ಶುಕ್ರವಾರ, ಮಾರ್ಚ್ 24, 2023
22 °C

ಡ್ರಗ್ಸ್‌ ಮಾಫಿಯಾ ಜೊತೆ ಚಿತ್ರರಂಗದ ನಂಟು: ಸಮಗ್ರ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡ್ರಗ್ಸ್‌ ಮಾಫಿಯಾ ಜೊತೆಗೆ ಸ್ಯಾಂಡಲ್‌ವುಡ್‌ ತಾರೆಯರು ಹಾಗೂ ರಾಜಕೀಯ ನಾಯಕರು ಸಂಪರ್ಕ ಹೊಂದಿರುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಕನ್ನಡ ಚಿತ್ರಚಿತ್ರ ನಟ ಆಸಿಫ್‌ ಇಕ್ಬಾಲ್‌ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರು ತಾವು ನಟಿಸಿದ ಮೊದಲ ಚಿತ್ರಗಳ ಬಗ್ಗೆ ಮಾಧ್ಯಮದವರ ಮುಂದೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅಲ್ಪ ಅವಧಿಯಲ್ಲೇ ರಾಗಿಣಿ ಹಾಗೂ ಸಂಜನಾ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ರಾಗಿಣಿಗೆ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಹಾಗೂ ಜಾನಪದ ಲೋಕದ ಬಳಿ ಎರಡು ಎಕರೆ ಜಮೀನು ಇದೆ. ಸಂಜನಾ ಬಳಿಯೂ ನಾಲ್ಕೈದು ಬಂಗಲೆಗಳಿವೆ. ಇಷ್ಟೊಂದು ಆಸ್ತಿ ಗಳಿಸಲು ಇವರಿಗೆ ಯಾರು ಸಹಾಯ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಕಂಠೀರವ ಸ್ಟುಡಿಯೊದ ಮಾಜಿ ಚೇರ್ಮನ್‌ ಹಾಗೂ ಬಿಜೆಪಿಯ ರಾಮನಗರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ. ರುದ್ರೇಶ್‌ ಅವರು ರಾಗಿಣಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪರಿಚಯಿಸಿದ್ದರು. ರಾಗಿಣಿ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ರುದ್ರೇಶ್‌ ಅವರನ್ನು ತನಿಖೆಗೊಳಪಡಿಸಿದರೆ ಹಲವು ಮಾಹಿತಿ ಬಹಿರಂಗಗೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟರು.

‘ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರು ಕೊಲೊಂಬೊಕ್ಕೆ ಹೋಗಿದ್ದಾರೆ ಎಂಬುದು ನಿಜ. ಆದರೆ, ಸಂಜನಾ ಜೊತೆಗೆ ಕೊಲೊಂಬೊಕ್ಕೆ ಹೋಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ರಾಜಕೀಯ ದುರುದ್ದೇಶದಿಂದ ಡ್ರಗ್ಸ್‌ ಪ್ರಕರಣದಲ್ಲಿ ಜಮೀರ್‌ ಅಹ್ಮದ್‌ ಹೆಸರನ್ನು ತರಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

‘ಡಾ. ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ ಅವರಂತಹ ಮಹಾನ್‌ ಕಲಾವಿದರ ಪರಿಶ್ರಮದಿಂದ ಸ್ಯಾಂಡಲ್‌ವುಡ್‌ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಕನ್ನಡ ಚಿತ್ರರಂಗದ ಹೆಸರನ್ನು ಹಾಳು ಮಾಡುತ್ತಿರುವ ಡ್ರಗ್‌ ಮಾಫಿಯಾ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬಾಲಿವುಡ್‌ ಸಹ ನಿರ್ಮಾಪಕ ಅಬ್ದುಲ್‌ ಬಾರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು