ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ಸಂಘಟನೆ ಮಹಿಳೆಗಿರುವ ದಾರಿ: ಡಾ. ಶಾಕೀರಾ ಖಾನಂ

ದುಡಿಯುವ ಮಹಿಳಾ ದಿನಾಚರಣೆ, ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಡಾ. ಶಾಕೀರಾ ಖಾನಂ
Last Updated 1 ಏಪ್ರಿಲ್ 2022, 4:18 IST
ಅಕ್ಷರ ಗಾತ್ರ

ದಾವಣಗೆರೆ: ದುಡಿಯುವ ಮಹಿಳೆಯರು ಸಂಘಟಿತರಾಗಬೇಕು. ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು. ಇವಷ್ಟೇ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬಲ್ಲದು ಎಂದು ಬೆಂಗಳೂರಿನ ಅಲ್‌ ಅಮೀನ್‌ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರೊಫೆಸರ್‌ ಡಾ. ಶಾಕೀರಾ ಖಾನಂ ಹೇಳಿದರು.

ಇಲ್ಲಿನ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಗುರುವಾರ ರೋಟರಿ ಕ್ಲಬ್‌ನ ಬಾಲಭವನದಲ್ಲಿ ನಡೆದ ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆ ಮತ್ತು ಮಹಿಳಾ ಬೀಡಿ ಕಾರ್ಮಿಕರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇವತ್ತು ಅನೇಕ ಸಮಸ್ಯೆಗಳನ್ನು ಸೃಷ್ಟಿಸಲಾಗುತ್ತಿದೆ. ತೊಂದರೆ ಕೊಡಲಾಗುತ್ತಿದೆ. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನ ನಮ್ಮ ಮುಂದಿರುವ ಬೆಳಕು. ಸಂವಿಧಾನ ನೀಡಿದ ಶಿಕ್ಷಣ ಹಕ್ಕನ್ನು ಪಡೆದು ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಸಂಘಟಿತರಾಗಿ ಮುನ್ನುಗ್ಗಬೇಕು. ಸಮಸ್ಯೆಗಳನ್ನು ಎದುರಿಸಬೇಕು’ ಎಂದು ತಿಳಿಸಿದರು.

ವಿಶೇಷ ಭೂಸ್ವಾಧೀನ ಅಧಿಕಾರಿ ರೇಷ್ಮಾ ಹಾನಗಲ್‌, ‘ಹೆಣ್ಣು ಮಕ್ಕಳು ಸಂಘಟಿತರಾಗಬೇಕು. ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನನಗೆ ತಂದೆ ನೀಡಿದ ಪ್ರೋತ್ಸಾಹ, ಮದುವೆಯ ಬಳಿಕ ಪತಿ ನೀಡಿದ ಬೆಂಬಲದಿಂದಾಗಿ ಕೆಎಎಸ್‌ ಮಾಡಲು ಸಾಧ್ಯವಾಯಿತು. ನಿಮ್ಮ ಮಕ್ಕಳನ್ನೂ ಶಿಕ್ಷಣದ ಮೂಲಕ ಸಾಧನೆ ಮಾಡಲು ಪ್ರೋತ್ಸಾಹಿಸಿ. ಮಂಡಕ್ಕಿಭಟ್ಟಿಗೆ ಕೆಲಸಕ್ಕೆ ಕಳುಹಿಸುವುದನ್ನು ಬಿಟ್ಟು ಶಾಲೆಗೆ ಕಳುಹಿಸಿ’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ, ‘ತಳ ಸಮುದಾಯಗಳ ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಪಡೆಯುತ್ತಿರುವುದು ಮನುವಾದಿಗಳಿಗೆ ನಡುಕ ಹುಟ್ಟಿಸಿದೆ. ದಲಿತರು, ಶೋಷಿತರು, ಧಾರ್ಮಿಕ ಅಲ್ಪಸಂಖ್ಯಾತರು ಮುಂತಾದ ಸಮುದಾಯಗಳಾದ ನಾವೇ ಈ ನೆಲದ ಮೂಲನಿವಾಸಿಗಳು. ಆರ್ಯರು ವಲಸೆ ಬಂದವರು. ದೇಶ ಬಿಡಿಸುವುದಿದ್ದರೆ ಮೊದಲು ಅವರನ್ನು ಬಿಡಿಸಬೇಕು. ನಾವು ಅಂಬೇಡ್ಕರ್‌ ಅವರ ವಾರಸುದಾರರು. ನಮ್ಮ ರಕ್ಷಣೆಗೆ ಸಂವಿಧಾನ ಇದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ, ‘ದುಡಿಯುವ ಬೀಡಿ ಕಾರ್ಮಿಕರು ತಮ್ಮ ಮಕ್ಕಳನ್ನು ಟಿ.ವಿ. ಮತ್ತು ಮೊಬೈಲ್‌ನಿಂದ ದೂರ ಇಡಬೇಕು. ಶಿಕ್ಷಣ ಕಲಿಸಬೇಕು’ ಎಂದು ತಿಳಿಸಿದರು.

ಭಾರತದ ಪ್ರಥಮ ಶಿಕ್ಷಕಿಯರಾದ ಫಾತೀಮಾ ಶೇಖ್ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ ಆರಂಭವಾದ ಕಲಿಕಾ ಬೋಧನಾ ಕೇಂದ್ರದಲ್ಲಿ ಕಲಿಯುತ್ತಿರುವ ಮಕ್ಕಳು ಬಿಡಿಸಿರುವ ಡಾ. ಬಿ.ಆರ್‌. ಅಂಬೇಡ್ಕರ್‌, ಫಾತಿಮಾ ಶೇಖ್‌, ಸಾವಿತ್ರಿಬಾಯಿ ಫುಲೆ, ಭಗತ್‌ಸಿಂಗ್‌ ಅವರ ಚಿತ್ರಗಳನ್ನು ಅನಾವರಣ ಮಾಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಗೀನಾ ಬಾನು, ರಜಿಯಾ ಬಾನು, ದಿಲ್‌ಷಾದ್‌ ಇದ್ದರು. ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT