ಡಿಎಸ್‌–4 ಕಾರ್ಯಕರ್ತರಿಂದ ಧರಣಿ

7
ಸಂವಿಧಾನಕ್ಕೆ ಅವಮಾನ: ಗಡಿಪಾರಿಗೆ ಒತ್ತಾಯ

ಡಿಎಸ್‌–4 ಕಾರ್ಯಕರ್ತರಿಂದ ಧರಣಿ

Published:
Updated:
Deccan Herald

ದಾವಣಗೆರೆ: ದೆಹಲಿಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ಹಾಗೂ ಸಂವಿಧಾನದ ಮುಖಪುಟವನ್ನು ಸುಟ್ಟ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿ.ಎಸ್‌–4) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ಬಂದು 71 ವರ್ಷಗಳಾದರೂ ಅಸ್ಪೃಶ್ಯತೆ, ಹಸಿವು, ನಿರುದ್ಯೋಗ, ಅತ್ಯಾಚಾರ, ಅನಾಗರಿಕತೆಯಂತಹ ಸಮಸ್ಯೆಗಳು ದೇಶವನ್ನು ಕಾಡುತ್ತಿದೆ. ಅಂಬೇಡ್ಕರ್‌ ರಚಿಸಿದ ಸಂವಿಧಾನ ಕಲ್ಪಿಸಿಕೊಟ್ಟ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಆಶಯಗಳು ಇನ್ನೂ ಈಡೇರದೇ ಇರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಎಸ್‌–4ನ ಜಿಲ್ಲಾ ಸಮಿತಿ ಅಧ್ಯಕ್ಷ ಹೆಗ್ಗೆರೆ ರಂಗಪ್ಪ ಮಾತನಾಡಿ, ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ಪ್ರತಿ ಬಜೆಟ್‌ನಲ್ಲಿ ಎಸ್‌.ಸಿ– ಎಸ್‌.ಟಿ ಜನಸಂಖ್ಯೆಗೆ ಅನುಗುಣವಾಗಿ ಶೇ 25ರಷ್ಟು ಹಣ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆ ಕಾಯ್ದೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಶಿಕ್ಷಣ, ಆರೋಗ್ಯ ಹಾಗೂ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿ, ಎಲ್ಲರಿಗೂ ಅದು ಲಭಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಮೋದಿಸಿ, ಕೇಂದ್ರಕ್ಕೆ ಕೂಡಲೇ ಶಿಫಾರಸು ಮಾಡಬೇಕು. ದಾವಣಗೆರೆಯಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್‌ ಭವನದ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.

ಡಿ.ಎಸ್‌–4ನ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ. ಬಸವರಾಜ್‌, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್‌ ನೋಟದವರ್‌, ಉಪಾಧ್ಯಕ್ಷ ಎಲ್‌. ಜಯಪ್ಪ, ಕೆ.ಸಿ. ಮೂರ್ತಿ ಬೆಳ್ಳಿಗನೂಡು, ನಾಗಲಿಂಗಪ್ಪ ಜಗಳೂರು, ಕಬ್ಬಳ್ಳಿ ಬಸವರಾಜ್‌, ಕಾರಿಗನೂರು ನಾಗರಾಜ್‌, ವಿನಾಯಕ ಎನ್‌. ಹೊಳೆಸಿರಿಗೆರೆ, ಕೆ.ಎಂ. ವಾಗೀಶಯ್ಯ, ಡಿ.ಡಿ. ಹನುಮಂತಪ್ಪ, ನ್ಯಾಮತಿ ಹಾಲೇಶ್‌ ಅವರೂ ಧರಣಿಯಲ್ಲಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !