ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನವೇ ಕೋಳಿ ಮಾಂಸ ಖಾಲಿ

ಕೋಳಿ, ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ
Last Updated 5 ಏಪ್ರಿಲ್ 2020, 12:11 IST
ಅಕ್ಷರ ಗಾತ್ರ

ದಾವಣಗೆರೆ: ಹಕ್ಕಿಜ್ವರ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮಾಂಸದ ಅಂಗಡಿಗಳು ಭಾನುವಾರ ಆರಂಭವಾಗಿದ್ದು, ಜನರು ಉತ್ಸಾಹದಿಂದ ಖರೀದಿಸಿದರು.

ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ನಿಷೇಧವನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದು, ಶನಿವಾರದಿಂದಲೇ ಮಾಂಸ ಮಾರಾಟಕ್ಕೆ ಅನುಮತಿ ನೀಡಿತ್ತು. ಭಾನುವಾರ ಬೆಳಿಗ್ಗೆ 6ಗಂಟೆಗೆ ಕೋಳಿ ಮಾಂಸವನ್ನು ಖರೀದಿಸಿದರು. ದರ ಹೆಚ್ಚಾದರೂ ಲೆಕ್ಕಿಸದೇ ತಂಡ ತಂಡವಾಗಿ ಬಂದು ಕೋಳಿ ಮಾಂಸವನ್ನು ಕೊಂಡುಕೊಂಡರು.

ಒಂದು ಕೆ.ಜಿ. ಮೇಕೆ ಮಾಂಸಕ್ಕೆ ₹700 ರಿಂದ ₹800ರವರೆಗೂ ಬೆಲೆ ಇದ್ದರೆ ಕೋಳಿ ಮಾಂಸ ಒಂದು ಕೆಜಿ ₹160ರಿಂದ ₹200ರವರೆಗೂ ಮಾರಾಟವಾಗುತ್ತಿತ್ತು. ಬೆಲೆ ಹೆಚ್ಚಾಗಿದ್ದಕ್ಕೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಕಂಡು ಬಂತು.ಮಟನ್ ಮಾರುಕಟ್ಟೆ ಸೇರಿ ವಿನೋಬ ನಗರ, ಕೆಟಿಜೆ ನಗರ, ನಿಟುವಳ್ಳಿ ಮುಂತಾದ ಬಡಾವಣೆಗಳಲ್ಲಿ ಜನರು ಗುರುತು ಮಾಡಿರುವ ಜಾಗದಲ್ಲಿ ನಿಂತು ಮಾಂಸವನ್ನು ಕೊಂಡೊಯ್ದರು.

ಸಾಮಾಜಿಕ ಅಂತರ ಕಾಯ್ದುಕೊಂಡ ಜನ

ಬೆಳಿಗ್ಗೆ ಕೆಲವು ಕಡೆ ಗುಂಪುಗೂಡಿದ್ದು ಬಿಟ್ಟರೆ ಆನಂತರ ಜನರು ಸಾಮಾಜಿಕ ಅಂತರ ಕಾಯ್ದುಕೊಂಡರು. ಕೆಲವು ಅಂಗಡಿಗಳಲ್ಲಿ ಮಾಲೀಕರು ಜನರು ಗುಂಪುಗೂಡುತ್ತಿದ್ದವರನ್ನು ಚದುರಿಸಿ ಗುರುತು ಮಾಡಿರುವ ಸ್ಥಳದಲ್ಲಿ ನಿಲ್ಲಿಸಿದರು. ಅಲ್ಲದೇ ಗ್ರಾಹಕರಿಗೆ ಸ್ಯಾನಿಟೈಸರ್ ನೀಡಿ ದೂರ ನಿಲ್ಲಿ ಎಂದು ಎಚ್ಚರಿಸಿದರು. ಗ್ರಾಹಕರು ಮಾಸ್ಕ್ ಧರಿಸಿ ಮಾಂಸವನ್ನು ಕೊಂಡೊಯ್ದರು.

ಮಧ್ಯಾಹ್ನಕ್ಕೆ ಖಾಲಿಯಾದ ಚಿಕನ್

ಮಾಂಸದ ಅಂಗಡಿಗಳಲ್ಲಿ ಕೋಳಿ ಮಾಂಸದ ಖರೀದಿ ಭರಾಟೆ ಜೋರಾಗಿದ್ದರಿಂದ ಮಧ್ಯಾಹ್ನಕ್ಕೆ ಖಾಲಿಯಾಗಿತ್ತು. ಆದರೆ ಮೇಕೆ ಮಾಂಸ ಸಂಜೆಯವರೆಗೂ ಮಾರಾಟವಾಯಿತು.

‘ಹಕ್ಕಿಜ್ವರದ ಹಿನ್ನೆಲೆಯಲ್ಲಿ ಈ ಹಿಂದೆ ಜನರು ಕೋಳಿಗಳನ್ನು ಉಚಿತವಾಗಿ ನೀಡಿದರೂ ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಮಾಮೂಲಿ ದಿನಗಳಿಗಿಂತ ಕಡಿಮೆ ಕೋಳಿಗಳನ್ನು ಖರೀದಿಸಿ ಮಾರಾಟಕ್ಕೆ ತಂದಿದ್ದೆವು. ಆದರೆ ಮಧ್ಯಾಹ್ನಕ್ಕೆ ಎಲ್ಲಾ ಮಾಂಸವೂ ಖಾಲಿಯಾಯಿತು’ ಎಂದು ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರರ ಸಂಘದ ಅಧ್ಯಕ್ಷ ಶಂಶು ತಬ್ರೇಜ್ (ಚಾರ್ಲಿ) ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT