಲಸವೆಂದರೆ ಅದು ಚಾಲಕನ ವೃತ್ತಿ. ಅದರಲ್ಲಿ ಒಮ್ಮೆಯೂ ಅಪಘಾತವಾಗದಂತೆ ಬಸ್‌ ಚಲಾವಣೆ ಮಾಡಿ ಪದಕ ಪಡೆದಿರುವುದು ಗಣನೀಯ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಪ್ರಶಂಸಿಸಿದರು.

ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಅಪಘಾತರಹಿತ ಬಸ್‌ ಚಾಲನೆ ಮಾಡಿದ ಚಾಲಕರಿಗೆ ಶನಿವಾರ ಬೆಳ್ಳಿ ಪದಕ ವಿತರಿಸಿ ಅವರು ಮಾತನಾಡಿದರು.

ಅಪಘಾತ ರಹಿತ ಚಾಲನೆ ಮಾಡಿದವರನ್ನು ಗುರುತಿಸುವುದರಿಂದ ಮುಂದೆ ಚಾಲಕರಾಗುವವರಿಗೆ ಮಾರ್ಗದರ್ಶನ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಅಪಘಾತಗಳುಂಟಾಗಿ ಜೀವ ಹಾನಿಯಾದರೆ ಪರಿಹಾರ ನೀಡಿದರೆ ಜೀವ ಮರಳುವುದಿಲ್ಲ. ಹಾಗಾಗಿ ಅಪಘಾತ ಆಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದರೆ ಅಪಘಾತಗಳಿರುವುದಿಲ್ಲ. ಕೆಎಸ್‌ಆರ್‌ಟಿಸಿ ನಮ್ಮ ರಕ್ಷಣೆಗೆ ಇರುವ ಸಂಸ್ಥೆ ಎಂಬ ಭಾವನೆ ಪ್ರಯಾಣಿಕರಲ್ಲಿ ಬರುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ ಓಡಿಸಲು ಬಹಳ ಬೇಡಿಕೆ ಇದೆ. ಆದರೆ ರೂಟ್‌ ಪರ್ಮಿಟ್‌ ಇಲ್ಲ. ಹಾಗಾಗಿ ಆರ್‌ಟಿಒ ಕೂಡಲೇ ರೂಟ್‌ ಪರ್ಮಿಟ್‌ ನೀಡಲು ಕ್ರಮ ಕೈಗೊಳ್ಳಬೇಕು. ಬಸ್ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಬಸ್‌ಗಳನ್ನು ಖರೀದಿ ಮಾಡುತ್ತಿದೆ. ಹಾಗಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಲು, ಇತರ ಪ್ರಯಾಣಿಕರಿಗೆ ಉಪಯೋಗವಾಗಲು ಕೂಡಲೇ ಬಸ್‌ ಓಡಿಸಿ ಎಂದು ಹೇಳಿದರು.

ಗಾಜಿನಮನೆಗೆ ಬಸ್‌ ನಿತ್ಯ ಬಸ್‌ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ‘ಚಾಲಕರು ನಿವೃತ್ತರಾಗುವವರೆಗೆ ಬಸ್‌ ಚಲಾವಣೆ ಮಾಡುತ್ತಾ ಇರುವುದು ಸರಿಯಲ್ಲ. 50 ವರ್ಷ ದಾಟಿದ ಮೇಲೆ ಬಸ್‌ ಚಾಲನೆ ಕಷ್ಟವಾಗುತ್ತದೆ. ಅದಕ್ಕಾಗಿ ಅವರಿಗೆ ಬಡ್ತಿ ನೀಡಬೇಕು. ಯುವಕರು ಚಾಲಕರಾಗಿರಬೇಕು. ಅದೇ ರೀತಿ ಕಷ್ಟದ ಕೆಲಸ ಇದಾಗಿರುವುದರಿಂದ ಇತರ ರಾಜ್ಯಗಳ ಸರ್ಕಾರಿ ಬಸ್‌ ಚಾಲಕರಿಗಿಂತ ಅಧಿಕ ವೇತನ ನೀಡುವ ವ್ಯವಸ್ಥೆಯಾಗಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಬಾರ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ, ಮೇಯರ್‌ ಶೋಭಾ ಪಲ್ಲಾಗಟ್ಟೆ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್‌. ಹೆಬ್ಬಾಳ್‌, ಡಿಟಿಒ ಮಂಜುನಾಥ್‌, ಡಿಎಂಇ ವಿ.ಎಸ್‌. ಜಗದೀಶ ಉಪಸ್ಥಿತರಿದ್ದರು. ರಮೇಶ್‌ ಭಾರಧ್ವಾಜ್‌ ಕಾರ್ಯಕ್ರಮ ನಿರೂಪಿಸಿದರು.

ಬೆಳ್ಳಿ ಪದಕ ವಿಜೇತರು

26 ಚಾಲಕರು ಐದು ವರ್ಷ ಅಪಘಾತ ನಡೆಸದೇ ಬಸ್‌ ಚಾಲನೆ ಮಾಡಿದ್ದಾರೆ. ಅವರ ವಿವರ ನೀಡಲಾಗಿದೆ.

ದಾವಣಗೆರೆ ಘಟಕದ ಪಿ.ಎಚ್‌. ಪರಮೇಶ್ವರಪ್ಪ, ಎಚ್‌. ಬಸವರಾಜಪ್ಪ, ಬಿ.ಬಿ. ಹೂಗಾರ, ವಿ.ಸಿ. ಓಂಕಾರಪ್ಪ, ಆರ್‌. ಶಿವಮೂರ್ತಿ ನಾಯ್ಕ, ಕೆ.ಎಂ. ಶಾಂತಕುಮಾರ, ಎಂ.ಕೆ. ಶ್ರೀಧರ, ಜಿ.ಎಸ್‌. ಸುರೇಂದ್ರ, ಜಿ.ಆರ್‌. ಶಿವಕುಮಾರ, ಎಂ. ಮಂಜಪ್ಪ, ಭರ್ಮೇಗೌಡ, ಎನ್‌.ಆರ್‌. ಬಸವರಾಜಯ್ಯ, ಎಸ್‌.ಎಸ್‌. ಡೊಳ್ಳಿನ, ಎಂ. ಪ್ರಕಾಶ, ರಫತ್‌ಖಾನ್‌, ಎಸ್‌. ಓಂಕಾರಪ್ಪ.

ಹರಿಹರ ಘಟಕದ ಮಲ್ಲಜ್ಜ ಕೊಟ್ರೇಶ್‌, ಸಿರಾಜುದ್ದೀನ್‌, ಎಚ್‌.ಎಂ. ಪರಮೇಶ್ವರಪ್ಪ, ಪಿ.ಎಚ್‌. ತಿಪ್ಪೇಸ್ವಾಮಿ, ಎಚ್‌.ಡಿ. ಚಂದ್ರಪ್ಪ, ಎನ್‌. ನಾರಾಯಣಪ್ಪ, ಮಠದ ಲೋಕಯ್ಯ.

ಹರಪನಹಳ್ಳಿ ಘಟಕದ ವಿಲಾಸ ರೆಡ್ಡಿ, ಶಿವಣ್ಣನವರ ವೀರಣ್ಣ, ಚಿತ್ರದುರ್ಗ ಘಟಕದ ಕೆ. ಕರಿಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT