ಗುರುವಾರ , ಡಿಸೆಂಬರ್ 5, 2019
19 °C
ಮುಂಗಾರು ಪೂರ್ವದಲ್ಲಿ ಆರ್ಭಟಿಸಿದ ಮಳೆ ಈಗ ಕ್ಷೀಣ, ರೈತರಲ್ಲಿ ಹೆಚ್ಚಿದ ಆತಂಕ

ಬಾಡುತ್ತಿರುವ ಬೆಳೆ; ಮಳೆ ನಿರೀಕ್ಷೆಯಲ್ಲಿ ಕೃಷಿಕರು

ಎನ್.ಕೆ. ಆಂಜನೇಯ Updated:

ಅಕ್ಷರ ಗಾತ್ರ : | |

 ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರವಿನಾಯ್ಕ ಅವರ ಮೆಕ್ಕೆಜೋಳದ ಬೆಳೆ ಬಾಡುತ್ತಿರುವುದು

ಹೊನ್ನಾಳಿ: ಮುಂಗಾರಿನ ಆರಂಭದಲ್ಲಿ ಆರ್ಭಟಿಸಿದ್ದ ಮಳೆ ಇದೀಗ ಮರೆಯಾಗಿದ್ದು, ರೈತರಲ್ಲಿ ಆತಂಕದ ಛಾಯೆ ಕವಿಯುವಂತೆ ಮಾಡಿದೆ. ಆರಂಭದಲ್ಲಿ ತಾಲ್ಲೂಕಿನ ಕೆಲ ಭಾಗಗಳಲ್ಲಿ ಬಿತ್ತನೆಗೆ ಅನುಕೂಲವಾಗುವಂತೆ ಮಳೆ ಸುರಿದಿತ್ತು. ಹಲವು ಭಾಗಗಳಲ್ಲಿ ಮಳೆ ಕ್ಷೀಣಿಸಿದ್ದರಿಂದ ಬಿತ್ತನೆ ಕುಂಠಿತಗೊಂಡಿತ್ತು. ಇದರಿಂದ ಬಿತ್ತನೆ ಮಾಡಿದ, ಬಿತ್ತಬೇಕಾದ ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 55 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 19 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯವಿದೆ. ಉಳಿದ 34,750 ಹೆಕ್ಟೇರ್ ಭೂಮಿ ಮಳೆ ಆಧಾರಿತ ಪ್ರದೇಶವಾಗಿದೆ. ಇದರಲ್ಲಿ 27,786 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ಬಾರಿ ಬೀಜ ಬಿತ್ತನೆ ಮಾಡಲಾಗಿದೆ. ಈ ಪೈಕಿ 22,469 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾಕಲಾಗಿದೆ. 2,506 ಹೆಕ‌ಟೇರ್‌ನಲ್ಲಿ ಶೇಂಗಾ, 867 ಹೆಕ್ಟೇರ್‌ನಲ್ಲಿ ಹತ್ತಿ, 828 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಕೇವಲ ಶೇ 77.16ರಷ್ಟು ಬಿತ್ತನೆಯಾಗಿದೆ. ಮಳೆ ಅಭಾವದಿಂದಾಗಿ ಉಳಿದ ಶೇ 22ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ತಾಲ್ಲೂಕಿನ 6 ಹೋಬಳಿಗಳ ಪೈಕಿ ಕುಂದೂರು ಭಾಗದಲ್ಲಿ ಶೇ 63 ರಷ್ಟು ಬಿತ್ತನೆಯಾಗಿದ್ದರೆ, ತಿಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವಾಲಾಲ್ ನಗರ, ಸಿಂಗಟಗೆರೆ, ತರಗನಹಳ್ಳಿ ಗ್ರಾಮಗಳಲ್ಲಿ ಮಳೆಯ ಅಭಾವ ಕಂಡು ಬಂದಿದೆ.

ಕಸಬಾ ವ್ಯಾಪ್ತಿಯಲ್ಲಿ ಶೇ 64ರಷ್ಟು ಬಿತ್ತನೆಯಾಗಿದ್ದು, ಮಾಸಡಿ, ಅರಕೆರೆ, ಕಮ್ಮಾರಗಟ್ಟೆ, ಸೊರಟೂರು, ಎಚ್. ಕಡದಕಟ್ಟೆ, ಅರಬಗಟ್ಟೆ, ಬೆನಕನಹಳ್ಳಿ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೂ ರೈತರು ಮಳೆ ಬರಬಹುದು ಎನ್ನುವ ಆಶಾಭಾವನೆಯಿಂದ ಭೂಮಿ ತೇವಾಂಶವಿದ್ದ ಕಡೆಗಳಲ್ಲಿ ಕೃಷಿ ಚಟುವಟಿಕೆ ನಡೆಸಿದ್ದಾರೆ.

ಸವಳಂಗ, ಬೆಳಗುತ್ತಿ, ಚಟ್ನಹಳ್ಳಿ, ಚಿನ್ನಿಕಟ್ಟೆ, ಯರಗನಾಳು, ಸುರಹೊನ್ನೆ, ಸೋಗಿಲು ಭಾಗಗಳಲ್ಲಿ ಬೆಳೆಗಳ ಬೆಳವಣಿಗೆಗೆ ಅನುಕೂಲವಾದ ವಾತಾವರಣವಿದ್ದು, ಬಹುತೇಕ ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಕೈಕೊಟ್ಟಿದ್ದು, ಶುಷ್ಕ ವಾತಾವರಣ ಸೃಷ್ಟಿಯಾಗಿದೆ. ಬಿತ್ತಿದ ಬೆಳೆ ಅಲ್ಲಲ್ಲಿ ಒಣಗಿ ಹೋಗುತ್ತಿರುವುದು ಕಂಡುಬಂದಿದೆ. ಇದೇ ರೀತಿಯ ಶುಷ್ಕ ವಾತಾವರಣ ಕಂಡುಬಂದರೆ ಬಿತ್ತಿದ ಬೆಳೆ ಮಣ್ಣುಪಾಲಾಗುವುದು ನಿಶ್ಚಿತ. ಹೀಗಾದರೆ ಈ ವರ್ಷವೂ ಬರಗಾಲ ಅನುಭವಿಸಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

‘ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಈಗಾಗಲೇ ಬಿತ್ತಿದ ಬೆಳೆಗೆ ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಅವಶ್ಯಕತೆ ಇದ್ದರೆ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸಿಂಪರಣೆ ಮಾಡಬೇಕು. ಪರ್ಯಾಯ ನೀರಾವರಿ ಲಭ್ಯವಿದ್ದರೆ ನೀರು ಹಾಯಿಸಬೇಕು’ ಎಂದು ಸಲಹೆ ನೀಡುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಡಾ. ರೇವಣಸಿದ್ದನಗೌಡ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು