ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರದಲ್ಲಿ ಕಿಕ್ಕಿರಿದು ತುಂಬಿದ ಕೊಠಡಿಗಳು

ಡಿಆರ್‌ಎಂ ಕಾಲೇಜು: ಒಂದು ಬೆಂಚ್‌ಗೆ ಆರೇಳು ವಿದ್ಯಾರ್ಥಿಗಳು
Last Updated 5 ಜುಲೈ 2022, 4:12 IST
ಅಕ್ಷರ ಗಾತ್ರ

ಹರಿಹರ: ಇಲ್ಲಿನ ಡಿಆರ್‌ಎಂ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ವರ್ಷ ಪ್ರವೇಶ ಪ್ರಮಾಣ ಹೆಚ್ಚಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕ್ಲಾಸ್‌ ರೂಂ ಸೌಲಭ್ಯ ಇಲ್ಲದ್ದರಿಂದ ಲಭ್ಯವಿರುವ ಕಿರಿಯ ಕೊಠಡಿಗಳೆಲ್ಲ ತುಂಬಿ ತುಳುಕುತ್ತಿವೆ.

ಕಾಲೇಜಿನ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಈ ವರ್ಷ ಬರೋಬ್ಬರಿ 1,230 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪಾಠ ಆಲಿಸಲು ಕ್ಲಾಸ್‌ ರೂಂಗಳಲ್ಲಿ ಕುಳಿತುಕೊಳ್ಳಲು ಜಾಗದ ಕೊರತೆ ಉಂಟಾಗಿದೆ. ಕಳೆದ ವರ್ಷ 1,150 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಪ್ರವೇಶ ಪ್ರಮಾಣ ಹೆಚ್ಚುತ್ತಲೇ ಇದೆ.

ಕುಳಿತುಕೊಳ್ಳಲು ಬೆಂಚ್‌ನಲ್ಲಿ ಜಾಗ ಹಿಡಿಯಬೇಕೆಂದು ವಿದ್ಯಾರ್ಥಿಗಳು ಕ್ಲಾಸ್‌ ರೂಂ ಬೀಗ ತೆರೆಯುವ ಮುನ್ನವೇ ಬಾಗಿಲ ಮುಂದೆ ಸಾಲಲ್ಲಿ ನಿಲ್ಲುತ್ತಾರೆ. ತಡವಾಗಿ ಬಂದವರಿಗೆ ಕುಳಿತುಕೊಳ್ಳಲು ಜಾಗ ಸಿಗದೆ, ನೆಲವೇ ಗತಿ ಎಂಬ ಸ್ಥಿತಿ ಇದೆ.

ಯಾವ ತರಗತಿ ಎಷ್ಟು ವಿದ್ಯಾರ್ಥಿಗಳು?: ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ 270, ದ್ವಿತೀಯ ಪಿಯುಸಿಯಲ್ಲಿ 196, ವಾಣಿಜ್ಯ ವಿಭಾಗದ ಪ್ರಥಮ ವರ್ಷದಲ್ಲಿ 258, ದ್ವಿತೀಯ ವರ್ಷದಲ್ಲಿ 234, ವಿಜ್ಞಾನ ವಿಭಾಗದ ಪ್ರಥಮ ವರ್ಷಕ್ಕೆ 157 ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲ ತರಗತಿಗಳಿಗೆ ತಲಾ ಎರಡೆರಡು ಕೊಠಡಿಗಳಿವೆ. ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ತರಗತಿಯಲ್ಲಿ 115 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿ ಇದೆ. ಆಫೀಸ್‌, ಲ್ಯಾಬ್‌, ಸ್ಟಾಫ್‌ ರೂಂ, ಚಿಕ್ಕ ಗ್ರಂಥಾಲಯ ಮತ್ತು ಪ್ರಾಚಾರ್ಯರ ಕೊಠಡಿ ಸೇರಿ ಒಟ್ಟು 17 ಕೊಠಡಿಗಳು ಮಾತ್ರ ಇವೆ.

ಒಂದು ಕೊಠಡಿಯಲ್ಲಿ 50ರಿಂದ 70 ವಿದ್ಯಾರ್ಥಿಗಳಿದ್ದರೆ ಕುಳಿತುಕೊಳ್ಳಲು ಜಾಗ ಸಿಗುತ್ತದೆ.ಉಪನ್ಯಾಸಕರು ಪಾಠ ಮಾಡಿದ್ದು ಕೇಳಿಸುತ್ತದೆ. ಪಾಠದ ಅಂಶಗಳನ್ನು ಬರೆದುಕೊಳ್ಳಲು ಅನುಕೂಲವಾಗುತ್ತದೆ. ಉಪನ್ಯಾಸಕರಿಗೂ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ಸಾದ್ಯವಾಗುತ್ತದೆ. ಆದರೆ, ತರಗತಿಯೊಂದರಲ್ಲಿ 130ರವರೆಗೂ ವಿದ್ಯಾರ್ಥಿಗಳಿದ್ದರೆ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಪಾಡೇನು? ಎಂಬ ಪ್ರಶ್ನೆಎದುರಾಗುತ್ತಿದೆ.

ಸಾಮಾನ್ಯವಾಗಿ ಒಂದು ಡೆಸ್ಕ್‌ನಲ್ಲಿ ಗರಿಷ್ಠ ನಾಲ್ಕು ವಿದ್ಯಾರ್ಥಿ ಕುಳಿತುಕೊಳ್ಳಲು ವ್ಯವಸ್ಥೆ ಇರುತ್ತದೆ. ಆದರೆ, ಇಲ್ಲಿನ ಕೆಲವು ಕೊಠಡಿಗಳಲ್ಲಿ ಒಂದು ಡೆಸ್ಕ್‌ಗೆ ಆರೇಳು ವಿದ್ಯಾರ್ಥಿಗಳು ಕಷ್ಟಪಟ್ಟು ಕುಳಿತುಕೊಳ್ಳುತ್ತಾರೆ. ತಡವಾಗಿ ಬಂದವರು ನೆಲದ ಮೇಲೆಯೇ ಕುಳಿತು ಪಾಠ
ಕೇಳುತ್ತಾರೆ.

ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿರುವುದನ್ನು ಗಮನಿಸಿದರೆ ಇಲ್ಲಿ ಕೂಡಲೇ ಕನಿಷ್ಠ 10 ಕೊಠಡಿ ನಿರ್ಮಿಸುವ ಮತ್ತು ತರಗತಿಗಳನ್ನು ಬೇರ್ಪಡಿಸಿ ಪಾಠ ನೀಡುವ ಅಗತ್ಯವಿದೆ. ಒಳಾಂಗಣ ಕ್ರೀಡೆ, ಗ್ರಂಥಾಲಯ, ಮಹಿಳಾ ವಿಶ್ರಾಂತಿ ಕೊಠಡಿಗೆ ಅವಕಾಶ ಸಿಗುತ್ತದೆ. 1,200 ವಿದ್ಯಾರ್ಥಿಗಳನ್ನು ಒಮ್ಮೆಲೇ ಸೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಕಾರ್ಯಾಗಾರ ಮಾಡಲು ಸುಸಜ್ಜಿತ, ವಿಶಾಲ ಸಭಾಂಗಣದ ಅಗತ್ಯವೂ ಇದೆ.

ಹೈಟೆಕ್ ಶೌಚಾಲಯ ಬೇಕು: ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಲಾ 15 ಮೂತ್ರಾಲಯ, ತಲಾ 4 ಶೌಚಾಲಯಗಳು ಇವೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯನಿರ್ಮಾಣವಾಗಬೇಕಿದೆ.

ಉಪನ್ಯಾಸಕರು, ಸಿಬ್ಬಂದಿ ಬೇಕು: ಈಗ ಇಲ್ಲಿ 13 ಶಾಶ್ವತ ನೇಮಕಾತಿಯ ಉಪನ್ಯಾಸಕರು, 11 ಅರೆಕಾಲಿಕ ಉಪನ್ಯಾಸಕರು ಇದ್ದಾರೆ. ತಲಾ ಒಬ್ಬ ದ್ವಿತೀಯ ದರ್ಜೆ ಸಹಾಯಕ, ಗ್ರಂಥಪಾಲಕ, ಪ್ರಯೋಗಾಲಯ ಸಹಾಯಕರಿದ್ದಾರೆ. ಉಪನ್ಯಾಸಕರ ಪೈಕಿ ಭೌತವಿಜ್ಞಾನ, ಗಣಿತ, ಕನ್ನಡ, ಲೆಕ್ಕಶಾಸ್ತ್ರ, ಬೋಧಕೇತರ ಸಿಬ್ಬಂದಿ ಪೈಕಿ ತಲಾ ಒಬ್ಬ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹಾಗೂ ಇಬ್ಬರು ಅಟೆಂಡರ್‌ಗಳಅಗತ್ಯವಿದೆ.

ಜನಪ್ರತಿನಿಧಿಗಳಿಗೆ ಕಾಳಜಿ ಎಷ್ಟಿದೆ?
ಶಿಕ್ಷಣದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ತಾಲ್ಲೂಕಿನ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ ವಾಸ್ತವವಾಗಿ ಎಷ್ಟು ಕಾಳಜಿ ಇದೆ ಎನ್ನುವುದು ಈ ಕಾಲೇಜಿನ ವಿದ್ಯಾರ್ಥಿಗಳ ಪಾಡು ನೋಡಿದರೆ ತಿಳಿಯುತ್ತದೆ. ಮತ ಬ್ಯಾಂಕ್ ರಾಜಕಾರಣ ಬಿಟ್ಟು ರಾಜಕಾರಣಿಗಳು ಬಡವರ ಮಕ್ಕಳಿರುವ ಕಾಲೇಜಿನ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೆಸರು ಹೇಳಲಿಚ್ಛಿಸದ ಪಾಲಕರೊಬ್ಬರು ಅಭಿಪ್ರಾಯಪಟ್ಟರು.

....

ಪ್ರತಿ ವರ್ಷದಂತೆ ಈ ವರ್ಷವೂ ಈ ಕಾಲೇಜಿಗೆ ಅಗತ್ಯ ಇರುವ ಸೌಲಭ್ಯಗಳ ಬಗ್ಗೆ ಪದವಿಪೂರ್ವ ಶಿಕ್ಷಣ ಮಂಡಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುಮೋದನೆಯಾಗಿ ಅನುದಾನ ಬಂದರೆ ಸೌಲಭ್ಯ ಒದಗಿಸಲಾಗುವುದು.
– ಶಿವರಾಜ್, ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ದಾವಣಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT