ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: 11 ಕಿ.ಮೀ ಉದ್ದದ ಆನೆ ಕಂದಕ ನಿರ್ಮಾಣ ಆರಂಭ

ಉಬ್ರಾಣಿ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಪ್ಪಿಸಲು ಕ್ರಮ
Last Updated 7 ಮೇ 2022, 5:13 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹಾಗೂ ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ಕಾಡಾನೆಗಳು ನುಗ್ಗದಂತೆ ತಡೆಯಲು ಅರಣ್ಯ ಇಲಾಖೆ ಈ ಮೊದಲು 37 ಕಿ.ಮೀ ಉದ್ದದ ಆನೆ ಕಂದಕ ನಿರ್ಮಾಣ ಮಾಡಿದೆ. ಈಗ ₹ 6.82 ಕೋಟಿ ವೆಚ್ಚದಲ್ಲಿ ಮತ್ತೆ 11 ಕಿ.ಮೀ ಆನೆ ಕಂದಕ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಉಬ್ರಾಣಿ ಹೋಬಳಿಯ ಕುಕ್ಕುವಾಡೇಶ್ವರಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನಲ್ಲಿರುವ ಕೆಲ ಗ್ರಾಮಗಳಿಗೆ ಕಾಡಾನೆಗಳು ನುಗ್ಗದಂತೆ ತಡೆಯುವುದಕ್ಕಾಗಿ 10 ಅಡಿ ಅಗಲ, 10 ಅಡಿ ಆಳದ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಈ ಕಂದಕ ದಾಟಲು ಆನೆಗಳಿಂದ ಸಾಧ್ಯವಾಗದು ಎಂಬ ಲೆಕ್ಕಾಚಾರದಲ್ಲಿ ಕಾರ್ಯ ಯೋಜನೆಯನ್ನು ಇಲಾಖೆ ಕಾರ್ಯಗತಗೊಳಿಸಿದೆ.

ತಾಲ್ಲೂಕಿನ ಉಬ್ರಾಣಿ ಭಾಗದಿಂದ 37 ಕಿ.ಮೀ. ಹೊರತಾಗಿ ಪ್ರಸಕ್ತ ಸಾಲಿನಲ್ಲಿ ಮಾವಿನಹೊಳೆ-ಹನುಮಲಾಪುರ ಗ್ರಾಮದವರೆಗೆ 11 ಕಿ.ಮೀ ಉದ್ದದ ಕಂದಕ ನಿರ್ಮಾಣಕ್ಕೆ ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಆಸಕ್ತಿ ತೋರಿದ್ದಾರೆ. ಕಾಡಂಚಿನ ಗ್ರಾಮಗಳ ರೈತರ ಹಿತ ಕಾಪಾಡುವುದಕ್ಕಾಗಿ ಅರಣ್ಯ ಸಚಿವ ಆನಂದ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿ, ಸರ್ಕಾರದಿಂದ ಮಂಜೂರಾತಿ ಪಡೆದುಕೊಳ್ಳಲು ಸಹ ಯಶಸ್ವಿಯಾಗಿದ್ದಾರೆ.

ಕಾಡಾನೆಗಳ ದಾಳಿಗೆ ಇಬ್ಬರ ಬಲಿ: ಚಾಮರಾಜನಗರದಿಂದ ಚನ್ನಗಿರಿಯವರೆಗೆ ಆನೆ ಕಾರಿಡಾರ್ ಇರುವುದರಿಂದ ಪದೇ ಪದೇ ಕಾಡಾನೆಗಳು ಆನೆ ಕಾರಿಡಾರ್ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಹೀಗೆ ಬಂದಾಗ ಕಾಡಂಚಿನಲ್ಲಿರುವ ಗ್ರಾಮಗಳ ರೈತರ ತೋಟ ಹಾಗೂ ಜಮೀನುಗಳಿಗೆ ಆಹಾರ ಅರಸಿ ಬಂದು ಬೆಳೆ ಹಾನಿ ಮಾಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. 2015ನೇ ಸಾಲಿನಲ್ಲಿ ಸಾವಿತ್ರಮ್ಮ (43) ಹಾಗೂ 2018ರಲ್ಲಿ ಎರೇಹಳ್ಳಿ ಗ್ರಾಮದ ಗಾದ್ರಿಯಪ್ಪ (52) ಕಾಡಾನೆ ದಾಳಿಗೆ ತುತ್ತಾಗಿದ್ದರು.

ಕಾಡಾನೆ ಜಾಡು ಹಿಡಿದ ತಂಡ: 2011ನೇ ಸಾಲಿನಲ್ಲಿ ಉಬ್ರಾಣಿ ಹೋಬಳಿಯ ಹಲವು ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದವು. ಆಗ ಈ ಭಾಗದ ಜನರು ಚನ್ನಗಿರಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಪಡಿಸಿದ್ದರು. ಆಗ ಅರಣ್ಯ ಇಲಾಖೆಯವರು ಕಾಡಾನೆಗಳ ಜಾಡು ಹಿಡಿಯಲು ಮುಂದಾಗಿ ಕಾಡಾನೆ ಇರುವುದನ್ನು ಖಚಿತಪಡಿಸಿಕೊಂಡರು. ನಂತರ ರಾತ್ರಿ ವೇಳೆ ಈ ಭಾಗದ ಗ್ರಾಮಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದರು.

ಇಂದಿಗೂ ಕೂಡ ತಾಲ್ಲೂಕಿನ ನೆಲ್ಲಿಹಂಕಲು, ಕಗ್ಗಿ, ಹನುಮಲಾಪುರ, ಶಂಕರಿಪುರ, ಮುಗಳಿಹಳ್ಳಿ, ಎರೇಹಳ್ಳಿ, ಮಾವಿನಹೊಳೆ, ಗಂಡಗನಹಂಕಲು, ಗಾಂಧಿ ನಗರ, ಮಲ್ಲಿಗೆರೆ, ಜೋಳದಹಾಳ್, ಹರೋನಹಳ್ಳಿ, ಚಿಕ್ಕಸಂಧಿ, ಚಿಕ್ಕಮಳಲಿ, ಗೌಳಿಗರ ಕ್ಯಾಂಪ್ ಮುಂತಾದ ಗ್ರಾಮಗಳ ಜನರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಏಕೆಂದರೆ ಯಾವಾಗ ಕಾಡಾನೆಗಳು ಗ್ರಾಮದೊಳಗೆ ನುಗ್ಗಿ ಬೆಳೆ ಹಾನಿ ಮಾಡುತ್ತವೆಯೋ ಎಂಬ ಭಯ ಜನರಲ್ಲಿ ಮನೆ ಮಾಡಿದೆ. 2011ರಿಂದ 2022ನೇ ಸಾಲಿನವರೆಗೆ ₹ 37.54 ಲಕ್ಷ ಬೆಳೆ ಪರಿಹಾರವನ್ನು ಅರಣ್ಯ ಇಲಾಖೆಯಿಂದ ರೈತರಿಗೆ ನೀಡಲಾಗಿದೆ.

‘2011ರಿಂದ ಇಲ್ಲಿಯವರೆಗೆ ಉಬ್ರಾಣಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಂಡುಬಂದ ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದು ಸಕ್ರೇಬೈಲ್ ಆನೆ ಬಿಡಾರಕ್ಕೆ ಬಿಟ್ಟು ಬಂದಿದ್ದರು. ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಕೆಎಸ್ ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಸರ್ಕಾರ ಹಾಗೂ ಅರಣ್ಯ ಸಚಿವರ ಮೇಲೆ ಒತ್ತಡ ಹಾಕಿ ಅನುಮತಿಯನ್ನು ಕೊಡಿಸಿದ್ದರು. ಮತ್ತೆ ಈಗ ಮಾವಿನಹೊಳೆಯಿಂದ ಹನುಮಲಾಪುರ ಗ್ರಾಮದವರೆಗೆ 11 ಕಿ.ಮೀ ಆನೆ ಕಂದಕ ನಿರ್ಮಾಣ ಕಾಮಗಾರಿಗೆ ₹ 6.82 ಕೋಟಿ ಅನುದಾನ ಬಿಡುಗಡೆ ಮಾಡಿಸಿರುವುದು ಸ್ವಾಗತಾರ್ಹ. ಹಾಗೆಯೇ ಆನೆ ಕಂದಕ ನಿರ್ಮಾಣವಾದ ಮೇಲೆ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ’ ಎಂದು ನೆಲ್ಲಿಹಂಕಲು ಗ್ರಾಮದ ದೇವರಾಜ್ ಹೇಳಿದರು.

..................

ಇನ್ನೂ ನಾಲ್ಕು ಕಾಡಾನೆಗಳು ಇವೆ

ಕಂದಕ ನಿರ್ಮಾಣವಾದರೆ ಕಾಡಾನೆಗಳು ಗ್ರಾಮದೊಳಗೆ ಬಾರದಂತೆ ತಡೆಗಟ್ಟಬಹುದು. ಉಬ್ರಾಣಿ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಿನಲ್ಲಿ ಇನ್ನೂ ನಾಲ್ಕು ಕಾಡಾನೆಗಳು ಇರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಆದರೆ ಇದುವರೆಗೂ ಯಾವುದೇ ಗ್ರಾಮದೊಳಗೆ ನುಗ್ಗಿ ಬಂದಿಲ್ಲ. ಕಲ್ಲು ಬಂಡೆ ಬಂದಿರುವ ಕಡೆಗಳಲ್ಲಿ ಆನೆ ಕಂದಕ ನಿರ್ಮಾಣ ಮಾಡಿಲ್ಲ. ಇಲ್ಲಿ ಬಂಡೆಗಳನ್ನು ಸಿಡಿಸಲು ಸರ್ಕಾರದ ಅನುಮತಿ ಬೇಕಾಗುತ್ತದೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ

– ಸತೀಶ್, ಚನ್ನಗಿರಿ ವಲಯ ಅರಣ್ಯಾಧಿಕಾರಿ

................

ಈ ಭಾಗದ ರೈತರಿಗೆ ಕಾಡಾನೆಗಳಿಂದ ತೊಂದರೆಯಾಗದಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆನೆ ಕಂದಕ ನಿರ್ಮಾಣದಿಂದ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ

– ಮಾಡಾಳ್ ವಿರೂಪಾಕ್ಷಪ್ಪ, ಕೆಎಸ್‌ಡಿಎಲ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT