ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಗುಡುತ್ತಿದೆ ಪುಷ್ಪ ಹರಾಜು ಕೇಂದ್ರ

₹ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 18 ಜೂನ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಹೂವಿನ ಮಾರಾಟಗಾರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ನಿರ್ಮಿಸಿರುವ ಪುಷ್ಪ ಹರಾಜು ಕೇಂದ್ರ ವ್ಯಾಪಾರಿಗಳಿಲ್ಲದೆ ಬಣಗುಟ್ಟುತ್ತಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 5 ವರ್ಷಗಳ ಹಿಂದೆ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಕೇಂದ್ರದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿದ್ದರೂ ನಗರದ ಕೇಂದ್ರ ಭಾಗದಿಂದ ದೂರ ಎಂಬ ಕಾರಣಕ್ಕೆ ವ್ಯಾಪಾರಿಗಳು ಬರುತ್ತಿಲ್ಲ.

‘ಈ ಕಟ್ಟಡದಲ್ಲಿ 16 ಮಳಿಗೆಗಳು, 7 ಕಚೇರಿ ಕೊಠಡಿಗಳು, ಒಂದು ಕ್ಯಾಂಟೀನ್‌ ಹಾಗೂ ವಿಶ್ರಾಂತಿ ಕೊಠಡಿಗಳು ಲಭ್ಯವಿದೆ. ಈ ಕೇಂದ್ರದಲ್ಲಿ ವಿದ್ಯುತ್ ಸರಬರಾಜು, ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು, ವಾಹನ ನಿಲುಗಡೆ, ಸಿಸಿ ರಸ್ತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ವ್ಯಾಪಾರಿಗಳು ಬರುತ್ತಿಲ್ಲ’ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ.

‘ಹೂವಿನ ಮಾರಾಟಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ತುಮಕೂರು, ದಾವಣಗೆರೆ ಹಾಗೂ ಉಡುಪಿಯಲ್ಲಿ ಪುಷ್ಪ ಹರಾಜು ಕೇಂದ್ರ ಆರಂಭಿಸಲಾಯಿತು. ಹೂವು ಮಾರಾಟ ಮಾಡಲು ಎಪಿಎಂಸಿಗೂ ಅವಕಾಶ ನೀಡಿದ್ದರಿಂದ ದಾವಣಗೆರೆಯಲ್ಲಿ 26 ಮಳಿಗೆಗೆ ಅವಕಾಶ ಮಾಡಿಕೊಡಲಾಯಿತು. ಬಸ್‌ ನಿಲ್ದಾಣಕ್ಕೆ ಹತ್ತಿರವಾಗಿರುವುದರಿಂದ ವ್ಯಾಪಾರಿಗಳು ಅಲ್ಲಿಯೇ ವ್ಯಾಪಾರ ಮಾಡಲು ಆರಂಭಿಸಿದರು. ಹಳೆ ಬಸ್‌ ನಿಲ್ದಾಣದ ಬಳಿ 15ರಿಂದ 20 ಮಂದಿ ಹೂವು ಮಾರುತ್ತಿದ್ದರು. ಮಳಿಗೆಗಳು ಕಡಿಮೆ ಇದ್ದುದರಿಂದ ಇಬ್ಬರಿಗೂ ಲಾಟರಿ ಮೂಲಕ ಆಯ್ಕೆ ಮಾಡಿ ಅವಕಾಶ ನೀಡಿದೆವು. ಆದರೆ, ಎಪಿಎಂಸಿಯವರು ಇಲ್ಲಿಗೆ ಬರಲು ಆಸಕ್ತಿ ತೋರಲಿಲ್ಲ’ ಎಂದು ಹೇಳಿದರು.

‘ಮಾರುಕಟ್ಟೆ ಆರಂಭವಾದಾಗ 5 ತಿಂಗಳು ವ್ಯಾಪಾರ ಚೆನ್ನಾಗಿಯೇ ನಡೆಯಿತು. ನಂತರ ಎಲ್ಲರೂ ಖಾಲಿ ಮಾಡಿದರು. ದಲ್ಲಾಳಿಗಳಲ್ಲಿ ಎರಡು ಗುಂಪುಗಳಾಗಿದ್ದು, ಕೆಲವರು ಇಲ್ಲಿಗೆ ಬರುತ್ತಿಲ್ಲ. ದಲ್ಲಾಳಿಗಳು ಹೂವುಗಳನ್ನು ಬಸ್‌ಗೆ ಹಾಕಿ ಕಳುಹಿಸುತ್ತಾರೆ. ಎಪಿಎಂಸಿ ಬಸ್‌ ನಿಲ್ದಾಣದ ಬಳಿ ಇರುವುದರಿಂದ ಅಲ್ಲಿಯೇ ವ್ಯಾಪಾರಿಗಳು ತೆಗೆದುಕೊಳ್ಳುತ್ತಾರೆ’ ಎಂದರು.

‘ಹಳೆಯ ಬಸ್‌ ನಿಲ್ದಾಣದ ವ್ಯಾಪಾರಿಗಳು ಇಲ್ಲಿಗೆ ಬರಲು ಆಸಕ್ತಿ ತೋರುತ್ತಾರೆ. ಆದರೆ, ಎಪಿಎಂಸಿಯವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಪುಷ್ಪ ಹರಾಜು ಕೇಂದ್ರಕ್ಕೆ ಬಂದರೆ ವಾಹನ ಸೌಲಭ್ಯ ಕಲ್ಪಿಸುತ್ತೇವೆ. ಇಲ್ಲಿ ಒಳ್ಳೆಯ ವ್ಯಾಪಾರವಾಗುತ್ತದೆ’ ಎನ್ನುತ್ತಾರೆ ಜಯಸಿಂಹ.

‘12 ಮಂದಿ ವ್ಯಾಪಾರಿಗಳಿಗೆ ಎಪಿಎಂಸಿಯಿಂದ ಜಾಗ ನೀಡಿದ್ದರಿಂದ ಹರಾಜು ಕೇಂದ್ರಕ್ಕೆ ಬರಲು ಆಸಕ್ತಿ ತೋರುತ್ತಿಲ್ಲ. ಕೆಲವರಿಗೆ ಆಸಕ್ತಿ ಇದೆ. ಆದರೆ, 5 ವ್ಯಾಪಾರಿಗಳು ತೊಂದರೆಯಾಗುತ್ತದೆ ಎಂದು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಮಲ್ಲಪ್ಪ.

‘ಪುಷ್ಪ ಹರಾಜು ಮಾರುಕಟ್ಟೆ ವ್ಯಾಪಾರಿಗಳಿಗೆ ಒಳ್ಳೆಯ ಜಾಗ. ಎಲ್ಲರೂ ಇಲ್ಲಿಗೆ ಬಂದು ವ್ಯಾಪಾರ ಮಾಡಿ ಎಂದು ಹೇಳಿದ್ದೇವೆ. ವ್ಯಾಪಾರಿಗಳ ಮನವೊಲಿಸಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ಎಪಿಎಂಸಿ ಪ್ರಭಾರ ಸಹಾಯಕ ನಿರ್ದೇಶಕ ಪ್ರಭು.

‘ಎಪಿಎಂಸಿಯಲ್ಲಿ ಶುಚಿತ್ವ ಇಲ್ಲ. ಶೆಲ್ಟರ್‌ ಇಲ್ಲ. ಆದರೂ ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಪುಷ್ಪ ಹರಾಜು ಮಾರುಕಟ್ಟೆಯಲ್ಲಿ ಎಲ್ಲಾ ಸೌಲಭ್ಯಗಳು ಇವೆ. ನಾನೂ ಐದು ತಿಂಗಳು ವ್ಯಾಪಾರ ನಡೆಸಿದೆ. ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಆದರೆ, ದೂರ ಆಗಿರುವುದರಿಂದ ವ್ಯಾಪಾರಿಗಳು ಬರಲು ಹಿಂದೇಟು ಹಾಕಿದರು’ ಎನ್ನುತ್ತಾರೆ ಹಳೇ ಬಸ್ ನಿಲ್ದಾಣದ ಬಳಿ ವ್ಯಾಪಾರ ನಡೆಸುತ್ತಿರುವ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT