ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಶೂನ್ಯಕ್ಕೆ ತರಲು ಶ್ರಮ ಅಗತ್ಯ

ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆಯಲ್ಲಿ ಡಿಎಚ್‌ಒ ಡಾ. ನಾಗರಾಜ
Last Updated 2 ಡಿಸೆಂಬರ್ 2022, 5:13 IST
ಅಕ್ಷರ ಗಾತ್ರ

ದಾವಣಗೆರೆ: ಎಚ್‍ಐವಿ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದೆ. ಇದನ್ನು ಶೂನ್ಯ ಪ್ರಮಾಣಕ್ಕೆ ತರುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮ ಹಾಕುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ ತಿಳಿಸಿದರು.

ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ನಿಯಂತ್ರಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಲ್ಲಿ ತಿಳಿವಳಿಕೆ ಇಲ್ಲದ ಕಾರಣ ಎಚ್‍ಐವಿ ಸೋಂಕಿತರನ್ನು ಕೀಳಾಗಿ ಕಾಣಲಾಗುತ್ತಿತ್ತು. ಈ ಬಗ್ಗೆ 2007ರಲ್ಲಿ ಕಾನೂನು ಕೂಡ ಜಾರಿಯಾಗಿದ್ದು, ಎಚ್‍ಐವಿ ಸೋಂಕಿತರಿಗೆ ತಾರತಮ್ಯ ಮಾಡುವುದು, ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ ₹ 1 ಲಕ್ಷದವರೆಗೆ ದಂಡ, 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.

ಕೊಂಚ ಆರೋಗ್ಯ ಸುಧಾರಿಸುತ್ತಿದ್ದಂತೆ ಸೋಂಕಿತರು ಔಷಧೋಪಚಾರ ಕೈಬಿಡಬಾರದು. ಬದಲಿ ಚಿಕಿತ್ಸೆ ಜೊತೆಗೆ ಔಷಧೋಪಚಾರ ಮುಂದುವರಿಸಬೇಕು. ಸೋಂಕನ್ನು ಗುಣಪಡಿಸುವುದಾಗಿ ನಂಬಿಸುವ ನಕಲಿ ವೈದ್ಯರು, ಮಧ್ಯವರ್ತಿಗಳ ಬಗ್ಗೆ
ಎಚ್ಚರದಿಂದ ಇರಬೇಕು ಎಂದು ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಎಸ್. ಷಣ್ಮುಖಪ್ಪ ಎಚ್ಚರಿಕೆ ನೀಡಿದರು.

‘2005ರಲ್ಲಿ ನನಗೆ ಪಾಸಿಟಿವ್ ಬಂದಿದ್ದು, ಧೈರ್ಯ ಕಳೆದುಕೊಳ್ಳದೇ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದೇನೆ. ಪಾಸಿಟಿವ್
ಬಂದಾಕ್ಷಣ ಧೈರ್ಯ ಕಳೆದುಕೊಳ್ಳಬಾರದು. ಜೀವನದಲ್ಲಿ ಗುರಿ, ಆತ್ಮವಿಶ್ವಾಸ ಇದ್ದರೆ ಯಾವ ಕಾಯಿಲೆಯೂ ಏನೂ ಮಾಡಲು ಸಾಧ್ಯವಿಲ್ಲ. ಸೋಂಕಿತರ ಸ್ಥಿತಿ ಸುಧಾರಣೆಗೆ ಇನ್ನಷ್ಟು ಕೆಲಸಗಳಾಗಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜಾಗೃತಿ ಮೂಡಿಸಬೇಕು’ ಎಂದು ಸೋಂಕಿತರ ಪರವಾಗಿ ಲಿಂಗನಗೌಡ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ವಿಶ್ವ ಏಡ್ಸ್ ನಿಯಂತ್ರಣ ದಿನದ ಪ್ರಯುಕ್ತ ಏರ್ಪಡಿಸಿದ್ದ ರಸಪ್ರಶ್ನೆ ವಿಜೇತರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಎಚ್‍ಐವಿ/ ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಸಿಬ್ಬಂದಿ ಹಾಗೂ ಸಂಸ್ಥೆಗಳಿಗೆ ಗೌರವ ಅರ್ಪಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ಎಸ್.ಪಿ. ಮಧು, ಚಿಗಟೇರಿ ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ಮಂಜುನಾಥ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ ಪಿ., ಡಾ. ನಟರಾಜ, ಡಾ. ಶುಭಾ, ಡಾ. ಮುರಳೀಧರ, ಡಾ.ರೇಣುಕಾರಾಧ್ಯ ಇದ್ದರು. ಎ.ಪಿ.ಜಗದೀಶ ಪ್ರಾರ್ಥಿಸಿದರು. ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಕೆ.ಎಚ್. ಗಂಗಾಧರ ಸ್ವಾಗತಿಸಿದರು. ವೈ.ಬಿ. ಮಹದೇವ ಕಾರ್ಯಕ್ರಮ ನಿರೂಪಿಸಿದರು. ಎಚ್.ತಿಪ್ಪೇಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT