ಶೀಘ್ರವೇ ಸರ್ಕಾರದಿಂದ ನಿರ್ಧಾರ: ಡಿಸಿ

7
ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯ

ಶೀಘ್ರವೇ ಸರ್ಕಾರದಿಂದ ನಿರ್ಧಾರ: ಡಿಸಿ

Published:
Updated:
Deccan Herald

ದಾವಣಗೆರೆ: ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರ ತೆರೆಯುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಶಾಸಕ ಎಸ್‌.ಎ. ರವೀಂದ್ರನಾಥ ನೇತೃತ್ವದಲ್ಲಿ ಭಾರತೀಯ ರೈತ ಒಕ್ಕೂಟದ ಮುಖಂಡರ ನಿಯೋಗ ಸೋಮವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಖರೀದಿ ಕೇಂದ್ರ ತೆರೆಯುವ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಮೂರು ಬಾರಿ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಇಂದು ಚರ್ಚಿಸಿದಾಗ, ಈ ವಿಷಯ ನಿರ್ಣಾಯಕ ಹಂತದಲ್ಲಿದ್ದು, ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಈಗ ಇನ್ನೊಮ್ಮೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗುವುದು’ ಎಂದು ಡಾ. ಬಗಾದಿ ಗೌತಮ್‌ ತಿಳಿಸಿದರು.

ಎಸ್‌.ಎ. ರವೀಂದ್ರನಾಥ್‌, ‘ಒಂದು ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹ 1,700 ಹಾಗೂ ಭತ್ತಕ್ಕೆ ₹ 1,750 ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರವನ್ನು ಆರಂಭಿಸಿಲ್ಲ. ದೀಪಾವಳಿ ಹಬ್ಬದ ಬಳಿಕ ರೈತರು ಬೆಳೆ ಕಟಾವು ಆರಂಭಿಸುತ್ತಾರೆ. ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಪ್ರೊ. ಲಿಂಗಣ್ಣ, ‘ಈಗಲೇ ಕಡಿಮೆ ಬೆಲೆಗೆ ರೈತರು ಬೆಳೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಖರೀದಿ ಕೇಂದ್ರ ಆರಂಭಿಸದಿದ್ದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ಲಿಂಗರಾಜ್‌ ಶಾಮನೂರು, ‘ದಾವಣಗೆರೆ ಜಿಲ್ಲೆಯನ್ನು ಮೆಕ್ಕೆಜೋಳದ ಕಣಜ ಎನ್ನುತ್ತಾರೆ. ಇಲ್ಲಿ 10 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಬರಗಾಲ ಇರುವುದರಿಂದ ಐದಾರು ಲಕ್ಷ ಟನ್‌ ಬೆಳೆ ಬರಬಹುದು. ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‌ನಲ್ಲಿ ಐದು ಲಕ್ಷ ಟನ್‌ ಭತ್ತ ಬೆಳೆಯಲಾಗುತ್ತಿದೆ. ಬೆಲೆ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹರಿಯಾಣ, ಪಂಜಾಬ್‌ ರಾಜ್ಯಗಳಲ್ಲಿ ಭಾರತೀಯ ಆಹಾರ ನಿಗಮದ ಮೂಲಕ ಈಗಾಗಲೇ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲೂ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷ ಎಸ್‌. ನಾಗರಾಜರಾವ್‌ ಕೊಂಡಜ್ಜಿ, ‘ನಾಲ್ಕು ವರ್ಷಗಳ ಕಾಲ ನೀರಿಲ್ಲದೆ ಭತ್ತ ಬೆಳೆಯಲು ತೊಂದರೆಯಾಗಿತ್ತು. ಈ ಬಾರಿ ಜಲಾಶಯದಲ್ಲಿ ನೀರು ಇದ್ದುದರಿಂದ ಭತ್ತ ಬೆಳೆಯಲು ಸಾಧ್ಯವಾಗಿದೆ. ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ರೈತರು ಮತ್ತೆ ತೊಂದರೆಗೆ ಒಳಗಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ಧನಂಜಯ ಕಡ್ಲೆಬಾಳ, ಶಿವರಾಜ್‌ ಪಾಟೀಲ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !