ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಸಿದ್ಧವಾದ ಪರಿಸರ ಸ್ನೇಹಿ ಬೈಸಿಕಲ್‌

20 ಕಡೆಗಳಲ್ಲಿ ಡಾಕಿಂಗ್‌ ಸ್ಟೇಷನ್‌ಗಳು l 100 ಸಾಮಾನ್ಯ, 100 ಎಲೆಕ್ಟ್ರಿಕಲ್‌ ಬೈಸಿಕಲ್‌
Last Updated 27 ಜನವರಿ 2021, 2:52 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಸಂಚರಿಸಲು ಇನ್ನು ಆಟೊ, ಬಸ್‌ ಹಿಡಿಯಬೇಕಿಲ್ಲ. ಬೈಸಿಕಲ್‌ನಲ್ಲಿಯೇ ಹೋಗಬಹುದು. ಒಂದು ಡಾಕಿಂಗ್‌ ಸೆಂಟರ್‌ನಲ್ಲಿ ಬೈಸಿಕಲ್‌ ತೆಗೆದುಕೊಂಡು ಇನ್ನೊಂದು ಡಾಕಿಂಗ್‌ ಸೆಂಟರ್‌ನಲ್ಲಿ ಬಿಟ್ಟು ಹೋಗಬಹುದು. ಇಂಥದ್ದೊಂದು ವ್ಯವಸ್ಥೆಯನ್ನು ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಜಾರಿಗೆ ತಂದಿದೆ. 100 ಸಾಮಾನ್ಯ ಬೈಸಿಕಲ್‌, 100 ಎಲೆಕ್ಟ್ರಿಕಲ್‌ ಬೈಸಿಕಲ್‌ಗಳು ಓಡಾಡಲಿವೆ.

ಕಡಿಮೆ ಅಂತರದ ಪ್ರಯಾಣಕ್ಕೆ ಎಂಜಿನ್‌ ಇರುವ ವಾಹನಗಳನ್ನು ಬಳಸದೇ ಬೈಸಿಕಲ್‌ ಬಳಸುವುದರಿಂದ ಇಂಧನ ಉಳಿತಾಯವಾಗುತ್ತದೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ ತಪ್ಪುತ್ತದೆ. ಬಳಕೆದಾರರಿಗೆ ಉತ್ತಮ ವ್ಯಾಯಾಮವೂ ದೊರೆಯುತ್ತದೆ. ಈ ಕಾರಣದಿಂದ ಈ ಯೋಜನೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲಾಗಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬೈಸಿಕಲ್‌ಗಳಲ್ಲಿ ಜಿಪಿಆರ್‌ಎಸ್‌, ಟ್ರ್ಯಾಕಿಂಗ್‌, ಮೊಬೈಲ್‌ ಅಪ್ಲಿಕೇಶನ್‌ ಅಳವಡಿಸಲಾಗಿದೆ. ಹಾಗಾಗಿ ಬೈಸಿಕಲ್‌ ಕಳವು ಮಾಡಿದರೂ ಪತ್ತೆ ಹಚ್ಚಲಾಗುತ್ತದೆ. ಜತೆಗೆ ಈ ರೀತಿಯ ಬೈಸಿಕಲ್‌ ಬೇರೆ ಎಲ್ಲೂ ಇಲ್ಲದೇ ಇರುವುದರಿಂದ ಹೊರಗೆ ಒಯ್ದರೆ ಕದ್ದಿದ್ದು ಎಂಬುದು ಸುಲಭವಾಗಿ ಗೊತ್ತಾಗುತ್ತದೆ ಎಂದು ದಾವಣಗೆರೆಯಲ್ಲಿ ಬೈಸಿಕಲ್‌ ಶೇರಿಂಗ್‌ ಸಿಸ್ಟಂ ಅನುಷ್ಠಾನಗೊಳಿಸುತ್ತಿರುವ ಬೆಂಗಳೂರಿನ ಕೂ ರೈಡ್ಸ್ ಸಂಸ್ಥೆಯ ಸಿಇಒ ಅರ್ಫತ್‌ ಮಾಹಿತಿ ನೀಡಿದರು.

ಪೌಡರ್‌ ಲೇಪಿತ ಅಲ್ಯುಮಿನಿಯಂ ಅಲಾಯ್‌ ಯುನಿಸೆಕ್ಸ್‌ ಸ್ಟೆಪ್‌, ಥ್ರೂ ಫ್ರೇಮ್‌ ಎರಡು ರೀತಿಯ ಬೈಸಿಕಲ್‌ನಲ್ಲಿಯೂ ಇರುತ್ತದೆ. ವಿದ್ಯುನ್ಮಾನ ನಿಯಂತ್ರಿತ ಹಬ್‌ ಮೋಟಾರ್‌, ಪೆಡಲ್‌ ಅಥವಾ ಎಕ್ಸಿಲೇಟರ್‌ ಮೂಲಕ ಚಲಾವಣೆ, ಬ್ರೇಕ್‌ ಲಿಮಿವರ್‌ ಸಂವೇದನೆ, ಬ್ಯಾಟರಿ ಪ್ಯಾಕ್‌, ಹಬ್‌ಮೋಟರ್‌, ಸೋಲಾರ್‌ ಪ್ಯಾನಲ್‌ಗಳು ಇ ಬೈಸಿಕಲ್‌ನಲ್ಲಿರಲಿವೆ. ಡ್ರಮ್‌ ಬ್ರೇಕ್‌, ಸೋಲಾರ್‌ ಚಾರ್ಜಿಂಗ್‌, ಸ್ಮಾರ್ಟ್‌ಲಾಕ್‌, ಎತ್ತರ ಹೊಂದಾಣಿಕೆಯ ಆಸನ, ಟ್ಯೂಬ್ಲೆಸ್‌ ಟಯರ್‌ಗಳು ಸಾಮಾನ್ಯ ಬೈಸಿಕಲ್‌ನಲ್ಲಿರಲಿವೆ ಎಂದು ಜ್ಯೂನಿಯರ್‌ ಎಂಜಿನಿಯರ್‌ ಪ್ರಮೋದ್‌ ವಿವರ ನೀಡಿದರು.

ಡಾಕಿಂಗ್‌ ಸೆಂಟರ್‌: ಬಿಐಇಟಿ ಕಾಲೇಜಿನ ಮುಖ್ಯದ್ವಾರ, ಹಿಂದಿನ ದ್ವಾರ, ನೂತನ್‌ ಕಾಲೇಜು, ವಿದ್ಯಾನಗರ, ಐಟಿಐ ಕಾಲೇಜು, ಡಿಆರ್‌ಆರ್‌ ಪಾಲಿಟೆಕ್ನಿಕ್‌ ಕಾಲೇಜು, ಡಿಆರ್‌ಎಂ ಕಾಲೇಜು, ಕಾಳಿದಾಸ ಸರ್ಕಲ್‌, ಚಿಕ್ಕಮ್ಮಣಿ ಬಡಾವಣೆ, ರೈಲ್ವೆ ನಿಲ್ದಾಣ, ದೃಶ್ಯಕಲಾ ವಿದ್ಯಾಲಯ, ಗುಂಡಿ ಸರ್ಕಲ್‌, ಜಿಎಂಐಟಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಬಿಎಸ್‌ಎನ್‌ಎಲ್‌ ಕಚೇರಿ, ಅಗ್ನಿಶಾಮಕ ಠಾಣೆ ಬಳಿ, ಒಳಾಂಗಣ ಕ್ರೀಡಾಂಗಣ, ರಿಂಗ್ ರಸ್ತೆ ಹೀಗೆ 18 ಕಡೆಗಳಲ್ಲಿ ಡಾಕಿಂಗ್‌ ಸೆಂಟರ್‌ಗಳನ್ನು ಮಾಡಲಾಗಿದೆ. ಹಳೇ ಬಸ್‌ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಬಳಿಯಲ್ಲೂ ಡಾಕಿಂಗ್‌ ಸೆಂಟರ್‌ಗಳೂ ಇರಲಿದ್ದು, ಸದ್ಯ ಕಾಮಗಾರಿ ನಡೆಯುತ್ತಿರುವುದರಿಂದ ಕಾಯ್ದಿರಿಸಲಾಗಿದೆ.

ದರ ವಿವರ

ಸವಾರರು ರಿಜಿಸ್ಟ್ರೇಷನ್‌ ಮಾಡಿಸಿದರೆ ಸಾಮಾನ್ಯ ಬೈಸಿಕಲ್‌ನಲ್ಲಿ ಮೊದಲ 30 ನಿಮಿಷ ಮತ್ತು ಇ ಬೈಸಿಕಲ್‌ನಲ್ಲಿ ಮೊದಲ 15 ನಿಮಿಷ ಉಚಿತವಾಗಿ ಚಲಾವಣೆಗೆ ಅವಕಾಶ ಇರುತ್ತದೆ. ಬಳಿಕ ಬೈಸಿಕಲ್‌ ಮತ್ತು ಇ ಬೈಸಿಕಲ್‌ಗೆ ಕ್ರಮವಾಗಿ 30 ಮತ್ತು 15 ನಿಮಿಷಕ್ಕೆ ₹ 10 ದರ ನೀಡಬೇಕು. ರಿಜಿಸ್ಟ್ರೇಷನ್‌ ಮಾಡಿಸದವರಿಗೆ ಉಚಿತ ಸೌಲಭ್ಯ ಇರುವುದಿಲ್ಲ. ತಿಂಗಳಿಗೆ ₹ 100, ಮೂರು ತಿಂಗಳಿಗೆ ₹ 250, ಆರು ತಿಂಗಳಿಗೆ ₹ 400 ನೀಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT