ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ

Last Updated 24 ಡಿಸೆಂಬರ್ 2018, 16:04 IST
ಅಕ್ಷರ ಗಾತ್ರ

ಚನ್ನಗಿರಿ: ಎಂಟು ತಿಂಗಳಿಂದ ತಾಲ್ಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ಕುಕ್ಕುವಾಡೇಶ್ವರಿ ರಕ್ಷಿತಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಹಾಗೂ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಸೋಮವಾರದಿಂದ ಗಂಡಗನಹಂಕಲು ಗ್ರಾಮದಿಂದ ಆರಂಭಗೊಂಡಿದೆ. ಕಾರ್ಯಾಚರಣೆ ಆರಂಭಗೊಂಡಿದ್ದರಿಂದ ಈ ಭಾಗದ ಗ್ರಾಮಗಳ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಾಡಾನೆಯನ್ನು ಸೆರೆ ಹಿಡಿಯಲು ಭಾನುವಾರ ನಾಗರಹೊಳೆ ಹಾಗೂ ಮತ್ತಿಗೋಡು ಕ್ಯಾಂಪ್‌ಗಳಿಂದ ಸಾಕಿದ ಆನೆಗಳಾದ ಅಭಿಮನ್ಯು, ಕೃಷ್ಣ, ಧನಂಜಯ, ಹರ್ಷ ಹಾಗೂ ಅಜೇಯ ಗಂಡಗನಹಂಕಲು ಗ್ರಾಮದ ಬಳಿ ಬೀಡು ಬಿಟ್ಟಿದ್ದವು.

ಈ ಸಾಕಿದ ಆನೆಗಳ ಜತೆಗೆ ಶಾರ್ಪ್ ಶೂಟರ್ ಅಕ್ರಂ, ವೆಂಕಟೇಶ್, ಅರವಳಿಕೆ ಚುಚ್ಚುಮದ್ದು ತಜ್ಞ ಡಾ. ಮುಜೀಬ್ ಸೇರಿ 30 ಮಾವುತರು ಹಾಗೂ ಕಾವಾಡಿಗರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಶಿವಮೊಗ್ಗ ಡಿಎಫ್ಒ ಚೆಲುವರಾಜ್ ನೇತೃತ್ವದಲ್ಲಿ ಸಿಸಿಎಫ್ ಬಾಲಚಂದ್ರ, ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಒ. ದಿನೇಶ್, ಅಜ್ಜಂಪುರ ಆರ್‌ಎಫ್ಒ ಮಂಜುನಾಥ್ ಸೇರಿ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಉಬ್ರಾಣಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು ಈಗ 8 ಕಾಡಾನೆಗಳು ಇರುವ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಕಾಡಾನೆಗಳ ಹಿಂಡಿನಲ್ಲಿರುವ ಒಂದು ಕಾಡಾನೆ ತಾಲ್ಲೂಕಿನ ಉಬ್ರಾಣಿ, ಜೋಳದಹಾಳ್, ಅಮ್ಮನಗುಡ್ಡ, ಕಗ್ಗಿ, ಗಿರಿಯಾಪುರ ಮುಂತಾದ ಗ್ರಾಮಗಳಿಗೆ ನುಗ್ಗಿ ನೂರಾರು ಅಡಿಕೆ ಮರ, ಬಾಳೆ ಗಿಡ ಹಾಗೂ ಮೆಕ್ಕೆಜೋಳ ಬೆಳೆಯನ್ನು ನಾಶ ಮಾಡಿತ್ತು. ಈ ಒಂದು ಪುಂಡಾನೆಯ ಸೆರೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಪಳಗಿದ ಸಾಕಾನೆಗಳ ತಂಡ ದಸರಾ ಹಬ್ಬ ಹಾಗೂ ಇತರೆ ಕಾರ್ಯಾಚರಣೆ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಕಾರ್ಯಾಚರಣೆ ತಡವಾಯಿತು. ಈಗ ಕಾಲಕೂಡಿ ಬಂದಿದ್ದು, ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಈ ಅರಣ್ಯ ಪ್ರದೇಶ ವ್ಯಾಪ್ತಿಯ ರಂಗಯ್ಯನಗಿರಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಇರುವುದು ಕಂಡು ಬಂದಿದೆ. ಶೀಘ್ರದಲ್ಲಿ ಆನೆಗಳನ್ನು ಸೆರೆ ಹಿಡಿಯಲಾಗುವುದು ಎಂದು ಡಿಎಫ್ಒ ಚೆಲುವರಾಜ್ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಎಸ್.ಒ. ದಿನೇಶ್, ‘ಕಾರ್ಯಾಚರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ರಂಗಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವುದು ತಿಳಿದು ಬಂದಿದ್ದು, ಕಾರ್ಯಾಚರಣೆ ಮುಕ್ತಾಯವಾಗುವವರೆಗೆ ಈ ಭಾಗದ ಗ್ರಾಮಗಳ ಜನರು, ದನಗಾಹಿಗಳು ಕಾಡಿನೊಳಗೆ ಹೋಗಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT