ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಅವಶ್ಯವಾದರೂ ಕನ್ನಡಕ್ಕೆ ಆದ್ಯತೆ: ಸಚಿವ ಬೈರತಿ ಬಸವರಾಜ

66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 2 ನವೆಂಬರ್ 2021, 5:46 IST
ಅಕ್ಷರ ಗಾತ್ರ

ದಾವಣಗೆರೆ: ಈಗಿನ ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್‌ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ತಾಯಿಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಮಾತೃ ಭಾಷೆ ಕನ್ನಡಕ್ಕೆ ನಮ್ಮ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು, ಸೊಬಗನ್ನು ಹೆಚ್ಚಿಸುವ ಕೆಲಸ ಇನ್ನಷ್ಟು ಆಗಬೇಕಿದೆ ಎಂದು ತಿಳಿಸಿದರು.

‘ಕರ್ನಾಟಕವೆಂದರೆ ಕೇವಲ ಗಡಿರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತ ಭಾವವಾಗಿದೆ. ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆ ಇಲ್ಲಿನ ಆಚರಣೆ ಎಲ್ಲವೂ ವಿಶ್ವಮಾನ್ಯ ಗೌರವಗಳಿಗೆ ಪಾತ್ರವಾಗಿದೆ’ ಎಂದರು.

ಇಡೀ ಜಗತ್ತನ್ನು ತತ್ತರಿಸುವಂತೆ ಮಾಡಿದ್ದ ಕೊರೊನಾ ಸದ್ಯ ಇಳಿಮುಖವಾಗುತ್ತಿದೆ. ಆದರೂ ಎಚ್ಚರಿಕೆಯಿಂದ ಇರುವುದು ಅನಿವಾರ್ಯ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪೂರ್ವ ವಲಯ ಐಜಿಪಿ ರವಿ ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎಎಸ್‍ಪಿ ಎಂ. ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಭಾಗವಹಿಸಿದ್ದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯೋತ್ಸವ ಸಮಾರಂಭಕ್ಕೂ ಮುನ್ನ, ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು, ಕನ್ನಡತಾಯಿ ಭುವನೇಶ್ವರಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರೆವಣಿಗೆಯು ಮಹಾನಗರಪಾಲಿಕೆ ಮುಂಭಾಗದಿಂದ ಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿ ಬಂತು.

14 ಶಿಕ್ಷಕರಿಗೆ ಗೌರವ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಘೋಷಿಸಿದಂತೆ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಲಾ ಏಳು ಉತ್ತಮ ಶಿಕ್ಷಕರನ್ನು ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ತಲಾ ₹ 10 ಸಾವಿರ ಬಹುಮಾನ ನೀಡಿ ಸನ್ಮಾನಿಸಿದರು.

51 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 51 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈಶ್ವರಪ್ಪ ನರಸಗೊಂಡನಹಳ್ಳಿ (ಕೀಲುಕುದುರೆ), ಎಸ್‌.ಕೆ. ಜಯಪ್ಪ (ಹಗಲುವೇಷ), ಸಿ.ಎಚ್‌. ಉಮೇಶ್ ನಾಯ್ಕ್‌ (ಜನಪದ ಸಂಗೀತ), ಡಿ.ಜಿ. ನಾಗರಾಜ್‌ ಮುದಹದಡಿ (ಭಜನೆ), ಎ.ಎಚ್‌. ವೀರಪ್ಪ (ತತ್ವಪದ), ಪರಶುರಾಮಪ್ಪ ಎನ್‌. (ಕ್ರೀಡೆ), ಅಬ್ದುಲ್‌ ಗಫರ್‌ ಎ. ಬೇತೂರು (ಕ್ರೀಡೆ), ಸುಧಾ ಎ. (ಕ್ರೀಡೆ), ವೀರೇಶ್ವರ ಪುಣ್ಯಾಶ್ರಮ ಬಾಡಾಕ್ರಾಸ್‌ (ಸಂಘ–ಸಂಸ್ಥೆ), ರಾಮಾಚಾರಿ (ಡ್ರಾಮಾ ಸೀನ್ಸ್‌), ಎ.ಬಿ. ರಾಮಚಂದ್ರಪ್ಪ (ಶಿಕ್ಷಣ), ಅನಿತಾ ದೊಡ್ಡಗೌಡರ್‌ (ಶಿಕ್ಷಣ), ಜಯಲಕ್ಷ್ಮೀ ಹೆಗಡೆ (ರಂಗಭೂಮಿ), ಸಿ.ವಿ. ನಾಗೇಶ್‌ ಚದುರಗೊಳ್ಳ (ರಂಗಭೂಮಿ), ವೀರಪ್ಪ ಅಂದಲಗಿ (ರಂಗಭೂಮಿ), ಡಾ.ಎನ್‌.ಎಸ್‌. ವೆಂಕಟರಾಮಾಂಜನೇಯ (ಕೃಷಿ), ದ್ಯಾಮಣ್ಣ ಹಾಲವರ್ತಿ (ಕೃಷಿ), ರೇಖಾ ದೊಡ್ಡ ಓಬಜ್ಜಿಹಳ್ಳಿ (ಕೃಷಿ), ಡಾ. ಎಂ.ಕೆ. ಗಿರೀಶ್‌ ಕುಮಾರ್‌ (ಶಿಲ್ಪಕಲೆ), ಉಷಾರಾಣಿ (ಚಿತ್ರಕಲೆ), ಎ.ಷಣ್ಮುಖಾಚಾರ್ಯ (ಶಿಲ್ಪಕಲೆ), ರಜನಿ ಕುಲಕರ್ಣಿ (ನೃತ್ಯ), ಗೀತಾ ಮಾಲತೇಶ್‌ (ಸಂಗೀತ), ಎಂ.ಎನ್‌. ಮಾರ್ತಾಂಡಪ್ಪ (ಭಜನೆ).

ಸೀತಾ ನಾರಾಯಣ (ಸಾಹಿತ್ಯ), ಡಾ. ಎಸ್‌.ಎಚ್‌. ವಿನಯಕುಮಾರ್‌ ಸಾಹುಕಾರ್‌ (ಸಾಹಿತ್ಯ), ಚೈತ್ರಾ ಎಸ್‌. (ಸಮಾಜ ಸೇವೆ), ಮಂಜುಳಾ ಬಸವಲಿಂಗಪ್ಪ (ಸಮಾಜ ಸೇವೆ), ಆರ್‌.ಎಸ್‌. ತಿಪ್ಪೇಸ್ವಾಮಿ (ಸಮಾಜಸೇವೆ), ಎ.ಆರ್‌. ವೀರಭದ್ರಪ್ಪ (ಸಮಾಜಸೇವೆ), ಟಿ.ಎಂ. ಶಿವಯೋಗಿಸ್ವಾಮಿ (ಕನ್ನಡಪರ ಹೋರಾಟ), ಬಸಮ್ಮ (ಕನ್ನಡ ಪರ ಹೋರಾಟ), ಟಾರ್ಗೆಟ್‌ ಅಸ್ಲಂ (ಕನ್ನಡ ಪರ ಹೋರಾಟ), ಮಂಜುನಾಥ ಗೌರಕ್ಕನವರ್‌ (ಪತ್ರಿಕೋದ್ಯಮ), ಮಹಮ್ಮದ್‌ ರಫೀಕ್‌ (ಪತ್ರಿಕಾ ಛಾಯಾಗ್ರಾಹಕ), ಎ.ಪಿ. ಸಂಜಯ್‌ (ಪತ್ರಿಕೊದ್ಯಮ), ಎ.ಎನ್‌. ಕೃಷ್ಣಮೂರ್ತಿ (ಪತ್ರಿಕಾ ವಿತರಕ), ದಿಳ್ಯಪ್ಪ (ಸಂಕೀರ್ಣ), ಸುಬ್ರಹ್ಮಣ್ಯ ನಾಡಿಗೇರ್‌ (ಸಂಕೀರ್ಣ), ಕೆ.ಎಚ್‌. ಮೆಹಬೂಬ್‌ (ಸಂಕೀರ್ಣ), ಶಂಭುಲಿಂಗಪ್ಪ ಬಸವನಾಳ್‌ (ನವೋದ್ಯಮ), ನಾಗನಗೌಡ ಮಲಕಾಜಿ (ನವೋದ್ಯಮ), ತಂಬೂರಿ ಉಮಾನಾಯ್ಕ (ತಂಬೂರಿ), ರಾಜು ಹಿರೇಮಠ (ತಬಲಾವಾದನ), ಎ.ಡಿ. ತಿಪ್ಪೇಸ್ವಾಮಿ (ಬಯಲಾಟ), ಡಾ.ಶಾಂತಾಭಟ್‌ (ಪರಿಸರ), ಡಾ.ಎ.ಎಂ. ಶಿವಕುಮಾರ್‌ (ವೈದ್ಯಕೀಯ), ಡಾ.ಎಸ್‌.ಬಿ. ಮುರುಗೇಶ್‌ (ವೈದ್ಯಕೀಯ), ಡಾ. ಪ್ರಸಾದ್ ಬಂಗೇರ (ಸಮಾಜಸೇವೆ), ಎಸ್‌. ಹನುಮಂತಪ್ಪ ಹಾಲಿವಾಣ (ಪತ್ರಿಕೋದ್ಯಮ).

ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಚೈತ್ರಾಗೆ ಸಂದ ಗೌರವ

ಲಿಂಗತ್ವ ಅಲ್ಪಸಂಖ್ಯಾತರಾಗಿದ್ದುಕೊಂಡು ತನ್ನ ಸಮುದಾಯದ ಅಭಿವೃದ್ಧಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ, ಅಭಯಸ್ಪಂದನ ಸಂಸ್ಥೆಯ ಅಧ್ಯಕ್ಷರಾಗಿರುವ ಚೈತ್ರಾ ಎಸ್‌. ಅವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಸಮಾಜಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಈ ಪ್ರಶಸ್ತಿಯನ್ನು ನೀಡಿದೆ.

ಅವರಿಗೆ ಪ್ರಶಸ್ತಿ ಪ್ರದಾನ ಆದ ಕೂಡಲೇ ಸಮುದಾಯದವರು ಬಂದು ಅಭಿನಂದಿಸಿ ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT