ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರೈತರು ಉದ್ದಿಮೆದಾರರಾಗಲು ಪ್ರೋತ್ಸಾಹ ನೀಡಿ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಗ್ರಹ
Last Updated 4 ಫೆಬ್ರುವರಿ 2023, 5:55 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತರಿಗೆ ಉತ್ಪಾದನಾ ವೆಚ್ಚ ದುಬಾರಿಯಾಗುತ್ತಿದ್ದು, ಸರ್ಕಾರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬೇಕು. ರೈತರಿಗೆ ಮೌಲ್ಯವರ್ಧನ ಮಾಡುವ ಹೊಸ ಯಂತ್ರಗಳನ್ನು ನೀಡಬೇಕು. ಉದ್ದಿಮೆದಾರರಾಗಲು ಬೇಕಾದ ಸವಲತ್ತುಗಳನ್ನು ಕೊಡುವ ಮೂಲಕ ರೈತರನ್ನು ಉತ್ತೇಜಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.

ಮೈಕ್ರೋಬಿ ಫೌಂಡೇಶನ್, ಯು.ಎಸ್. ಕಮ್ಯುನಿಕೇಷನ್ ಹಾಗೂ ಡಾ.ಸಾಯಿಲ್ ದ್ರವರೂಪದ ಜೈವಿಕ ಗೊಬ್ಬರ ಪ್ರಾಯೋಜಕತ್ವದಲ್ಲಿ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಕೃಷಿ ಮೇಳವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

‘ಇಂದಿನ ದಿನಗಳಲ್ಲಿ ಎಲ್ಲಾ ಸವಲತ್ತುಗಳು ಅವರ ಮನೆಬಾಗಿಲಿಗೆ ಬರುತ್ತಿವೆ. ಯಾರೂ ಶ್ರಮವಹಿಸಿ ಕೆಲಸ ಮಾಡುತ್ತಿಲ್ಲ. ಉತ್ಪಾದನಾ ವೆಚ್ಚಗಳು ದುಬಾರಿಯಾಗುತ್ತಿರುವುದರಿಂದ ರೈತರು ಒಕ್ಕಲುತನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ವಾಮಿನಾಥನ್ ಅವರು ಹೇಳುವಂತೆ ಉತ್ಪಾದನಾ ವೆಚ್ಚದ ಶೇ 50ರಷ್ಟು ರೈತರಿಗೆ ಲಾಭ ಕೊಟ್ಟರೆ ಸಾಕು. ಯಾವುದೇ ಸಬ್ಸಿಡಿ, ಸಾಲ ಬೇಡ’ ಎಂದು ಹೇಳಿದರು.

‘ಹಳೇ ಕೃಷಿ ಪದ್ಧತಿಯಿಂದ ವಿಷಮುಕ್ತ ಆಹಾರ ತಿಂದು ನಾವು ನೆಮ್ಮದಿಯಿಂದ ಬದುಕುತ್ತಿದ್ದೆವು. ಜನರಿಗೆ ವಿಷಾಹಾರ ಹಾಕುತ್ತಿರಲಿಲ್ಲ. ಸಾಲ, ಕೀಟನಾಶಕಗಳು ಬೇಕು ಎಂದು ಅರ್ಜಿ ಹಾಕುತ್ತಿರಲಿಲ್ಲ. ಆದರೆ ಇಂದಿನ ಕಂಪನಿಗಳು ಬಿತ್ತನೆ ಬೀಜ, ರಸಗೊಬ್ಬರಗಳ ಹೆಸರಿನಲ್ಲಿ ದಾರಿ ತಪ್ಪಿಸಿದವು. ರೈತರಿಗೆ ಬ್ಯಾಂಕ್ ಸಾಲ, ಜಮಿನು ಹರಾಜು ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸರ್ಕಾರ ಮಾಡಿದವು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಹಾಲಿನಲ್ಲಿ ನೀರು‌ ಎಷ್ಟಿದೆ ಎಂದು ಡಿಕ್ರಿ ಹಾಕುತ್ತಿದ್ದಾರೆ. ಆದರೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಗುಣಮಟ್ಟ ಪರೀಕ್ಷಿಸಲು ಡಿಕ್ರಿ ಹಾಕುವ ಪದ್ಧತಿ ಇಲ್ಲ. ರೈತರಿಗೆ ಒಕ್ಕಲುತನದಿಂದ ಬೇಸತ್ತು ಕಸಗೂಡಿಸುವ ಕೆಲಸ ಸಿಕ್ಕರೆ ಸಾಕು ಅನ್ನುವಂತಾಗಿದೆ. ಆದ್ದರಿಂದ ರೈತನಿಗೆ ಸಣ್ಣ ತಂತ್ರಜ್ಞಾನ, ಯಂತ್ರ ನೀಡುವ ಮೂಲಕ ಲಾಭ ಬರುವ ಹಾಗೆ ಸರ್ಕಾರ ಮಾಡಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ‘ಕೃಷಿ ಉತ್ಪಾದಕ ಕಂಪನಿಗಳ ಮೂಲಕ ಅನುದಾನವನ್ನು ನೀಡಿ, ಜಿಲ್ಲೆಯಲ್ಲಿ 19 ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಿದ್ದು, ಪ್ರತಿ ಉತ್ಪಾದಕ ಕಂಪನಿಯಲ್ಲಿ ಒಂದು ಸಾವಿರ ಮಂದಿ ಷೇರುದಾರರು ಇದ್ದಾರೆ. ಅವರಿಗೆ ತರಬೇತಿ ನೀಡಲಾಗುತ್ತಿದೆ. ರೈತರು ಹಾಗೂ ಖರೀದಿದಾರರ ನಡುವೆ ಸಂಪರ್ಕವನ್ನು ಏರ್ಪಡಿಸಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಸಿರಿಧಾನ್ಯಗಳ ಉತ್ಪನ್ನಗಳನ್ನು ಹೆಚ್ಚಿಸಿ ಅವುಗಳ ಸಂಸ್ಕರಣಾ ಘಟಕಗಳು ನಮ್ಮಲ್ಲಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಘಟಕಗಳು ಕೈಜೋಡಿಸುತ್ತಿದ್ದು, ಖರೀದಿಗೆ ಮುಂದೆ ಬಂದಿವೆ’ ಎಂದು ಹೇಳಿದರು.

ಶಾಸಕ ಎಸ್‌.ಎ.ರವೀಂದ್ರನಾಥ್ ಮಳಿಗೆಗಳನ್ನು ಉದ್ಘಾಟಿಸಿದರು. ಯು.ಎಸ್. ಕಮ್ಯುನಿಕೇಷನ್ ಸಿಇಒ ತ್ಯಾಗರಾಜ್, ಪ್ರಾಧ್ಯಾಪಕ ಡಾ. ಹನಿಯೂರು ಚಂದ್ರು, ಮೈಕ್ರೊಬಿ ಫೌಂಡೇಷನ್ ಜಿಲ್ಲಾ ಘಟಕದ ಅಧ್ಯಕ್ಷ ರವಿ ಯೋಗರಾಜ್, ಜಿಲ್ಲಾ ಸಂಚಾಲಕ ಮಹಾದೇವಪ್ಪ ದಿದ್ದಿಗೆ, ವಲಯ ನಿರ್ದೇಶಕ ಶರಣ್ ಶಂಕರ ನಾಯ್ಡು, ಜಾನಪದ ಗಾಯಕ ಯುಗಧರ್ಮ ರಾಮಣ್ಣ, ಬಿ.ಸಿ. ವಿಶ್ವನಾಥ್ ಇದ್ದರು.

**

ವೈವಿಧ್ಯಮಯ ಸಲಕರಣೆ ಪ್ರದರ್ಶನ

ಇಲ್ಲಿನ ಕೃಷಿ ಮೇಳದಲ್ಲಿ ವೈವಿಧ್ಯಮಯ ಸಲಕರಣೆಗಳನ್ನು ಪ್ರದರ್ಶಿಸಲಾಯಿತು. ಆಹಾರದ ಉತ್ಪನ್ನಗಳಿಂದ ಸಿದ್ಧ ಆಹಾರ ತಯಾರಿಸುವುದು, ಆಯುರ್ವೇದಿಕ್‌ ಗಿಡಮೂಲಿಕೆಗಳು, ಮಣ್ಣು ಪರೀಕ್ಷೆ ಮಳಿಗೆ, ಕಡಿಮೆ ವಿದ್ಯುತ್ ಬಳಕೆಯ ಬಲ್ಬ್‌ಗಳು, ಸೋಲಾರ್ ವಿದ್ಯುತ್ ದೀಪದ ಮಳಿಗೆಗಳು, ಗೃಹೋಯೋಗಿ ಸಲಕರಣೆಗಳು, ಒಂಟಿ ಕಣ್ಣಿನ ಕಬ್ಬು ಬೆಳೆಸಿಕೊಡುವ ನಾಟಿನ ವಿಧಾನ, ಪಶು ಸಂಗೋಪನಾ ಫೀಡ್‌, ಅರಣ್ಯ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಲಿಡ್ಕರ್ ಮಳಿಗೆ, ಖಾದಿ ಉಡುಪು, ಸಿಹಿ ತಿನಿಸು, ಶ್ಯಾಮಿಗೆ, ಚರ್ಮದ ಉತ್ಪನ್ನಗಳು, ಸಾವಯವ ಕೃಷಿ ಕೃಷಿ ಉತ್ಪನ್ನ, ಬಿತ್ತನೆ ಬೀಜಗಳು, ಹಾಲು ಕರೆಯುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT