ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ಆಗಸ್ಟ್ 24ರಿಂದ 27ರವರೆಗೆ ‘ದಲಿತ ಚಳವಳಿ ಅಂದು ಇಂದು..ಮುಂದು’ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ ಹರಿಹರ ತಾಲ್ಲೂಕಿನ ಹನಗವಾಡಿಯ ಪ್ರೊ.ಬಿ. ಕೃಷ್ಣಪ್ಪ ಅವರ ಸ್ಮಾರಕಭವನ (ಮೈತ್ರಿವನ)ದಲ್ಲಿ ನಡೆಯಲಿದೆ.
‘ದೇಶದಲ್ಲಿ ಬೇರೂರಿರುವ ಅಸಮಾನತೆ, ತಾರತಮ್ಯ, ಕೋಮುವಾದಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಸಂವಿಧಾನವನ್ನು ಉಳಿಸಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ’ ಎಂದು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಆ.24ರಂದು ಬೆಳಿಗ್ಗೆ 11ಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ಎ.ಬಿ.ರಾಮಚಂದ್ರಪ್ಪ, ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಬಿ.ಎನ್.ಉಮೇಶ್, ಜನ ಪ್ರಕಾಶನದ ಬಿ.ರಾಜಶೇಖರ ಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.
ಆ.24ರಿಂದ 27ರವರೆಗೂ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿದ್ದು, ತಜ್ಞರು ವಿಷಯ ಮಂಡಿಸುವರು. ಆ.27ರಂದು ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾಗವಹಿಸುವರು. ವೆಂಕಟೇಶ್ ನೆಲ್ಲಿಕುಂಟೆ, ರುದ್ರಪ್ಪ ಹನಗವಾಡಿ, ಕೆ.ಎಂ.ರಾಮಚಂದ್ರಪ್ಪ ಮೊದಲಾದವರು ಭಾಷಣ ಮಾಡುವರು. ನಾಗಣ್ಣ ಬಡಿಗೇರ ಅಧ್ಯಕ್ಷತೆ ವಹಿಸುವರು’ ಎಂದು ಮಾಹಿತಿ ನೀಡಿದರು.
‘ಮಾನವ ಬಂಧುತ್ವ ವೇದಿಕೆಯಿಂದ ಉದ್ಯಮಶೀಲತಾ ಶಿಬಿರಗಳನ್ನು ಆಯೋಜಿಸುವ ಮೂಲಕ ಬಹುಮುಖಿ ಚಿಂತನೆಗಳಿಗೆ ವೇದಿಕೆಯಾಗುತ್ತಿದೆ’ ಎಂದು ವೇದಿಕೆಯ ಅಧ್ಯಕ್ಷ ಪ್ರೊ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.
ನಾಗಣ್ಣ ಬಡಿಗೇರ, ಜೀವೇಶ್, ರುದ್ರಪ್ಪ ಹನಗವಾಡಿ, ಮಣಿಪಾಲ್ ರಾಜಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.