ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಕ್ಷಣೆಗೆ ‘ಕಾವಲುಗಾರ’ನ ಆಯ್ಕೆ ಮಾಡಿ

‘ಮೈ ಭಿ ಚೌಕೀದಾರ್‌’ ಸಂವಾದದಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ಆಯನೂರು ಮಂಜುನಾಥ
Last Updated 1 ಏಪ್ರಿಲ್ 2019, 11:28 IST
ಅಕ್ಷರ ಗಾತ್ರ

ದಾವಣಗೆರೆ: ‘ಇದು ಬರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆಯಲ್ಲ; ದೇಶದ ರಕ್ಷಣೆಗಾಗಿ ಪ್ರಾಮಾಣಿಕ ಚೌಕೀದಾರ್‌ನನ್ನು ಆಯ್ಕೆ ಮಾಡುವ ಚುನಾವಣೆಯಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಆಯನೂರು ಮಂಜುನಾಥ ಹೇಳಿದರು.

ನಗರದ ಬಿಜೆಪಿ ಚುನಾವಣಾ ಕಚೇರಿ ‍ಪಕ್ಕದ ಹಳೆ ವಾಣಿ ಹೊಂಡಾ ಷೋರೂಂ ಮೈದಾನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ‘ಮೈ ಭಿ ಚೌಕೀದಾರ್‌’ ವಿಡಿಯೊ ಸಂವಾದದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದು ಟೀಕಿಸಿದ್ದರು. ಚಹಾ ಮಾರುವವನಿಂದ ದೇಶ ಆಳಲು ಸಾಧ್ಯವೇ ಎಂಟು ಟೀಕಿಸಿದವರ ಮುಖದ ಮೇಲೆ ಬಿಸಿ ಚಹಾ ಬಿದ್ದಿದೆ. ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಮೋದಿ ತಮ್ಮನ್ನು ದೇಶದ ಹೆಮ್ಮೆಯ ಕಾವಲುಗಾರ ಎಂದು ಕರೆದುಕೊಂಡರೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾವಲುಗಾರ ಕಳ್ಳ ಎಂದು ನಿಕೃಷ್ಟವಾಗಿ ಟೀಕಿಸಿದರು. ಆದರೆ, ಮೋದಿ ಅವರು ರೋಗ ಬರದಂತೆ ತಡೆಯುವ ವೈದ್ಯ, ಕಳ್ಳ ಬಾರರುದಂತೆ ಮಾಡುವ ಪೊಲೀಸ್‌ ಸೇರಿ ಸಮಾಜಕ್ಕಾಗಿ ದುಡಿಯುವ ಪ್ರತಿಯೊಬ್ಬನೂ ಕಾವಲುಗಾರ ಎಂದರು. ಹೀಗಾಗಿಯೇ ಇಂದು ನಾನೂ ಕಾವಲುಗಾರ ಆಂದೋಲನ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡಿದೆ’ ಎಂದು ಹೇಳಿದರು.

‘ಇಂದು ಭಾರತ ಮಾತೆಯ ರಕ್ಷಣೆಗಾಗಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ದೇಶಕ್ಕಾಗಿ ಯೋಗ್ಯ ಕಾವಲುಗಾರನನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತಕ್ಕೆ ಪ್ರಪಂಚದಲ್ಲಿ ಗೌರವ ಸಿಗುತ್ತಿದೆ. ಅವರು ಪ್ರಪಂಚವನ್ನು ಭಾರತದ ಎದುರು ಬಗ್ಗಿಸುವ ಶಕ್ತಿ ಇರುವ ನಾಯಕರಾಗಿದ್ದಾರೆ’ ಎಂದು ಬಣ್ಣಿಸಿದರು.

ಚಿಕ್ಕನಾಯಕನಹಳ್ಳಿ ಶಾಸಕ ಮಧುಸ್ವಾಮಿ, ‘ಮೋದಿಗೆ ಈ ಹುದ್ದೆ ಅನಿವಾರ್ಯವಲ್ಲ; ಆದರೆ, ದೇಶಕ್ಕೆ ಮೋದಿ ಅಗತ್ಯವಾಗಿದೆ. ರಕ್ಷಣೆ, ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕು. ಇಂದು ನಮ್ಮ ಸ್ವಾಭಿಮಾನ, ಪ್ರತಿಷ್ಠೆಯನ್ನು ಬೆಳೆಸುವಂತಹ ನಾಯಕತ್ವ ದೇಶಕ್ಕೆ ಬೇಕಾಗಿದೆ. ಅಂಥ ನಾಯಕತ್ವ ಗುಣ ಮೋದಿ ಅವರಲ್ಲಿದೆ. ನಮ್ಮ ಬಳಿ ಅವರು ಇದ್ದಾಗಲೇ ಅವರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ಪಣ ತೊಡಗಬೇಕು’ ಎಂದು ಕರೆ ನೀಡಿದರು.

ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ, ‘ಮೋದಿ ತಮ್ಮ ಪರಿವಾರಕ್ಕೆ ಅಧಿಕಾರ ನೀಡದರೆ, ದೇಶದ 130 ಕೋಟಿ ಜನರ ಹಿತ ಕಾಪಾಡುತ್ತಿದ್ದಾರೆ. ಈ ಚೌಕೀದಾರನ ಗೆಲುವಿಗೆ ಏಪ್ರಿಲ್‌ 23ರಂದು ನಡೆಯುವ ಚುನಾವಣೆಯಲ್ಲಿ ನನಗೆ ಮತ ಹಾಕಿ. ಚುನಾವಣೆಗೆ 22 ದಿನಗಳು ಮಾತ್ರ ಉಳಿದಿದ್ದು, ಪ್ರತಿಯೊಬ್ಬರೂ ಕನಿಷ್ಠ 2 ಗಂಟೆ ದೇಶಕ್ಕಾಗಿ, ಬಿಜೆಪಿಗಾಗಿ ಕೆಲಸ ಮಾಡಬೇಕು. ಮೋದಿ ಜಾರಿಗೆ ತಂದ ಯೋಜನೆಗಳು, ಸಂಸದನಾಗಿ ನಾನು ಮಾಡಿದ ಕೆಲಸ, ಶಾಸಕರ ಕೆಲಸಗಳನ್ನು ಜನರಿಗೆ ತಲುಪಿಸಿ’ ಎಂದು ಮನವಿ ಮಾಡಿದರು.

‘ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಸುತ್ತೇನೆ. ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು ಸೇರಿ ಪಕ್ಷದ ಹಲವು ಶಾಸಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಗರದೇವತೆ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು’ ಎಂದು ಸಿದ್ದೇಶ್ವರ ಹೇಳಿದರು.

ಶಾಸಕರಾದ ಎಸ್‌.ಎ. ರವೀಂದ್ರನಾಥ, ಮಾಡಾಳ್‌ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ಪ್ರೊ. ಎನ್‌. ಲಿಂಗಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಬಿ.ಪಿ. ಹರೀಶ್‌ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

‘ ಕತ್ತೆ, ಕೋಣ ಸೇರಿ ಸರ್ಕಾರ ರಚಿಸಿದರೆ ಏನಾದೀತು...!’

‘ಎತ್ತು ಏರಿಗೆ ಎಳೆದುಕೊಂಡು ಹೋಗುತ್ತದೆ. ಆದರೆ, ಎತ್ತಿನ ಜೊತೆಗೆ ಕತ್ತೆ ಸೇರಿದಾಗ ಎತ್ತು ಏರಿಗೆ ಎಳೆದರೆ, ಕತ್ತೆ ನಿಂತುಕೊಂಡಿರುತ್ತದೆ. ಆಗ ಗಾಡಿ ಮುಂದೆ ಹೋಗುವುದಿಲ್ಲ. ಎತ್ತು, ಕತ್ತೆ, ಕೋಣ ಎಲ್ಲವೂ ಸೇರಿ ಸರ್ಕಾರ ರಚಿಸಲು ಮುಂದಾದರೆ ದೇಶದ ಸ್ಥಿತಿ ಏನಾಗಬೇಡ’ ಎಂದು ಮಾಧುಸ್ವಾಮಿ ಅವರು ವಿರೋಧ ಪಕ್ಷಗಳ ಮಹಾ ಘಟಬಂಧನವನ್ನು ಟೀಕಿಸಿದರು.

‘ಬಲಶಾಲಿಯಾಗಿರುವ ಎತ್ತಿಗೆ ನೀವು ಬೆಂಬಲ ನೀಡಬೇಕು. ದೇಶದ ಸಲುವಾಗಿ ಮೋದಿ ಅವರ ಕಷ್ಟಕಾಲದಲ್ಲಿ ನಾವೆಲ್ಲ ಅವರ ಗೆಲುವಿಗೆ ಶ್ರಮಿಸಬೇಕು. ಅವರ ಗೌರವ ಹೆಚ್ಚಾದರೆ ದೇಶದ ಗೌರವವೂ ಹೆಚ್ಚಾಗುತ್ತದೆ. ಮೋದಿಗೆ ಹಿನ್ನಡೆಯಾದರೆ ಅದು ರಾಷ್ಟ್ರಕ್ಕೆ ಆಗುವ ಅವಮಾನ’ ಎಂದು ಪ್ರತಿಪಾದಿಸಿದರು.

ಆನಂದಪ್ಪ ಮರಳಿ ಬಿಜೆಪಿಗೆ

ಭೋವಿ ಸಮಾಜದ ಮುಖಂಡ ಆನಂದಪ್ಪ ಅವರು ಭಾನುವಾರ ‘ಮೈ ಭಿ ಚೌಕೀದಾರ್‌’ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರು ಸೇರ್ಪಡೆಗೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ನೀಡಲಿಲ್ಲ ಎಂದು ಬೇಸರಗೊಂಡು ಪಕ್ಷದಲ್ಲಿ ಬಂಡಾಯ ಎದ್ದಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಯಾವುದೇ ಅವರು ಚುನಾವಣೆಯಲ್ಲಿ ಯಶಸ್ಸು ಕಂಡಿರಲಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆನಂದಪ್ಪ ಅವರು ಜಿ.ಎಂ. ಸಿದ್ದೇಶ್ವರ ಸಮ್ಮುಖದಲ್ಲಿ ಮತ್ತೆ ‘ಕಮಲ’ವನ್ನು ಹಿಡಿದರು.

ಇತ್ತೀಚೆಗಷ್ಟೆ ಮಾಜಿ ಶಾಸಕ ಬಸವರಾಜ ನಾಯ್ಕ ಅವರೂ ಬಿಜೆಪಿಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT